ಕೋಲಾರ ಜಿಲ್ಲೆಯಲ್ಲಿ ಶಾಲೆಗೆ ಗೈರುಹಾಜರಾಗಿದ್ದ ಮಗನ ಬಗ್ಗೆ ಪ್ರಶ್ನಿಸಿದ್ದಕ್ಕೆ ಪೋಷಕನೊಬ್ಬ ಶಿಕ್ಷಕಿ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯ ನಂತರ ಆರೋಪಿ ಪರಾರಿಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಶಾಲಾ ಆವರಣದ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕೋಲಾರ (ಸೆ.12): ಶಾಲೆಗೆ ಸತತವಾಗಿ ಗೈರುಹಾಜರಾಗುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಪ್ರಶ್ನಿಸಿದ್ದಕ್ಕೆ ಆತನ ತಂದೆ ಶಾಲೆಯಲ್ಲೇ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಕ್ಷೇತ್ರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇನ್ನು ಶಾಲೆಯಲ್ಲಿ ಪಾಠ ಮಾಡಬೇಕಾದ ಟೀಚರ್, ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ:
ಕ್ಷೇತ್ರನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳಾ ಅವರ ಮೇಲೆ ಹಲ್ಲೆ ನಡೆದಿದೆ. ಗ್ರಾಮದ ನಿವಾಸಿಯಾಗಿರುವ ಚೌಡಪ್ಪ ಎಂಬಾತ ತನ್ನ ಮಗ ಎರಡು ದಿನಗಳಿಂದ ಶಾಲೆಗೆ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ. ಪ್ರಶ್ನಿಸಿದಕ್ಕೆ ಸಿಟ್ಟಿಗೆದ್ದ ಚೌಡಪ್ಪ, ಶಾಲೆಗೆ ನುಗ್ಗಿ ಏಕಾಏಕಿ ಶಿಕ್ಷಕಿ ಮಂಜುಳಾ ಅವರನ್ನು ತಳ್ಳಿದ್ದಾನೆ. ಈ ವೇಳೆ, ಶಿಕ್ಷಕಿ ಬಾಗಿಲಿಗೆ ಬಡಿದು ತಲೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೃಹಜ್ಯೋತಿ ಇದ್ರೂ ಸರ್ಕಾರಿ ಆಸ್ಪತ್ರೆಗೆ ಕರೆಂಟ್ ಇಲ್ಲ, ಮೊಬೈಲ್ ಬೆಳಕಲ್ಲಿ ಮಹಿಳೆಗೆ 4 ನೇ ಹೆರಿಗೆ!
ಪೊಲೀಸ್ ತನಿಖೆ:
ಘಟನೆ ನಡೆದ ಕೂಡಲೇ ಆರೋಪಿ ಚೌಡಪ್ಪ ಮತ್ತು ಆತನ ಕುಟುಂಬ ಗ್ರಾಮದಿಂದ ನಾಪತ್ತೆಯಾಗಿದ್ದಾರೆ. ವಿಷಯ ತಿಳಿದ ಮಾಸ್ತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಶಾಲಾ ಆವರಣದ ಸುರಕ್ಷತೆ ಮತ್ತು ಶಿಕ್ಷಕರ ಮೇಲಿನ ಗೌರವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
