ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಅವರ ಸ್ಥಾನ ತುಂಬುವ ಶಕ್ತಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗಿದೆ ಎಂದು ಸಿಎಂ ಪುತ್ರರೂ ಆಗಿರುವ ಎಂಎಲ್‌ಸಿ ಡಾ। ಯತೀಂದ್ರ ಹೇಳಿಕೆ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಕಾಂಗ್ರೆಸ್‌ನಲ್ಲಿ ಪರ- ವಿರೋಧ ಹೇಳಿಕೆಗಳು ಮುಂದುವರಿದಿವೆ.

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಅವರ ಸ್ಥಾನ ತುಂಬುವ ಶಕ್ತಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗಿದೆ ಎಂದು ಸಿಎಂ ಪುತ್ರರೂ ಆಗಿರುವ ಎಂಎಲ್‌ಸಿ ಡಾ। ಯತೀಂದ್ರ ಹೇಳಿಕೆ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಕಾಂಗ್ರೆಸ್‌ನಲ್ಲಿ ಪರ- ವಿರೋಧ ಹೇಳಿಕೆಗಳು ಮುಂದುವರಿದಿವೆ.

ಯತೀಂದ್ರ ಹೇಳಿದ್ದು ಸಿಎಂ ಕುರಿತು ಅಲ್ಲ, ಸೈದ್ಧಾಂತಿಕ ಉತ್ತರಾಧಿಕಾರಿ ಬಗ್ಗೆ: ಸಿದ್ದು--

ಬೆಂಗಳೂರು : ‘ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಇಂಥವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಲ್ಲ. ಸೈದ್ಧಾಂತಿಕವಾಗಿ ಮಾತ್ರ ಮಾತನಾಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥನೆ ನೀಡಿದ್ದಾರೆ.

‘ನಮ್ಮ ತಂದೆ ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಅವರಂತೆ ಪ್ರಗತಿಪರ ಚಿಂತನೆ ಉಳ್ಳವರಿಗೆ ಸೈದ್ಧಾಂತಿಕವಾಗಿ ಮಾರ್ಗದರ್ಶನ ನೀಡಲು, ಮುನ್ನಡೆಸಲು ಒಬ್ಬ ನಾಯಕನ ಅಗತ್ಯವಿದೆ. ಈ ಜವಾಬ್ದಾರಿ ತೆಗೆದುಕೊಳ್ಳಲು ಸಚಿವ ಸತೀಶ್ ಜಾರಕಿಹೊಳಿ ಸಮರ್ಥರು’ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದರು. ಇದು ಕಾಂಗ್ರೆಸ್‌ನಲ್ಲೇ ತೀವ್ರ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಹೇಳಿಕೆ ಬಗ್ಗೆ ಯತೀಂದ್ರ ಬಳಿಯೇ ನೀನು ಏನಂಥ ಹೇಳಿದ್ದೀಯಾ ಎಂದು ಕೇಳಿದ್ದೇನೆ. ನಾನು ಸೈದ್ಧಾಂತಿಕವಾಗಿ ಮಾತ್ರ ಮಾತನಾಡಿದ್ದೇನೆ. ಇಂತಹವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಲ್ಲ ಎಂದಿದ್ದಾರೆ’ ಎಂದು ಹೇಳಿದರು.

‘ಯಾರೋ ನಿಮ್ಮಂತೆ (ಮಾಧ್ಯಮದವರು) ಕೇಳಿರುತ್ತಾರೆ. ಅದಕ್ಕೆ ಈ ರೀತಿ ಹೇಳಿದ್ದಾರೆ ಅಷ್ಟೇ? ಮಾತನಾಡಲ್ಲ ಅಂದ್ರೂ ಏನೋ ಕೇಳಿರುತ್ತೀರಿ ನೀವು (ಮಾಧ್ಯಮದವರು)’ ಎಂದು ಇದೇ ವೇಳೆ ಸಿದ್ದರಾಮಯ್ಯ ತಿಳಿಸಿದರು.

ಯತೀಂದ್ರ ಅವರು ಈ ಹೇಳಿಕೆ ನೀಡಿದ್ದು ಸುದ್ದಿಗಾರರ ಪ್ರಶ್ನೆಗೆ ಮಾರುತ್ತರವಾಗಿ ಅಲ್ಲ. ಬದಲಾಗಿ, ಬಹಿರಂಗ ಸಮಾವೇಶದಲ್ಲಿ ಎಂಬ ಪತ್ರಕರ್ತರ ಸ್ಪಷ್ಟನೆಗೆ, ‘ನೀವ್ಯಾರೂ ಕೇಳಿಲ್ಲ. ಅಲ್ಲಿ ಯಾರಾದರೂ ಕೇಳಿರಬಹುದು. ಅದಕ್ಕೆ ಈ ರೀತಿ ಹೇಳಿದ್ದಾರೆ ಅಷ್ಟೇ’ ಎಂದು ಸಿಎಂ ಹೇಳಿದರು.

ಯಾರ ಬಳಿ ಮಾತಾಡ್ಬೇಕೋ ಅಲ್ಲೇ ನಾನು ಮಾತಾಡ್ತೀನಿ: ಡಿಸಿಎಂ ಡಿಕೆ ಮಾರ್ಮಿಕ ನುಡಿ

ಬೆಂಗಳೂರು : ನಾಯಕತ್ವ ವಿಚಾರವಾಗಿ ನೀಡಲಾಗುತ್ತಿರುವ ಹೇಳಿಕೆ ಕುರಿತು ಯಾರ ಬಳಿ (ಹೈಕಮಾಂಡ್‌) ಮಾತನಾಡಬೇಕೋ ಅವರ ಬಳಿಯೇ ಮಾತನಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾರ್ಮಿಕವಾಗಿ ತಿಳಿಸಿದ್ದಾರೆ.

ಸಿದ್ದರಾಮಯ್ಯರಂತೆಯೇ ಪ್ರಗತಿಪರ ಚಿಂತನೆ ಉಳ್ಳವರಿಗೆ ಸೈದ್ಧಾಂತಿಕವಾಗಿ ಮಾರ್ಗದರ್ಶನ ನೀಡಲು, ಮುನ್ನಡೆಸಲು ಒಬ್ಬ ನಾಯಕನ ಅಗತ್ಯವಿದೆ. ಈ ಜವಾಬ್ದಾರಿ ತೆಗೆದುಕೊಳ್ಳಲು ಸತೀಶ್ ಜಾರಕಿಹೊಳಿ ಸಮರ್ಥರು ಎಂಬ ಶಾಸಕ ಯತೀಂದ್ರ ಹೇಳಿಕೆ ವಿಚಾರವಾಗಿ ಅವರು ಈ ಪ್ರತಿಕ್ರಿಯೆ ನೀಡಿದರು.ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿಸ್ತಿಗೆ ನಮ್ಮ ಪಕ್ಷದಲ್ಲಿ ಮೊದಲ ಆದ್ಯತೆ. ಅದನ್ನು ಎಲ್ಲರೂ ಕಾಪಾಡಬೇಕು. ಇನ್ನು, ನಾಯಕತ್ವ ವಿಚಾರವಾಗಿ ನೀಡುತ್ತಿರುವ ಹೇಳಿಕೆಗಳ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಅದನ್ನು ಯಾರ ಬಳಿ ಚರ್ಚೆ ಮಾಡಬೇಕೋ ಅವರ ಬಳಿ ಮಾತನಾಡುತ್ತೇನೆ ಎಂದರು.

ಯಾರೋ ಹೇಳಿದ್ದಕ್ಕೆಲ್ಲ ಬೆಲೆ ಇಲ್ಲ: ಯತೀಂದ್ರ ಹೇಳಿಕೆಗೆ ಡಿಕೆ ಆಪ್ತ ಶಾಸಕರ ಟಾಂಗ್‌

ಬೆಂಗಳೂರು/ ಮಂಡ್ಯ ವಿಧಾನಪರಿಷತ್‌ ಸದಸ್ಯ, ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ನೀಡಿದ ಹೇಳಿದ ‘ಸತೀಶ್‌ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಸೈದ್ಧಾಂತಿಕ ಉತ್ತರಾಧಿಕಾರಿ’ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬೆಂಬಲಿಗ ಶಾಸಕರು ಬೇರೆ ರೂಪದಲ್ಲಿ ಟಾಂಗ್‌ ಕೊಟ್ಟಿದ್ದಾರೆ.

ಯಾರೋ ಹೇಳಿದ ಮಾತಿಗೆ ಬೆಲೆ ಬರುವುದಿಲ್ಲ. ವೈಯಕ್ತಿಕವಾಗಿ ಮಾತನಾಡಿದ್ದನ್ನೆಲ್ಲಾ ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ ಎಂದು ಮದ್ದೂರು ಶಾಸಕ ಕದಲೂರು ಉದಯ್‌ ಪ್ರತಿಕ್ರಿಯಿಸಿದ್ದರೆ, ಕುಣಿಗಲ್‌ ಶಾಸಕ ಡಾ। ರಂಗನಾಥ್‌, ನಾವು ಶಿಸ್ತಿನಿಂದ ಇದ್ದರೆ ಬೇರೆಯವರೂ ಶಿಸ್ತಿನಿಂದ ಇರುತ್ತಾರೆ ಎಂದಿದ್ದಾರೆ. ಈ ಮೂಲಕ ಯತೀಂದ್ರ ಹೇಳಿಕೆಗೆ ಮಾರುತ್ತರ ನೀಡಿದ್ದಾರೆ.ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉದಯ್, ತೆವಲಿಗೆ, ತೀಟೆಗೆ ಮಾತನಾಡಿದ್ದನ್ನೆಲ್ಲಾ ಗಣನೆಗೆ ತೆಗೆದುಕೊಳ್ಳಲಾಗದು. ಪಕ್ಷದ ಹೈಕಮಾಂಡ್ ಹೇಳಿದರಷ್ಟೇ ಅದಕ್ಕೆ ಬೆಲೆ ಇರುತ್ತದೆ. ಅದಕ್ಕೆ ನಾವೂ ಬದ್ಧರಾಗಿರುತ್ತೇವೆ. ಸಿದ್ದರಾಮಯ್ಯ ಬೇಡವೆಂದು ಯಾರಾದರೂ ಹೇಳಿದ್ದಾರಾ? ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದು, ಅವರ ನಾಯಕತ್ವ ಬೇಡ ಎಂಬ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯನವರು ನಮಗಿಂತ ಗಟ್ಟಿಯಾಗಿದ್ದಾರೆ. ಶಕ್ತಿಯುತವಾಗಿದ್ದಾರೆ. ಅವರ ಅವಶ್ಯಕತೆ ಈ ರಾಜ್ಯಕ್ಕಿದೆ. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯನವರು ವೈಯಕ್ತಿಕವಾಗಿ ಹೇಳಿಕೆ ಕೊಟ್ಟಿದ್ದಾರೆ ಅಷ್ಟೇ. ಅದು ಪಕ್ಷದ ನಿರ್ಧಾರ ಅಲ್ಲ ಎಂದು ಸ್ಪಷ್ಟಪಡಿಸಿದರು.

ಡಿಕೆಶಿ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ನವೆಂಬರ್‌ನದು ಹೈಕಮಾಂಡ್ ನಿರ್ಧಾರ. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು.ಯತೀಂದ್ರ ಹೇಳಿಕೆ ವಿಚಾರವಾಗಿ ನೋಟಿಸ್ ಕೊಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಬೇಕಾದಷ್ಟು ಜನ ಬರುತ್ತಾರೆ, ಹೋಗುತ್ತಾರೆ. ಕೆಲವರು ಅಭಿಮಾನ ವ್ಯಕ್ತಪಡಿಸುತ್ತಾರೆ ಅಷ್ಟೇ. ಅದು ತಪ್ಪಲ್ಲ. ನಮ್ಮ ಅಭಿಮಾನ ಪಕ್ಷದ ಮೇಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಇದ್ದೇವೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ನನ್ನದು ಪಕ್ಷದ ಮೇಲಿನ ಅಭಿಮಾನ ಎಂದು ನುಡಿದರು.

ಗೊಂದಲ ಹೇಳಿಕೆ ಬೇಡ- ರಂಗನಾಥ್‌:

ಗೊಂದಲ ಸೃಷ್ಟಿಸುವಂತಹ ಹೇಳಿಕೆಗಳು ಕಾಂಗ್ರೆಸ್‌ ಪಕ್ಷಕ್ಕೆ ತರವಲ್ಲ. ಪಕ್ಷದ ಹೈಕಮಾಂಡ್‌ ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದೆ. ಪಕ್ಷದಲ್ಲಿ ನಾವು ಶಿಸ್ತಿನಿಂದ ಇದ್ದರೆ ಬೇರೆಯವರೂ ಶಿಸ್ತಿನಲ್ಲಿರುತ್ತಾರೆ ಎಂದು ಶಾಸಕ ಡಾ। ರಂಗನಾಥ್‌ ಹೇಳಿದರು.ಸಿದ್ದರಾಮಯ್ಯ ಬಳಿಕ ಸತೀಶ್‌ ಜಾರಕಿಹೊಳಿ ಅವರಿಗೆ ನಾಯಕತ್ವ ಎಂದು ವಿಧಾನಪರಿಷತ್‌ ಸದಸ್ಯ ಯತೀಂದ್ರ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಡಾ। ರಂಗನಾಥ್‌, ನಾವು ಜನರ ಜತೆಯಲ್ಲಿದ್ದು ಸೇವೆ ಮಾಡಬೇಕು. ಅದನ್ನು ಬಿಟ್ಟು ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ನೀಡುವುದು ಕಾಂಗ್ರೆಸ್‌ಗೆ ತರವಲ್ಲ.

ನಾವು ಯಾವತ್ತೂ ಪಕ್ಷದೊಳಗೆ ಗೊಂದಲ ಉಂಟು ಮಾಡುವ ಹೇಳಿಕೆ ನೀಡಬಾರದು. ಎಲ್ಲವನ್ನೂ ಕಾಂಗ್ರೆಸ್‌ ಹೈಕಮಾಂಡ್ ಸೂಕ್ಷ್ಮವಾಗಿ ನೋಡುತ್ತಿರುತ್ತದೆ. 2028ಕ್ಕೆ ಪಕ್ಷವನ್ನು ಮತ್ತೆ ಅಧಿಕಾರ ತರುವತ್ತ ನಾವು ದೃಷ್ಟಿಯಿಡಬೇಕು ಎಂದು ಹೇಳಿದರು.ಎಲ್ಲರ ಹೇಳಿಕೆಗಳಿಗೂ ನಾವು ಪ್ರತಿಕ್ರಿಯಿಸಬಾರದು. ಹೈಕಮಾಂಡ್‌ ಎಲ್ಲವನ್ನೂ ನಿರ್ಧರಿಸುತ್ತದೆ. ನಾವು ಮಾತನಾಡಿದರೆ ಚಿಕ್ಕವರಾಗುತ್ತೇವೆ. ಇನ್ನು, ಡಿ.ಕೆ. ಶಿವಕುಮಾರ್‌ ಒಂದಲ್ಲ ಒಂದು ದಿನ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದೆ. ಆದರೆ, ಮುಖ್ಯಮಂತ್ರಿಯಾಗಬೇಕೋ ಅಥವಾ ಬೇಡವೇ ಎನ್ನುವುದು ಪಕ್ಷ ನಿರ್ಧರಿಸುತ್ತದೆ. ಡಿ.ಕೆ. ಶಿವಕುಮಾರ್‌ ಅವರು ಪಕ್ಷದ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ.

ಸದ್ಯ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ. ಸಿಎಂ ಆಗಿ ಸಿದ್ದರಾಮಯ್ಯ ಅವರು ಸರ್ಕಾರ ನಿರ್ವಹಣೆ ಚೆನ್ನಾಗಿ ಮಾಡುತ್ತಿದ್ದಾರೆ. ಶಾಸಕರು ಸಂತೋಷದಿಂದ ಇದ್ದಾರೆ. ನಾವು ಅದರ ಬಗ್ಗೆ ಚಿಂತನೆ ಮಾಡುವುದಕ್ಕಿಂತ ನಮ್ಮ ಕೆಲಸ ಏನಿದೆ ಅದನ್ನು ಮಾಡುವುದು ಸೂಕ್ತ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವನ್ನು ಶಿರಸಾವಹಿಸಿ ಪಾಲಿಸುತ್ತೇವೆ ಎಂದರು.ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವತ್ತ ಹೆಚ್ಚಿನ ಗಮನಹರಿಸಬೇಕು. ಎಲ್ಲರೂ ಪಕ್ಷದ ಶಿಸ್ತನ್ನು ಪಾಲಿಸಬೇಕು. ಶಾಸಕರಾಗಿ ಜವಾಬ್ದಾರಿ ಪೂರ್ಣಗೊಳಿಸಬೇಕು. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇನ್ನು ಮುಂದೆಯಾದರೂ ಗೊಂದಲದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕುರಿತು ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರು ಪ್ರತಿಪಾದಿಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ವ್ಯವಸ್ಥೆಗೆ ಯಾರೂ ಅನಿವಾರ್ಯ ಅಲ್ಲ: ಸಿದ್ದು ಆಪ್ತ ಮಹದೇವಪ್ಪ ನಿಗೂಢ ಹೇಳಿಕೆ-

ಬೆಂಗಳೂರು : ‘ಕಾಂಗ್ರೆಸ್ ವ್ಯವಸ್ಥೆಗೆ ಯಾರೂ ಅನಿವಾರ್ಯವಲ್ಲ. ಇಂದಿರಾಗಾಂಧಿ ಅವರು ಹೋದಾಗ ಏನಪ್ಪ ಮಾಡೋದು ಎನ್ನುತ್ತಿದ್ದರು. ಬಳಿಕ ಹಲವರು ಹುಟ್ಟಿಕೊಂಡರು. ಹೀಗಾಗಿ ಇಲ್ಲಿ ಯಾರೂ ಅನಿವಾರ್ಯವಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ನಿಗೂಢ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ, ‘ನನ್ನ ಹೇಳಿಕೆಯನ್ನು ನೀವೇ ವಿಶ್ಲೇಷಣೆ ಮಾಡಿ. ಮಹದೇವಪ್ಪ ಯಾಕೆ ಈ ರೀತಿ ಹೇಳಿದರು ಎಂದು ವಿಶ್ಲೇಷಿಸಿ’ ಎಂದು ಸೂಚ್ಯವಾಗಿ ಹೇಳಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಯಾರನ್ನು ಗುರಿಯಾಗಿಸಿ ಈ ಹೇಳಿಕೆ ನೀಡಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಅವರಂತೆಯೇ ಪ್ರಗತಿಪರ ಚಿಂತನೆ ಉಳ್ಳವರಿಗೆ ಸೈದ್ಧಾಂತಿಕವಾಗಿ ಮಾರ್ಗದರ್ಶನ ನೀಡಲು, ಮುನ್ನಡೆಸಲು ಒಬ್ಬ ನಾಯಕನ ಅಗತ್ಯವಿದೆ. ಈ ಜವಾಬ್ದಾರಿ ತೆಗೆದುಕೊಳ್ಳಲು ಸತೀಶ್ ಜಾರಕಿಹೊಳಿ ಸಮರ್ಥರು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದರು.

ಈ ಬಗ್ಗೆ ಅನಿರೀಕ್ಷಿತ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಆಪ್ತ ಸಚಿವ ಮಹದೇವಪ್ಪ, ‘ಸಿದ್ಧಾಂತ ಇರುವವರೇ ಇಲ್ಲಿ ಹೇಳಿರುವುದು. ಕಾಂಗ್ರೆಸ್‌ ಎಂದರೇ ಸೈದ್ಧಾಂತಿಕ ಪಕ್ಷ. ಇಲ್ಲಿನ ವ್ಯವಸ್ಥೆಗೆ ಯಾರೂ ಅನಿವಾರ್ಯವಲ್ಲ’ ಎಂದು ಹೇಳಿದ್ದಾರೆ.ಮಹದೇವಪ್ಪ ಅವರ ಹೇಳಿಕೆ ಸಿದ್ದರಾಮಯ್ಯ ಅವರ ಬಗ್ಗೆ ಇಲ್ಲವೇ ಅವರ ಪುತ್ರನ ಬಗ್ಗೆ ಅಸಮಾಧಾನದಿಂದ ಹೇಳಿದ್ದಾ? ಅಥವಾ ಸತೀಶ್ ಜಾರಕಿಹೊಳಿ ವಿರುದ್ಧ ಹೇಳಿದ್ದಾ? ಎಂಬ ಬಗ್ಗೆ ತೀವ್ರ ಚರ್ಚೆ ಶುರುವಾಗಿದೆ.ಹೈಕಮಾಂಡ್‌ ಹೇಳಿದೆಯೇ?:

ಅಹಿಂದವನ್ನು ಮುನ್ನಡೆಸಲು ಸತೀಶ್ ಜಾರಕಿಹೊಳಿ ಸಮರ್ಥರು ಎಂದಿರುವ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ.ಎಚ್.ಸಿ.ಮಹದೇವಪ್ಪ, ‘ಜಂಟಲ್‌ಮನ್‌, ಯು ಶುಡ್‌ ಲೀಡ್‌ ಅಂತ ಪಕ್ಷ ಹೇಳಿದೆಯೇ? ಅಹಿಂದ ಮುನ್ನಡೆಸಲು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆಯೇ? ಮತ್ತೆ ಯಾರೋ ಹೇಳಿದ್ದಕ್ಕೆ ಅರ್ಥ ಕಲ್ಪಿಸಿ ಯಾಕೆ ತಲೆಕೆಡಿಸಿಕೊಳ್ತೀರಾ?’ ಎಂದು ಸುದ್ದಿಗಾರರನ್ನು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ವ್ಯವಸ್ಥೆಗೆ ಯಾರೂ ಅನಿವಾರ್ಯವಲ್ಲ. ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಯಾವಾಗ ಏನು ಆಗಬೇಕು ಎಂಬುದನ್ನು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ಎಐಸಿಸಿ ತೀರ್ಮಾನ ಮಾಡುತ್ತದೆ. ತಮ್ಮ ತಮ್ಮ ಅರ್ಥ ಕಲ್ಪಿಸಿಕೊಂಡು ನೀಡುವ ಹೇಳಿಕೆಗಳ ಹಿನ್ನೆಲೆಯನ್ನು ಯಾರು ಹೇಳಿಕೆ ನೀಡಿದ್ದಾರೋ ಅವರೇ ಹೇಳಬೇಕು. ಅವರು ಹೇಳಿದ್ದನ್ನು ನೀವೇನೋ ಅರ್ಥೈಸಿಕೊಂಡು ಕೇಳಿದರೆ ನಾನು ಏನು ಹೇಳಲಿ? ಎಂದು ಮಹದೇವಪ್ಪ ತಿಳಿಸಿದರು.