MP Tejasvi Surya on Siddaramaiah: 'ಅಮಾವಾಸ್ಯೆ ಸೂರ್ಯ' ಎಂಬ ಸಿಎಂ ಸಿದ್ದರಾಮಯ್ಯನವರ ಟೀಕೆಗೆ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ಅಮವಾಸ್ಯೆಯಂದು ಚಂದ್ರನಿರುವುದಿಲ್ಲ, ಸೂರ್ಯನಿರುತ್ತಾನೆ ಎಂದು ಹೇಳಿದ ಅವರು, ಕರ್ನಾಟಕಕ್ಕೆ ಹಿಡಿದಿರುವ ನಿಜವಾದ ಗ್ರಹಣ ಕಾಂಗ್ರೆಸ್ ಸರ್ಕಾರ ಎಂದು ಟೀಕೆ.
ಬೆಂಗಳೂರು (ಅ.23): ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ಶೋಭೆ ತರದೆ ಇರುವ ಟೀಕೆ ಮಾಡ್ತಾ ಇರ್ತಾರೆ. ಈ ಬಾರಿಯೂ ಅದೇ ತರ ಟೀಕೆ ಮಾಡಿದ್ದಾರೆ. ಇವರಿಗೆ ಅಮವಾಸ್ಯೆಗೂ ಹುಣ್ಣಿಮೆಗೂ ವ್ಯತ್ಯಾಸ ಗೊತ್ತಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದರು.
ಕೇಂದ್ರದಿಂದ ಅನುದಾನ ತರುವ ವಿಚಾರವಾಗಿ 'ಅಮಾವಾಸ್ಯೆ ಸೂರ್ಯ ಇದ್ದಾನಲ್ಲ' ಎಂದು ಸಂಸದರ ವಿರುದ್ಧ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದರು. ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದ ತೇಜಸ್ವಿ ಸೂರ್ಯ ಅವರು, ಅಮವಾಸ್ಯೆ ಇರುವ ದಿನ ಸಹ ಸೂರ್ಯ ಇರ್ತಾನೆ. ಆದರೆ ಅಮವಾಸ್ಯೆ ದಿನ ಚಂದ್ರ ಇರೋಲ್ಲ. ಈ ಚಂದ್ರನ ನೋಡಿ ಪೂಜೆ ಮಾಡೋರು ಜೊತೆ ಇದ್ದು ಇದ್ದು ಸಿದ್ದರಾಮಯ್ಯ ಹೀಗೆ ಹೇಳಿರಬಹುದು. ಸೂರ್ಯ ಯಾವತ್ತೂ ಇರ್ತಾನೆ, ಸೂರ್ಯನ ಪೂಜೆ ಮಾಡೋರಿಗೂ, ಚಂದ್ರನ ಪೂಜೆ ಮಾಡೋರಿಗೆ ಇರುವ ವ್ಯತ್ಯಾಸ ತಿಳಿದು ಮಾತಾಡಲಿ ಎಂದು ಟಾಂಗ್ ನೀಡಿದರು.
ನಾನು ಸಿದ್ದರಾಮಯ್ಯ ಬಗ್ಗೆ ವೈಯಕ್ತಿಕವಾಗಿ ಮಾತನಾಡಬಹುದು. ಆದ್ರೆ ಅದು ನಮ್ಮ ಪಕ್ಷದ ಸಂಸ್ಕೃತಿ ಅಲ್ಲ. ಅವರ ವೈಯಕ್ತಿಕ ಟೀಕೆಗೆ ಹೋಗುವುದಿಲ್ಲ. ನಾನು 24 ಲಕ್ಷ ಜನರಿಂದ ಆಯ್ಕೆ ಆಗಿರುವ ಸಂಸದ. ನಮ್ಮ ಸ್ಥಾನಕ್ಕೆ ಶೋಭೆ ತರುವಂತೆ ಮಾತಾಡಬೇಕು ಎಂದರು.
ಕರ್ನಾಟಕಕ್ಕೆ ಹಿಡಿದಿರುವ ಗ್ರಹಣ ಕಾಂಗ್ರೆಸ್ ಸರ್ಕಾರ:
ಕರ್ನಾಟಕಕ್ಕೆ ಹಿಡಿದಿರುವ ಗ್ರಹಣ ನಿಮ್ಮ ಆಡಳಿತ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಂಸದರು, ನಿಮ್ಮ ಆಡಳಿತದಿಂದಾಗಿ ಬೆಂಗಳೂರು ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಗುಂಡಿ ಇಲ್ಲದ ಒಂದು ಕಿಮೀ ರಸ್ತೆ ಕೂಡ ಕಾಣಸಿಗುವುದಿಲ್ಲ. ರಸ್ತೆ ಗುಂಡಿಯೇ ನಿಮ್ಮ ಆಡಳಿತದ ಕಾರ್ಯವೈಖರಿ ತೋರಿಸುತ್ತಿದೆ. ಇಂತಹ ನೀವು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತಾಡುತ್ತೀರಿ, ಸಂಸದರನ್ನ ಪ್ರಶ್ನೆ ಮಾಡ್ತೀರಾ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಗ್ಯಾಂಗ್‌ರೇಪ್ ಆಗ್ತಿದೆ. ಗೃಹ ಸಚಿವರು ಜೂಜಾಡೋದ್ರಲ್ಲಿ ಬ್ಯುಸಿ ಇದ್ದಾರೆ. ಇತ್ತ 15 ಬಿಲಿಯನ್ ಡಾಲರ್ ಹೂಡಿಕೆ ಆಂದ್ರಕ್ಕೆ ಹೋಯ್ತು. ಐಟಿ ಸಚಿವರು ಆರೆಸ್ಸೆಸ್ ಬ್ಯಾನ್ ಮಾಡೋದ್ರಲ್ಲಿ ಬ್ಯುಸಿ ಆಗಿದ್ದಾರೆ ಎಂದು ತಿರುಗೇಟು ನೀಡಿದರು.


