ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡ ಮುಸುಕುಧಾರಿಯ ಹುಟ್ಟೂರಿನ ಗ್ರಾಮಸ್ಥರು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಆತನ ಸುಳ್ಳು ಹೇಳಿಕೆ, ಮೂವರು ಮಹಿಳೆಯರೊಂದಿಗೆ ವಿವಾಹ ಹಾಗೂ ಹೆಣಗಳ ಮೇಲಿನ ಚಿನ್ನಾಭರಣ ಕದಿಯುತ್ತಿದ್ದ ಸತ್ಯವನ್ನು ಮಂಡ್ಯ ಜನ ಬಿಚ್ಚಿಟ್ಟಿದ್ದಾರೆ.

ಮಂಡ್ಯ (ಆ.21): ರಾಜ್ಯಾದ್ಯಂತ ಸುದ್ದಿಯಾಗಿದ್ದ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡು ದೂರು ನೀಡಿರುವ ಮುಸುಕುಧಾರಿ ಅನಾಮಿಕನ ಬಗ್ಗೆ ಆತನ ಹುಟ್ಟೂರಿನ ಗ್ರಾಮಸ್ಥರು ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಗ್ರಾಮಸ್ಥರು, ಅನಾಮಿಕನ ಕುರಿತು ಈತನಕ ಯಾರಿಗೂ ಗೊತ್ತಿರದ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಹೂತುಹಾಕಿದ್ದೇನೆ. ಇದರಲ್ಲಿ ಯುವತಿಯರು ಹಾಗೂ ಮಹಿಳೆಯರ ನೂರಾರು ಶವಗಳಿದ್ದು, ತಾನು ಹೂತಿರುವ ಶವಗಳ ಸಮಾಧಿ ತೋರಿಸುವುಸದಾಗಿ ದೂರು ನೀಡಿದ್ದ ಅನಾಮಿಕ ಮುಸುಕುಧಾರಿ ರಾಜ್ಯದಲ್ಲೇ ಭಾರೀ ಸುದ್ದಿಯಾಗಿದ್ದಾನೆ. ಆದರೆ, ಈ ಅನಾಮಿಕ ಮುಸುಕುಧಾರಿಯ ಬಗ್ಗೆ ಮಂಡ್ಯದಲ್ಲಿ ಆತನ ಹುಟ್ಟೂರಿನ ಜನತೆ ಹಲವು ಸ್ಪೋಟಕ ಅಂಶಗಳನ್ನು ರಿವೀಲ್ ಮಾಡಿದ್ದಾರೆ. ಅನಾಮಿಕನ ಕಥೆಗಳಲ್ಲಿನ ಹಲವು ಅಂಶಗಳು ಸುಳ್ಳು ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದು, 'ನೂರಾರು ಶವಗಳನ್ನು ಹೂತಿದ್ದೇನೆ ಎನ್ನುವುದು ಸುಳ್ಳು' ಎಂದು ಹೇಳಿದ್ದಾರೆ.

ಗ್ರಾಮದಲ್ಲೇ ಹುಟ್ಟಿ ಬೆಳೆದಿದ್ದ ಮುಸುಕುಧಾರಿ

ಅನಾಮಿಕನು ಹುಟ್ಟಿ ಬೆಳೆದಿದ್ದು ಮಂಡ್ಯ ಜಿಲ್ಲೆಯ ಇದೇ ಗ್ರಾಮದಲ್ಲಿ ಎಂದು ಗ್ರಾಮಸ್ಥರು ದೃಢಪಡಿಸಿದ್ದಾರೆ. ಆತನ ತಂದೆ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಕುಟುಂಬಕ್ಕೆ ಗ್ರಾಮದಲ್ಲಿ ಒಳ್ಳೆಯ ಹೆಸರಿತ್ತು. ಆದರೆ ತಂದೆ-ತಾಯಿ ಮರಣದ ನಂತರ ಇಡೀ ಕುಟುಂಬ ಧರ್ಮಸ್ಥಳಕ್ಕೆ ತೆರಳಿತು. 1994ರವರೆಗೂ ಈ ಗ್ರಾಮದಲ್ಲಿಯೇ ಇದ್ದ ಅನಾಮಿಕ ಉಂಡಾಡಿ ಗುಂಡನಂತೆ ಇದ್ದು, ಯಾವುದೇ ಕೆಲಸ ಮಾಡದೆ ಬೀದಿ ಬೀದಿ ತಿರುಗುತ್ತಿದ್ದ ಎನ್ನಲಾಗಿದೆ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದ ಈತ, ನಂತರ ಧರ್ಮಸ್ಥಳಕ್ಕೆ ತೆರಳಿದ್ದನು.

ಧರ್ಮಸ್ಥಳದಿಂದ ಮರಳಿ ಬಂದಿದ್ದ ಅನಾಮಿಕ

2014ರಲ್ಲಿ ಅನಾಮಿಕ ತನ್ನ 3ನೇ ಹೆಂಡತಿಯ ಜೊತೆ ಗ್ರಾಮಕ್ಕೆ ವಾಪಸ್ಸು ಬಂದಿದ್ದ. ಸುಮಾರು ಒಂದು ವರ್ಷ ಕಾಲ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದನು. ನಂತರ ಗ್ರಾಮಸ್ಥರು ಸಹಾಯ ಮಾಡಿ ಶೀಟ್‌ನ ಮನೆ ನಿರ್ಮಿಸಿ ಕೊಟ್ಟಿದ್ದರು. ಆದರೆ, ಆ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಗ್ರಾಮಸ್ಥರೊಂದಿಗೆ ಜಗಳ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ. ಸ್ವಚ್ಛತಾ ಕಾರ್ಯದ ಜೊತೆಗೆ ಇಟ್ಟಿಗೆ ಫ್ಯಾಕ್ಟರಿಯಲ್ಲೂ ಕೆಲಸ ಮಾಡುತ್ತಿದ್ದ ಈತ, ನಂತರ ಒಂದು ದಿನ ರಾತ್ರೋರಾತ್ರಿ ಊರು ಖಾಲಿ ಮಾಡಿ ಹೋಗಿದ್ದನು.

ನೂರಾರು ಶವ ಹೂತಿದ್ದೀನಿ ಎನ್ನುವುದು ಸುಳ್ಳು

ಅವನ ತಂದೆ-ತಾಯಿ ಒಳ್ಳೆಯವರು, ಆದರೆ ಇವನು ಮಾತ್ರ ಫ್ರಾಡ್ ಎಂದು ಗ್ರಾಮಸ್ಥರು ಅನಾಮಿಕನ ಬಗ್ಗೆ ನೇರ ಆರೋಪ ಮಾಡಿದ್ದಾರೆ. ಅಲ್ಲದೆ, ನೂರಾರು ಶವಗಳನ್ನು ಹೂತಿದ್ದೀನಿ ಎಂದು ಅನಾಮಿಕ ಹೇಳಿರುವುದು ಸುಳ್ಳು ಎಂದು ಗ್ರಾಮಸ್ಥರು ಖಚಿತಪಡಿಸಿದ್ದಾರೆ. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಬಗ್ಗೆ ಹೇಳುತ್ತಿರುವುದು ಕೂಡ ಸುಳ್ಳು ಎಂದಿದ್ದಾರೆ. ಧರ್ಮಸ್ಥಳಕ್ಕೆ ಹೋಗಿದ್ದಾಗ ದೇವಸ್ಥಾನದೊಳಗೆ ಹೋಗಲು ಬಿಡುತ್ತಿರಲಿಲ್ಲ ಎಂದು ಅನಾಮಿಕ ಹೇಳಿಕೊಂಡಿದ್ದ. ಆದರೆ, ಈತನು ಧರ್ಮಸ್ಥಳದಲ್ಲಿದ್ದಾಗ ಆತನ ಸಹೋದರ ತನಾಸಿ ಮೂಲಕ ಇವರನ್ನು ದೇವಸ್ಥಾನದೊಳಗೆ ಬಿಡಿಸುತ್ತಿದ್ದ ಎಂದು ತಿಳಿದುಬಂದಿದೆ.

ಈತ ಒಮ್ಮೆ ಗ್ರಾಮಕ್ಕೆ ಬಂದು ನಮ್ಮೂರಿನ ಮಹಿಳೆಯರಿಗೆ ಸೀರೆ ಮತ್ತು ಗಂಡಸರಿಗೆ ಕೆಲವು ಬಟ್ಟೆಗಳನ್ನು ಹಂಚಿದ್ದನು. ಈ ಬಟ್ಟೆಗಳೆಲ್ಲವೂ ಎಲ್ಲಿದ ಬಂತು ಎಂದು ಕೇಳಿದಾಗ, 'ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಈ ಬಟ್ಟೆಗಳನ್ನು ನಮ್ಮೂರಿನಲ್ಲಿ ಹಂಚಲು ಕೊಟ್ಟರು' ಎಂದು ಹೇಳಿಕೊಂಡಿದ್ದನು. ಆದರೆ, ಈತ ಶವಗಳ ಮೇಲಿನ ಒಳ್ಳೆಯ ಬಟ್ಟೆಗಳು ಹಾಗೂ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಎಂಬ ಮಾತುಗಳನ್ನು ನಂತರ ನಾವು ಕೇಳಿದ್ದೆವು ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅನಾಮಿಕನ ಸಹೋದರರಾದ ತನಾಸಿ ಸೇರಿದಂತೆ ಇತರರು ಒಳ್ಳೆಯವರು, ಆದರೆ ಈತ ಮಾತ್ರ ಫ್ರಾಡ್ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಈ ಬೆಳವಣಿಗೆಗಳು ಮುಸುಕುಧಾರಿ ಅನಾಮಿಕನ ಹೇಳಿಕೆಗಳ ವಿಶ್ವಾಸಾರ್ಹತೆಯ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಪೊಲೀಸರು ಈ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ತನಿಖೆ ನಡೆಸುವ ಸಾಧ್ಯತೆ ಇದೆ.