ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಲಿಂಗಾಯತವು ಹಿಂದೂ ಧರ್ಮದ ಭಾಗವಾಗಿದೆ ಮತ್ತು ವೀರಶೈವ-ಲಿಂಗಾಯತ ಒಂದೇ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ದಿಂಗಾಲೇಶ್ವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಲಿಂಗಾಯತ ಸಮುದಾಯದ ಧಾರ್ಮಿಕ ಗುರುತಿನ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಹುಬ್ಬಳ್ಳಿ (ಸೆ.19): ಲಿಂಗಾಯತವು ಹಿಂದೂ ಧರ್ಮದ ಭಾಗವಾಗಿದೆ. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಶೆಟ್ಟರ್ ಅವರ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ಲಿಂಗಾಯತ ಹಿಂದೂ ಧರ್ಮದ ಭಾಗವಾಗಿದೆ: ಶೆಟ್ಟರ್
ಮೊದಲು ವೀರಶೈವ ಮಹಾಸಭಾ ಇತ್ತು, ನಂತರ ಲಿಂಗಾಯತವನ್ನು ಸೇರಿಸಲಾಯಿತು. ಧರ್ಮದ ವಿಚಾರದಲ್ಲಿ ಲಿಂಗಾಯತ ಹಿಂದೂ ಧರ್ಮದ ಭಾಗವಾಗಿದೆ. ಇದು ಎಲ್ಲ ಜಾತಿಗಳನ್ನು ಒಳಗೊಂಡಿದೆ. ಲಿಂಗಾಯತಕ್ಕೆ ಇನ್ನೂ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿಲ್ಲ. ನಮ್ಮ ಶಾಲಾ ದಾಖಲಾತಿಗಳಲ್ಲೂ ‘ಹಿಂದೂ ಲಿಂಗಾಯತ’ ಎಂದೇ ಇದೆ ಎಂದು ಶೆಟ್ಟರ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಲಿಂಗಾಯತ ಜನಸಂಖ್ಯೆ ಎಷ್ಟು?
ಮಹಾರಾಷ್ಟ್ರದಲ್ಲಿ ಲಿಂಗಾಯತ ಜನಸಂಖ್ಯೆ 2 ಕೋಟಿಗೂ ಅಧಿಕವಿದೆ, ಆದರೆ ಕರ್ನಾಟಕದಲ್ಲಿ ಲಕ್ಷಗಳ ಲೆಕ್ಕದಲ್ಲಿ ತೋರಿಸಲಾಗುತ್ತಿದೆ. ಜಾತಿ ಸಮೀಕ್ಷೆ ಮತ್ತು ಜನಗಣತಿಯನ್ನು ಕೇಂದ್ರ ಸರ್ಕಾರ ನಡೆಸುತ್ತದೆ. ರಾಜ್ಯ ಸರ್ಕಾರ ಸಮೀಕ್ಷೆ ಮಾಡುವಾಗ ಗೊಂದಲವಾಗಬಾರದು. ತಪ್ಪಾದ ಸಮೀಕ್ಷೆಯಿಂದ ಸರ್ಕಾರ ಜನಪ್ರಿಯತೆ ಕಳೆದುಕೊಳ್ಳಬಹುದು. ಜಾತಿ ಗಣತಿಯು ಪಾರದರ್ಶಕವಾಗಿರಬೇಕು ಎಂದರು.
ವೀರಶೈವ-ಲಿಂಗಾಯತ ಕುರಿತು ಸಂಸದ ಜಗದೀಶ್ ಶೆಟ್ಟರ್ ಅವರ ಹೇಳಿಕೆಗೆ ದಿಂಗಾಲೇಶ್ವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೀರಶೈವ-ಲಿಂಗಾಯತ ಏಕತಾ ಸಮಾವೇಶದಲ್ಲಿ ಏಕತೆಗೆ ಬದ್ಧರಾಗಿ ಮಾತನಾಡಬೇಕು. ಬರೆದುಕೊಂಡು ಬಂದದ್ದನ್ನು ಓದಿ ಗೊಂದಲ ಮೂಡಿಸಬಾರದು ಎಂದು ಶ್ರೀಗಳು ಶೆಟ್ಟರ್ ಹೇಳಿಕೀಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಹೇಳಿಕೆಯಿಂದ ಲಿಂಗಾಯತ ಸಮುದಾಯದ ಧಾರ್ಮಿಕ ಗುರುತಿನ ಬಗ್ಗೆ ಚರ್ಚೆ ತೀವ್ರಗೊಂಡಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.
