ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆರೋಗ್ಯವೇ ಮನುಷ್ಯನಿಗೆ ದೊಡ್ಡ ಭಾಗ್ಯ ಎಂದು ತಿಳಿಸಿದರು. ಎಂ.ಎಂ.ಫೌಂಡೇಷನ್ ವತಿಯಿಂದ ಮಹಾಲಿಂಗೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಂಡ್ಯ (ಅ.21): ಪ್ರತಿಯೊಬ್ಬ ಮನುಷ್ಯನಿಗೂ ಯಾವುದೇ ಕಾಯಿಲೆ ಇಲ್ಲದಿದ್ದರೆ ಕೋಟಿ ದುಡ್ಡು ಇದ್ದಂತೆ. ಆರೋಗ್ಯವೇ ಮನುಷ್ಯನಿಗೆ ದೊಡ್ಡ ಭಾಗ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಸರಾಳು ಗ್ರಾಪಂ ಮಾಜಿ ಅಧ್ಯಕ್ಷ ಮುದ್ದನಘಟ್ಟ ಮಹಾಲಿಂಗೇಗೌಡರ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಎಂ.ಎಂ.ಫೌಂಡೇಷನ್ ವತಿಯಿಂದ ಸಾರ್ವಜನಿಕರಿಗೆ ಉಚಿತ ಆ್ಯಂಬುಲೆನ್ಸ್ ಸೇವೆ ಒದಗಿಸಿ, 2 ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಣೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಆರೋಗ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ:ನಿರ್ಮಲಾನಂದಶ್ರೀ

ಇಂದಿನ ದಿನಗಳಲ್ಲಿ ಯಾವುದೇ ಮನುಷ್ಯನಲ್ಲಿ ಕೋಟ್ಯಾಂತರ ರು. ದುಡ್ಡಿದ್ದರೂ ಆರೋಗ್ಯವಿಲ್ಲದಿದ್ದರೆ ಯಾವುದಕ್ಕೂ ಉಪಯೋಗವಾಗುವುದಿಲ್ಲ. ಈ ಭೂಮಿ ಮೇಲೆ ಕಾಯಿಲೆ ಇಲ್ಲದವರಿಗೆ ಕೋಟಿ ದುಡ್ಡು ಇದ್ದಂತೆ. ಆರೋಗ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ಜನರಿಗೆ ಎಲ್ಲವೂ ಬೇಕು, ಆರೋಗ್ಯ ಕಳಕೊಂಡರೆ ಯಾವುದೂ ಬೇಡ:

ಜಗತ್ತಿನಲ್ಲಿ ಜನರಿಗೆ ಎಲ್ಲವೂ ಬೇಕು ಎನಿಸುತ್ತದೆ. ಆದರೆ ಆರೋಗ್ಯ ಕಳೆದುಕೊಂಡರೆ ಯಾವುದೂ ಬೇಡ ಎನ್ನುತ್ತಾರೆ. ಆರೋಗ್ಯ ಸೇವೆಗಾಗಿ ಮಹಾಲಿಂಗೇಗೌಡರು ಆ್ಯಂಬುಲೆನ್ಸ್ ಸೇವೆ ಒದಗಿಸುವುದು ಉತ್ತಮವಾಗಿದೆ. ದುಡಿದ ದುಡ್ಡಲ್ಲಿ ಸ್ವಲ್ಪ ಭಾಗ ಸೇವೆ ಮಾಡುತ್ತಿರುವ ಅವರು ಇನ್ನೂ ಎತ್ತರಕ್ಕೆ ಬೆಳೆದು ಇನ್ನಷ್ಟು ಸೇವೆ ಮಾಡಲಿ ಎಂದು ಹಾರೈಸಿದರು.

ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ರಾಘವೇಂದ್ರ ಮತ್ತು ಮಹಾಲಿಂಗೇಗೌಡ ಅವರು ಉದ್ಯಮಿಗಳಾಗಿ ಬೆಳವಣಿಗೆ ಸಾಧಿಸಿರುವುದು ಮಹತ್ವದ ವಿಚಾರ. ತಮ್ಮ ಹುಟ್ಟುಹಬ್ಬದಂದು ತೆಂಗಿನ ಸಸಿ ಕಲ್ಪವೃಕ್ಷ ಸೇವಾ ರೂಪದಲ್ಲಿ ಕೊಟ್ಟಿದ್ದಾರೆ. ಕಲ್ಪವೃಕ್ಷ ಕಾಮಧೇನು ಇದ್ದಂತೆ. ಇವರಿಗೆ ಇನ್ನಷ್ಟು ಸೇವೆ ಮಾಡಲು ಭಗವಂತ ಬದುಕಿನಲ್ಲಿ ಶಕ್ತಿ ಕೊಡಲಿ ಎಂದರು.

ಮಹಾಲಿಂಗೇಗೌಡರು ಶ್ರೀ ಮಠದ ಸದ್ಭಕ್ತ:

ಬಹಳ ವರ್ಷಗಳಿಂದ ದುಡಿದ ಆದಾಯದಲ್ಲಿ ಸಮಾಜ ಸೇವೆಗೆ ಮುಡಿಪಾಗಿಟ್ಟವರು. ಅವರಿಗೆ ಕಾಲಭೈರವೇಶ್ವರ ಸ್ವಾಮಿ ಆಶೀರ್ವಾದವಿರಲಿ. ಯಾವುದೇ ಕಾರ್ಯಕ್ರಮಗಳನ್ನು ಶ್ರೀಗಳನ್ನು ಬಿಟ್ಟು ಮಾಡಿಲ್ಲ. ಸನ್ಯಾಸಿಗಳು, ತಜ್ಞರು, ಜನರ ಮಧ್ಯದಲ್ಲಿ ಇಂತಹ ಸಮಾಜ ಸೇವಾ ಕಾರ್ಯ ಮಾಡುತ್ತಿದ್ದಾರೆ. ಸಮಾಜ ಸೇವಾ ತುಡಿತವಿರುವವರು, ಕೈ ತುಂಬ ಕೊಟ್ಟಷ್ಟು ಮತ್ತಷ್ಟು ಒದಗಿ ಬರಲಿ ಎಂದು ಹೇಳಿದರು. ಇದೇ ವೇಳೆ ಶ್ರೀಗಳಿಂದ ಆಶೀರ್ವಾದ ಪಡೆದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಘವೇಂದ್ರ ಮುದ್ದನಘಟ್ಟ ಸೇರಿದಂತೆ, ಎಂ.ಎಂ.ಫೌಂಡೇಷನ್ ಪದಾಧಿಕಾರಿಗಳು, ವಿವಿಧ ಮಠಗಳ ಶ್ರೀಗಳು ಉಪಸ್ಥಿತರಿದ್ದರು.