ಬಸವ ಯಾತ್ರೆಯ ನೇತೃತ್ವ ವಹಿಸಿರುವವರು ಬಸವ ಧರ್ಮ ಸ್ಥಾಪಿಸಲು ಮುಂದಾದರೆ ಯಾವುದೇ ವಿರೋಧವಿಲ್ಲ. ಆದರೆ, ಈ ಯಾತ್ರೆಯು ಸಮಾಜ ಒಡೆಯುವ ಹುನ್ನಾರ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ. 

ಹುಬ್ಬಳ್ಳಿ (ಸೆ.14): ಬಸವ ಯಾತ್ರೆ ನಡೆಸುತ್ತಿರುವವರಿಗೆ ಧರ್ಮ ಸ್ಥಾಪನೆ ಮಾಡುವ ವಿಚಾರ ಇದ್ದರೆ, ಮಹಾವೀರ, ಬುದ್ಧನ ರೀತಿ "ಬಸವ ಧರ್ಮ " ಸ್ಥಾಪಿಸಲಿ. ಅದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಬಸವಣ್ಣನವರ ಹೆಸರು ಹೇಳಿಕೊಂಡ ವೀರಶೈವ ಲಿಂಗಾಯತರು, ಅಖಂಡ ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಕಿಡಿಕಾರಿದರು.

ಲಿಂಗಾಯತ ಧರ್ಮ ಮಾಡುವುದು ನಾಟಕ ಕಂಪನಿ ನಡೆಸಿದಷ್ಟು ಸುಲಭವಲ್ಲ:

ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಲಿಂಗಾಯತ ಧರ್ಮ ಮಾಡುವುದು ನಾಟಕ ಕಂಪನಿ ನಡೆಸಿದಷ್ಟು ಸುಲಭವಲ್ಲ. ಬಸವ ಸಂಸ್ಕೃತಿ ಯಾತ್ರೆ ಎಂಬ ನಾಟಕ ಕಂಪನಿಯಲ್ಲಿ ಪಾತ್ರದಾರಿಗಳು ಸರಿ ಇಲ್ಲ. ಅದರ ಮ್ಯಾನೇಜರ್‌ ಎಸ್‌.ಎಂ. ಜಾಮದಾರ ಎಲ್ಲರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಸಾಣೇಹಳ್ಳಿ ಶ್ರೀ ತಮ್ಮ ಮಠಕ್ಕೆ ಯಾವ ಜಾತಿ ವಟು ಉತ್ತರಾಧಿಕಾರಿ?

ಬಸವ ಸಂಸ್ಕೃತಿ ಯಾತ್ರೆಯಲ್ಲಿ ಜಾತ್ಯತೀತ ಧರ್ಮ ಸ್ಥಾಪನೆ ಮಾಡುತ್ತೇವೆ ಎಂದು ಸ್ವಾಮೀಜಿಗಳು ಹೇಳಿದ್ದಾರೆ. ಅದರಲ್ಲಿ ಭಾಗವಹಿಸಿರುವ ಸ್ವಾಮೀಜಿಗಳು ಒಂದೊಂದು ಜಾತಿಯನ್ನು ಪ್ರತಿನಿಧಿಸುವ ಮಠಗಳ ಪೀಠಾಧಿಪತಿಗಳು. ಜಾತ್ಯತೀತ ನಿಲುವು ಹೊಂದಿರುವ ಸಾಣೇಹಳ್ಳಿ ಶ್ರೀ ಅವರ ಮಠಕ್ಕೆ ಯಾವ ಜಾತಿಯ ವಟುವನ್ನು ಉತ್ತರಾಧಿಕಾರಿಯಾಗಿ ಮಾಡಿಕೊಳ್ಳುತ್ತಾರೆ? ಎಂದು ಪ್ರಶ್ನಿಸಿದರು.

ನಾನು ಜಾತ್ಯಾತೀತ: ದಿಂಗಾಲೇಶ್ವರ ಸ್ವಾಮೀಜಿ:

ನಾನು ಜಾತ್ಯತೀತ ತತ್ವ, ಸಿದ್ಧಾಂತ ಪಾಲಿಸುತ್ತೇನೆ. ಬೇರೆ ಜಾತಿಯ ಮಠಗಳಿಗೆ ಹೋಗಿ ಸ್ನಾನ, ಪೂಜೆ, ಪ್ರಸಾದ ಮಾಡುತ್ತೇನೆ. ಅವರು ನಮ್ಮ ಮಠಗಳಿಗೆ ಬರುತ್ತಾರೆ. ಒಡೆದಾಳುವ ವಿಚಾರ ನಾವು ಪ್ರಸ್ತಾವ ಮಾಡಿಲ್ಲ. ಸೌಹಾರ್ದ ವಾತಾವರಣಕ್ಕೆ ಬೆಂಕಿ ಹಚ್ಚುವ ಕೆಲಸ ಬಸವ ಸಂಸ್ಕೃತಿ ಯಾತ್ರೆಯಲ್ಲಿ ಭಾಗವಹಿಸಿರುವ ಸ್ವಾಮೀಜಿಗಳು ಮಾಡುತ್ತಿದ್ದಾರೆ. ಈ ಕೆಲಸ ಮಾಡಬಾರದು ಎಂದರು.

ಬಸವ ಯಾತ್ರೆ ಮಾಡುವುದೇ ಇದ್ದರೆ ಸಾಣೆಹಳ್ಳಿ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಅದರಲ್ಲಿರುವ ಎಲ್ಲ ಶ್ರೀಗಳು, ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಸಬೇಕಿತ್ತು. ಆದರೆ ಇಂಗ್ಲಿಷ್‌ ಸಂಸ್ಕೃತಿ ಕಲಿತಿರುವ ನಿವೃತ್ತ ಐಎಎಸ್‌ ಅಧಿಕಾರಿಯ ಮಾರ್ಗದರ್ಶನದಲ್ಲಿ ಯಾತ್ರೆ ನಡೆಸುತ್ತಿದ್ದಾರೆ. ಈ ಮೂಲಕ ಸಮಾಜವನ್ನು ಸರ್ವನಾಶ ಮಾಡುತ್ತಿದ್ದಾರೆ ಎಂದರು.

ಇಬ್ಭಾಗ ಅಸಾಧ್ಯ:

ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ಇಬ್ಭಾಗವಾಗುತ್ತದೆ ಎಂಬ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ನೀವು ಬೇರೆ ಸಂಸ್ಥೆಯನ್ನು ಕಟ್ಟಿ ಎತ್ತರಕ್ಕೆ ಬೆಳೆಸಿ. ಆದರೆ, ಅದನ್ನು ಒಡೆಯುವ ಹುಚ್ಚು ಸಾಹಸ ಮಾಡಿದರೆ ನಡೆಯುವುದಿಲ್ಲ. ಅಲ್ಲಿ ಭೀಷ್ಮನಂತಹ ಶಾಮನೂರು ಶಿವಶಂಕರಪ್ಪ, ಅರ್ಜುನನಂತಹ ಈಶ್ವರ ಖಂಡ್ರೆ, ಭೀಮನಂತಹ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ, ಧರ್ಮರಾಯನಂತಹ ಅನೇಕ ಸ್ವಾಮೀಜಿಗಳು, ಸಮಾಜದ ಗಣ್ಯರಿದ್ದಾರೆ. ಎಲ್ಲರೂ ಸೇರಿ ನಿಮ್ಮಂತಹ ಕೌರವರ ಪಾತ್ರಕ್ಕೆ ಅವಕಾಶ ನೀಡುವುದಿಲ್ಲ ಎಂದರು.

2017–18ರಲ್ಲಿ ಎಂಟು ಜನ ಸಚಿವರು, ವಿವಿಧ ಸ್ವಾಮೀಜಿಗಳಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಮಾಡಲು ಸಾಧವಾಗಲಿಲ್ಲ ಎಂದು ಕುಟುಕಿದರು.

ವೀರಶೈವ-ಲಿಂಗಾಯತ ಒಡೆಯುವ ಕೆಲಸ ನಿಲ್ಲಿಸಬೇಕು:

ಎಲ್ಲ ಧರ್ಮಗಳಲ್ಲಿ ಹಲವು ಪಂಗಡಗಳಿವೆ. ಆದರೂ ಅವರು ಒಂದಾಗಿ ಹೋಗುತ್ತಿದ್ದಾರೆ. ಆದರೆ, ಒಂದಾಗಿರುವ ವೀರಶೈವ ಲಿಂಗಾಯತರನ್ನು ಒಡೆಯುವ ಕೆಲಸ ನಿಲ್ಲಿಸಬೇಕು. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮವಾದರೂ ನಾವೆಲ್ಲರೂ ಹಿಂದೂ ಧರ್ಮದವರು ಎಂದರು.

ವಚನಾನಂದ ಸ್ವಾಮೀಜಿಯನ್ನ ಪಂಚಮಪೀಠಕ್ಕೆ ಕರೆತಂದಿದ್ದು ನಾನು:

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಬೆಂಗಳೂರಿನಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು. ಅವರನ್ನು ಪಂಚಮಸಾಲಿ ಪೀಠಕ್ಕೆ ಕರೆತಂದಿದ್ದು ನಾನು. ಅವರು ‍ಪೀಠಕ್ಕೆ ಬರುವ ಮುನ್ನ ಅದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಎಂದು ನೋಂದಣಿಯಾಗಿದೆ. ನೀವು ಆ ಪೀಠದ ತತ್ವ ಸಿದ್ಧಾಂತ ಮುನ್ನಡೆಸಿಕೊಂಡು ಹೋಗಬೇಕು. ಸಮಾಜವನ್ನು ಒಡೆಯಲು ಹೊರಟಿರುವ ಗುಂಪಿನ ಜತೆ ಹೋಗಬಾರದು ಎಂದು ಕಿವಿಮಾತು ಹೇಳಿದರು.

ನನ್ನ ಬಟ್ಟೆ ಬದಲಾವಣೆ ಬಗ್ಗೆ ಪ್ರಶ್ನೆ ಮಾಡುತ್ತಿರುವ ಸಾಣೇಹಳ್ಳಿ ಸ್ವಾಮೀಜಿ ಇಡೀ ಸಮಾಜದ ಬಟ್ಟೆ (ದಾರಿ) ತಪ್ಪಿಸುತ್ತಿದ್ದಾರೆ. ನಾನು ಬಾಲೆಹೊಸೂರು ಮಠದ ಮಠಾಧೀಶನಾಗಿದ್ದಾಗ ವಿರಕ್ತ ಸ್ವಾಮೀಜಿ ರೀತಿ ಇದ್ದೆ. ಶಿರಹಟ್ಟಿ ಮಠಕ್ಕೆ ಬಂದ ನಂತರ ಮಠದ ಸಂಪ್ರದಾಯದ ಪ್ರಕಾರ ಬಟ್ಟೆ ಧರಿಸುತ್ತಿದ್ದೇನೆ ಎಂದು ತಮ್ಮ ಬಿಳಿ ಬಟ್ಟೆಗೆ ಸ್ಪಷ್ಟನೆ ನೀಡಿದರು.

ಪಂಚಪೀಠಗಳ ತಪ್ಪು ನಿರ್ಧಾರ:

ಪಂಚಪೀಠಗಳು ಬಸವಣ್ಣನನ್ನು ವಿರೋಧ ಮಾಡಿದ್ದು ಸತ್ಯ. ಅವರ ಕೆಲವು ತಪ್ಪು ನಿರ್ಧಾರಗಳು ಸಮಾಜದ ವಿಘಟನೆಗೆ ಕಾರಣವಾಗಿವೆ. ಪಂಚಾಚಾರ್ಯರು, ಪಂಚಪೀಠಗಳು ಬದಲಾವಣೆಯಾಗಲು ಕಾಲ ಸನ್ನಿಹಿತವಾಗಿದೆ. ಬಸವಣ್ಣ, ರೇಣುಕಾಚಾರ್ಯರ ಹೆಸರಿನಲ್ಲಿ ಸಮಾಜ ಛಿದ್ರ ಛಿದ್ರ ಆಗುತ್ತಿದೆ. ಅವರು ಸಮಾಜವನ್ನು ಒಂದು ಮಾಡಲು ಬಂದವರು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ದಿಂಗಾಲೇಶ್ವರ ಶ್ರೀ ಹೇಳಿದರು.