ಕಾರವಾರದ ಮುಂಡಗೋಡ ತಾಲೂಕಿನ ಕಾಳಗನಕೊಪ್ಪ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಥಳಿಸಿದ ಶಿಕ್ಷಕಿ ಭಾರತಿ ನಾಯ್ಕ್‌ರನ್ನ ಅಮಾನತು ಮಾಡಲಾಗಿದೆ. ಬರೆಯದಿರುವುದು ಮತ್ತು ಕಲಿತದ್ದನ್ನು ಮನನ ಮಾಡದಿರುವ ಕಾರಣಕ್ಕೆ ಶಿಕ್ಷಕಿ ವಿದ್ಯಾರ್ಥಿಯನ್ನು ಹೊಡೆದಿದ್ದರು.

ಕಾರವಾರ, ಉತ್ತರಕನ್ನಡ (ಆ.8): ಸರಿಯಾಗಿ ಬರೆಯುವುದಿಲ್ಲ, ಕಲಿಸಿರೋದನ್ನು ಮನನ ಮಾಡಿಕೊಳ್ಳುವುದಿಲ್ಲ ಎಂದು ಸಿಟ್ಟಿಗೆದ್ದು ವಿದ್ಯಾರ್ಥಿಗೆ ಸಣ್ಣ ಕೋಲಿನಿಂದ ಹೊಡೆದಿದ್ದ ಶಿಕ್ಷಕಿ ಭಾರತಿ ನಾಯ್ಕ್‌ರನ್ನ ಅಮಾನತು ಮಾಡಲಾಗಿದೆ.

ಮುಂಡಗೋಡ ತಾಲೂಕಿನ ಕಾಳಗನಕೊಪ್ಪ ಸರಕಾರಿ ಶಾಲೆಯಲ್ಲಿ ನಿನ್ನೆ ನಡೆದಿದ್ದ ಘಟನೆ. ಎರಡನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಬೆನ್ನಮೇಲೆ ಬಾಸುಂಡೆ ಬರುವಂತೆ ಶಿಕ್ಷಕಿ ಥಳಿಸಿದ್ದರು. ಈ ಪ್ರಕರಣದಲ್ಲಿ ಶಿಕ್ಷಕಿಯನ್ನು ಇಂದು (ಆಗಸ್ಟ್ 8, 2025) ಅಮಾನತುಗೊಳಿಸಲಾಗಿದೆ.

ಘಟನೆಯ ವಿವರ:

ವಿದ್ಯಾರ್ಥಿಯು ಸರಿಯಾಗಿ ಬರೆಯದಿರುವುದು ಮತ್ತು ಕಲಿತದ್ದನ್ನು ಮನನ ಮಾಡದಿರುವ ಕಾರಣಕ್ಕೆ ಸಿಟ್ಟಿಗೆದ್ದ ಶಿಕ್ಷಕಿ ಭಾರತಿ ನಾಯ್ಕ, ಸಣ್ಣ ಕೋಲಿನಿಂದ ವಿದ್ಯಾರ್ಥಿಯನ್ನು ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಶಾಲೆಯಿಂದ ಮನೆಗೆ ತೆರಳಿದ ಬಾಲಕ, ತೀವ್ರ ನೋವಿನಿಂದ ಅಳಲು ಆರಂಭಿಸಿದ್ದಾನೆ. ಮನೆಯವರು ಬಾಲಕನ ಶರ್ಟ್‌ ಬಿಚ್ಚಿ ಪರಿಶೀಲಿಸಿದಾಗ, ಮೈಮೇಲೆ ಬಾಸುಂಡೆಗಳು ಮೂಡಿರುವುದು ಕಂಡುಬಂದಿದೆ. ಆಘಾತಗೊಂಡ ಬಾಲಕನ ತಾಯಿ, ಗ್ರಾಮದ ಪ್ರಮುಖರಿಗೆ ಈ ಘಟನೆಯನ್ನು ತಿಳಿಸಿ ಕಣ್ಣೀರು ಹಾಕಿದ್ದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ, ಶಿಕ್ಷಣಾಧಿಕಾರಿ (ಬಿಇಒ) ಸುಮಾ ಜಿ. ಶಾಲೆಗೆ ಭೇಟಿ ನೀಡಿ, ಬಾಲಕನ ಪೋಷಕರು ಮತ್ತು ಶಿಕ್ಷಕಿಯೊಂದಿಗೆ ಮಾತನಾಡಿ ಘಟನೆ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಶಿಕ್ಷಕಿ ಭಾರತಿ ನಾಯ್ಕ, ತಾನು ಉದ್ದೇಶಪೂರ್ವಕವಾಗಿ ಹೊಡೆದಿಲ್ಲ ಎಂದು ಕ್ಷಮೆಯಾಚಿಸಿ, ಮುಂದೆ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸುವುದಾಗಿ ತಿಳಿಸಿದ್ದರು. ಆದರೆ, ಬಾಲಕನ ಕುಟುಂಬಸ್ಥರು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು ಎನ್ನಲಾಗಿದೆ. ಹೀಗಾಗಿ ಶಿಕ್ಷಕಿಯ ವಿರುದ್ಧ ಕೈಗೊಂಡ ಕ್ರಮದ ಭಾಗವಾಗಿ, ಶಿಕ್ಷಣ ಇಲಾಖೆಯು ಭಾರತಿ ನಾಯ್ಕ ಅವರನ್ನು ಇಂದು ಅಮಾನತುಗೊಳಿಸಿದೆ.