ಮುಂದಿನ ಸಿಎಂ ಕುರಿತು ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು 'ಎಳಸು ಸ್ಟೇಟ್‌ಮೆಂಟ್' ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಟೀಕಿಸಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಸಂಘಟನೆಗೆ ಹೆಚ್ಚು ಶ್ರಮ ಹಾಕುತ್ತಿದ್ದು, ಇಂತಹ ಗೊಂದಲದ ಹೇಳಿಕೆಗಳು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಮನಗರ (ಅ.23): ಯತೀಂದ್ರ ಸಿದ್ದರಾಮಯ್ಯ ಈ ರೀತಿ ಹೇಳಿಕೆಗಳನ್ನ ಕೊಡಬಾರದು. ಗೌರವಯುತ ಹೇಳಿಕೆ ಕೊಡಬೇಕು. ತಾವು ದೊಡ್ಡ ಮನೆತನದಲ್ಲಿ, ದೊಡ್ಡ ಸ್ಥಾನದಲ್ಲಿದ್ದೀರಿ, ತಾವಾಗಿ ಕೆಳಗಡೆ ಬಿಳೋದು ನಮಗೆ ಇಷ್ಟವಿಲ್ಲ. ಈ ವಿಷಯವಾಗಿ ನನ್ನ ಮೌನವೇ ಉತ್ತರ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಬಳಿಕ ಸತೀಶ್ ಜಾರಕಿಹೊಳಿಗೆ ಸಿಎಂ ಜವಾಬ್ದಾರಿ ಎಂಬ ಯತೀಂದ್ರ ಹೇಳಿಕೆ ವಿಚಾರವಾಗಿ ಇಂದು ರಾಮನಗರದಲ್ಲಿ ಅಂಕನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕರು, ಇದೊಂದು ರೀತಿ ಎಳಸು ಸ್ಟೇಟ್‌ಮೆಂಟ್. ನಿಮ್ಮ ಮಾತು ಇನ್ನೂ ಬಲಿತಿಲ್ಲ, ನಿಮ್ಮ ಮಾತಲ್ಲಿನ್ನೂ ಶಕ್ತಿ ಇಲ್ಲ. ಯಾವುದೇ ರೀತಿ ಗೊಂದಲ ಸೃಷ್ಟಿಬಾರದು ಎಂದರು.
ನಾವು ಮಾಡಿದ್ರೆ ಬಲತ್ಕಾರ, ಬೇರೆಯವರು ಮಾಡಿದ್ರೆ ಚಮತ್ಕಾರ:
ಕೆಪಿಸಿಸಿಯಿಂದ ಯತೀಂದ್ರಗೆ ನೋಟಿಸ್ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನಾವು ಮಾಡಿದ್ರೆ ಬಲತ್ಕಾರ, ಬೇರೆಯವರು ಮಾಡಿದ್ರೆ ಚಮತ್ಕಾರ ಅನ್ನೋ ಪರಿಸ್ಥಿತಿಯಿದೆ. ಅವೆಲ್ಲವನ್ನೂ ಹೇಳಬಾರದುದ, ಅವರು ತಿದ್ದಿಕೊಳ್ತಾರೆ ಎಂದರು.
ಡಿಕೆ ಶಿವಕುಮಾರ ಪಕ್ಷ ಸಂಘಟನೆಗೆ ಶ್ರಮ:
ಇನ್ನು ಸಿಎಂ ಸ್ಥಾನಕ್ಕಾಗಿ ಡಿಸಿಎಂ ಡಿಕೆ ಶಿವಕುಮಾರ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಇಕ್ಬಾಲ್ ಹುಸೇನ್, ಅವ್ರು ಪಕ್ಷದ ಅಧ್ಯಕ್ಷರು, ಜವಾಬ್ದಾರಿಯುತ ಸ್ಥಾನದಲ್ಲಿದ್ದು ಕೆಲಸ ಮಾಡುತ್ತಿದ್ದಾರೆ. ಪಕ್ಷ ಸಂಘಟನೆಗೆ ಹೆಚ್ಚು ಶ್ರಮ ಹಾಕುತ್ತಿದ್ದಾರೆ.ನಮಗೆಲ್ಲ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಯೂತ್ ಕಾಂಗ್ರೆಸ್‌ನಿಂದ ಬಂದು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಯಾರೂ ಗೊಂದಲದ ಹೇಳಿಕೆ ಕೊಡಬಾರದು. ಅದನ್ನು ಅವರು ತಿದ್ದಿಕೊಳ್ತಾರೆ ಎಂಬ ವಿಶ್ವಾಸವಿದೆ ಎಂದು ಯತೀಂದ್ರ ಹೇಳಿಕೆ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.
