ಮೈಸೂರು ಅರಮನೆಗೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ಗಜಪಡೆ ಆಗಮನ. ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಂದ ಪೂಜೆ ಸಲ್ಲಿಕೆ. ಈ ಬಾರಿಯ ದಸರಾವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ.
ಮೈಸೂರು (ಆ.10): ಶುಭ ಗೋಧೂಳಿ ಲಗ್ನದಲ್ಲಿ ಮೈಸೂರು ಅರಮನೆಯ ಆವರಣಕ್ಕೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ಗಜಪಡೆಗೆ ಭವ್ಯ ಸ್ವಾಗತ ಕೋರಲಾಯಿತು. ಅರಮನೆಯಂಗಳದಲ್ಲಿ ದೀಪಾಲಂಕಾರದೊಂದಿಗೆ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಸಚಿವ ವೆಂಕಟೇಶ್, ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಸದ್ರೀವತ್ಸ, ತಿಮ್ಮಯ್ಯ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಮತ್ತು ಅರಮನೆ ಮಂಡಳಿಯವರು ಪುಷ್ಪಾರ್ಚನೆ ಮಾಡಿ ಗಜಪಡೆಯನ್ನು ಬರಮಾಡಿಕೊಂಡರು.
ಈ ಬಾರಿ ಅದ್ದೂರಿ ದಸರಾ:
ಈ ಬಾರಿ ದಸರಾ ಎಲ್ಲ ವರ್ಷಗಳಿಗಿಂತ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ದಸರಾವನ್ನು ಭವ್ಯವಾಗಿ ಮಾಡಲು ಸೂಚಿಸಿದ್ದಾರೆ ಎಂದು ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದರು.
3 ಸಾವಿರ ಡ್ರೋನ್ ಶೋ:
ಈ ಬಾರಿಯ ದಸರಾ ಉತ್ಸವದಲ್ಲಿ 3 ಸಾವಿರ ಡ್ರೋನ್ ಶೋ, ವಿದ್ಯುತ್ ದೀಪಾಲಂಕಾರ, ಏರ್ ಶೋ ಸೇರಿದಂತೆ ಎಲ್ಲವೂ ಗ್ರ್ಯಾಂಡ್ ಆಗಿರುತ್ತದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ದಸರಾ ಆಚರಣೆಗೆ 40 ಕೋಟಿ ರೂ. ಖರ್ಚಾಗಿತ್ತು, ಈ ಬಾರಿ ಅದಕ್ಕಿಂತ ಹೆಚ್ಚಿನ ವೆಚ್ಚವಾಗಲಿದೆ ಎಂದರು.
ಸಿಎಂ ಬದಲಾವಣೆ ವಿಚಾರಕ್ಕೆ ಸ್ಪಷ್ಟನೆ:
ಸಿಎಂ ಬದಲಾವಣೆ ಕುರಿತ ಚರ್ಚೆಗಳಿಗೆ ತೆರೆ ಎಳೆಯುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಮಹದೇವಪ್ಪ, ಇನ್ನು ಮೂರು ವರ್ಷಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ಸಿಎಂ ಬದಲಾವಣೆ ಕುರಿತಾದ ಚರ್ಚೆಗಳಿಗೆ ತೆರೆ ಎಳೆದರು.
ದಸರಾ ಉತ್ಸವಕ್ಕೆ ಭರದ ಸಿದ್ಧತೆ: ಜಿಲ್ಲಾಡಳಿತ ಮತ್ತು ಅರಮನೆ ಮಂಡಳಿಯ ಸಹಯೋಗದೊಂದಿಗೆ ಈ ಬಾರಿಯ ದಸರಾ ಉತ್ಸವವನ್ನು ಅತ್ಯಂತ ಆಕರ್ಷಕವಾಗಿ ಆಚರಿಸಲು ಎಲ್ಲ ತಯಾರಿಗಳು ನಡೆಯುತ್ತಿವೆ. ಮೈಸೂರು ದಸರಾದ ವೈಭವವನ್ನು ಜಗತ್ತಿಗೆ ಸಾರಲು ಈ ವರ್ಷದ ಆಚರಣೆ ಮತ್ತಷ್ಟು ವಿಶೇಷವಾಗಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
