ಬೆಂಗಳೂರಿನ ರಸ್ತೆಗುಂಡಿ, ಟ್ರಾಫಿಕ್ ಮುಂತಾದ ಸಮಸ್ಯೆಗಳ ಕುರಿತು ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಮತ್ತು ಸಚಿವರಾದ ಡಿ.ಕೆ. ಶಿವಕುಮಾರ್, ಪ್ರಿಯಾಂಕ್ ಖರ್ಗೆ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. 

ಬೆಂಗಳೂರು ನಗರದ ರಸ್ತೆಗುಂಡಿ, ಟ್ರಾಫಿಕ್ ದಟ್ಟಣೆ, ಕಸದ ಸಮಸ್ಯೆ ಬಗ್ಗೆ ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರುಗಳ ಮಧ್ಯೆ ಮಾತಿನ ಚಕಮಕಿ ಮುಂದುವರೆದಿದೆ. ಸರ್ಕಾರ ಮತ್ತು ಉದ್ಯಮಿಗಳ ನಡುವೆ ಮುಂದುವರೆದ ಟ್ವೀಟ್ ವಾರ್ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಮೋಹನ್ ದಾಸ್ ಪೈ ಮತ್ತು ಕಿರಣ್ ಮಜುಂದಾರ್ ಬೆಂಗಳೂರಿಗೆ ಅವರದ್ದೇ ಆದ ಕೊಡುಗೆ ಕೊಟ್ಟಿದ್ದಾರೆ. ಸರ್ಕಾರ ಯಾವುದೇ ಇದ್ರು ಟಾಸ್ಕ್ ಫೋರ್ಸ್ ಕಮಿಟಿಯಲ್ಲಿ ಇರ್ತಾರೆ. ಅವರಿಗೆ ಎಲ್ಲವೂ ಗೊತ್ತಿದೆ. ಎಲ್ಲ ಮಂತ್ರಿಗಳು ಅವರಿಗೆ ಪರಿಚಯ ಇದ್ದಾರೆ. ಎಲ್ಲರೂ ಅವರನ್ನ ಗೌರವಿಸುತ್ತಾರೆ. ಬೆಂಗಳೂರನ್ನ ಜಾಗತಿಕ ಮಟ್ಟಕ್ಕೆ ತೆಗೆದುಕೊಂಡ ಹೋಗಲು ಅವರದ್ದು ಒಂದು ಕೊಡುಗೆ ಇದೆ.

ಉದ್ಯಮಿಗಳಿಿಗೆ ಮುಂಬೈಯಲ್ಲಿ ಇಷ್ಟು ಫ್ರೀಡಂ ಇದೆಯಾ?

ಹಾಗಿದ್ರೆ ಸರ್ಕಾರದ ಕೊಡುಗೆ ಇಲ್ವ? ನಮ್ಮ ನೀತಿ, ಯೋಜನೆಗಳು ಇರಲಿಲ್ಲ ಅಂದ್ರೆ ಎಲ್ಲರೂ ಬೆಳೆಯಲು ಸಾಧ್ಯವಾಗ್ತಿತ್ತಾ? ಅವರು ಸಂಸ್ಥೆ ನಡೆಸ್ತಾರೆ, ಪ್ರಾರಂಭದಲ್ಲಿ ಇಷ್ಟು ದೊಡ್ಡ ಸಂಸ್ಥೆ ಇತ್ತಾ? ಹಂತ ಹಂತವಾಗಿ ಬೆಳೆದು ವಿಶ್ವಮಟ್ಟದಲ್ಲಿದ್ದಾರೆ. ಹುಟ್ಟುತ್ತಲೇ ನಡೆಯಲು ಪ್ರಾರಂಭಿಸಿದ್ರಾ. ಹಾಗಾಗಿ ಕೆಲವನ್ನ ಸರಿ ಮಾಡಿಕೊಂಡು ಹೋಗುತ್ತೇವೆ. ಅನುಕೂಲವಾಗುವ ಟೀಕೆ ಮಾಡಲಿ ನಾವು ವೆಲ್ಕಮ್ ಮಾಡುತ್ತೇವೆ. ಸಮಸ್ಯೆಗೆ ಪರಿಹಾರ ಕೊಟ್ರೆ ನಾವು ಅಳವಡಿಸಿಕೊಳ್ಳುತ್ತೇವೆ. ನನ್ನದು ಒಂದೇ ಪ್ರಶ್ನೆ ಬ್ಯುಸಿನೆಸ್ ಮ್ಯಾನ್ ಗಳಿಗೆ ಮುಂಬೈಯಲ್ಲಿ ಇಷ್ಟು ಫ್ರೀಡಂ ಇದೆಯಾ? ಅಲ್ಲಿ ದೊಡ್ಡ ಸೇತುವೆ ಕಟ್ಟಿದ್ರು. ಆದ್ರಿಂದ ಟ್ರಾಫಿಕ್ ಜಾಮ್ ಆಗ್ತಿದೆ ಆದ್ರಿಂದ ಮತ್ತೆ ಟನಲ್ ರೋಡ್ ಮಾಡ್ತಿದ್ದಾರೆ. ಇಲ್ಲಿ ಟನಲ್ ರೋಡ್ ಬಗ್ಗೆ ಎಲ್ಲರಿಗೂ ಓಪಿನಿಯನ್ ಇದೆ. ಅಲ್ಲಿ ಎಲ್ಲರೂ ಸುಮ್ನೆ ಇದ್ದಾರೆ.

ಡೆಲ್ಲಿಯಲ್ಲಿರುವ ಟ್ರಾಫಿಕ್ ಜಾಮ್ ಮತ್ತೆ ಪಲ್ಯೂಶನ್ ಬಗ್ಗೆ ಮಾತನಾಡ್ತಾರಾ? ಚೆನ್ನೈ, ಕೇರಳದ ತಿರುವನಂತಪುರ ಎಲ್ಲ ಕಡೆ ಸಮಸ್ಯೆ ಇದೆ ಇಲ್ಲ ಅಂತ ಹೇಳ್ತಿಲ್ಲ. ಸಹಭಾಗಿತ್ವದಲ್ಲಿ ಎಲ್ಲರೂ ಸಮಸ್ಯೆಗಳ ಬಗೆಹರಿಸಬೇಕು. ಅವರ ಎಕ್ಸ್ಪೆಕ್ಟೇಷನ್ ಏನಂದ್ರೆ ಕಾಂಗ್ರೆಸ್ ಸರ್ಕಾರ ಸಮಸ್ಯೆ ಬಗೆಹರಿಸುತ್ತೆ ಅನ್ನೋದು. ಹಿಂದಿನ ಸರ್ಕಾರಗಳಲ್ಲಿ ಇವರು ಇಷ್ಟು ಆಕ್ಟೀವ್ ಆಗಿ ಇರಲಿಲ್ಲ. ಇದು ನಮ್ಮ ರೆಸ್ಪಾನ್ಸಿಬಿಲಿಟಿ ನಾವು ಮಾಡುತ್ತೇವೆ. ನೀವು ನಮ್ಮ ರಾಜ್ಯಕ್ಕೆ ಒಂದು ಬ್ರಾಂಡ್ ಅಂಬಾಸಿಡರ್, ನಿಮ್ಮ ಮಾತನ್ನ ಸರ್ಕಾರ ಮತ್ತು ಬಂಡವಾಳ ಹೂಡಿಕೆದಾರರು ಸಿರಿಯಸ್ ಆಗಿ ತೆಗೆದುಕೊಳ್ತಾರೆ. 15% ಆಂಧ್ರಪ್ರದೇಶದವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಏನೇ ನ್ಯೂನ್ಯತೆ ಇದ್ರು ಹೇಗೆ ನಿವಾರಣೆ ಮಾಡಿಕೊಂಡು ಯಾವ ರೀತಿ ಹೋಗಬೇಕು ಅಂತ ನೋಡಬೇಕು. ಅದನ್ನು ಬಿಟ್ಟು ದಿನ ಬೆಳಿಗ್ಗೆ ಎದ್ದು ಕ್ರಿಟಿಸೈಸ್ ಮಾಡಿದ್ರೆ, ನಿಮ್ಮ ಮಾತಿಗೂ ಬೆಲೆ ಕೊಡೋದು ನಿಲ್ಲಿಬೇಕಾಗುತ್ತೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಡಿಕೆಶಿಗೆ ಉದ್ಯಮಿ ಕಿರಣ್ ತಿರುಗೇಟು

ನಗರದ ರಸ್ತೆಗಳಲ್ಲಿ ಹೆಚ್ಚುತ್ತಿರುವ ಗುಂಡಿಗಳು ಮತ್ತು ಮೂಲಭೂತ ಸೌಕರ್ಯಗಳ ಕೊರತೆಯನ್ನು ಕುರಿತು ಉದ್ಯಮಿ ಕಿರಣ್ ಮಜೂಂದಾರ್ ಶಾ ಅವರು ಟ್ವಿಟರ್ (X) ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಕಿಡಿಕಾರಿರುವ ಹಿನ್ನೆಲೆಯಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅವರ ಟೀಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕಿರಣ್ ಮಜೂಂದಾರ್ ಶಾ ಅವರ ಈ ಹೇಳಿಕೆಗಳ ಹಿಂದೆ ವೈಯಕ್ತಿಕ ಅಜೆಂಡಾ ಇರಬಹುದು. ಬಿಜೆಪಿ ಆಡಳಿತಾವಧಿಯಲ್ಲಿ ಅವರು ಈ ರೀತಿಯಾಗಿ ಸಾರ್ವಜನಿಕವಾಗಿ ಬಾಯಿತೆರೆಯಲಿಲ್ಲ. ಈಗ ಟೀಕೆ ಮಾಡುತ್ತಿರುವುದು ಆಶ್ಚರ್ಯಕರ ಎಂದಿದ್ದರು

ಈ ಆರೋಪಗಳಿಗೆ ತಕ್ಷಣ ಪ್ರತಿಕ್ರಿಯಿಸಿದ ಕಿರಣ್ ಮಜೂಂದಾರ್ ಶಾ ಅವರು, ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.ಡಿ.ಕೆ. ಶಿವಕುಮಾರ್ ಅವರ ಮಾತು ಸಂಪೂರ್ಣ ಸತ್ಯವಲ್ಲ. ನಾನು ಮತ್ತು ಪೈ ಇಬ್ಬರೂ ಕೂಡ ಕಳೆದ ಹಲವು ವರ್ಷಗಳಿಂದ ಮೂಲಸೌಕರ್ಯಗಳ ಬಗ್ಗೆ ನಿರಂತರವಾಗಿ ಟೀಕಿಸುತ್ತಿದ್ದೇವೆ. ಅದು ಬಿಜೆಪಿ ಆಡಳಿತವಾಗಿದ್ದಾಗಲೂ, ಈಗಲೂ ಒಂದೇ ರೀತಿಯಾಗಿದೆ. ಈ ಟೀಕೆಯಲ್ಲಿ ಯಾವುದೇ ವೈಯಕ್ತಿಕ ಅಜೆಂಡಾ ಇಲ್ಲ, ಎಂದು ಅವರು ತಿಳಿಸಿದ್ದಾರೆ. ಜೊತೆಗೆ ನಗರದ ರಸ್ತೆಗಳ ಸ್ಥಿತಿ ಮತ್ತು ನಾಗರಿಕ ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡುವುದು ನಾಗರಿಕರ ಹಕ್ಕು ಮತ್ತು ಕರ್ತವ್ಯ ಎಂದು ಹೇಳಿದ್ದಾರೆ.