ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು (ಆ.14): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಪರಿಣಾಮ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ವಾಯುಭಾರ ಕುಸಿತ ಗುರುವಾರ ತೀವ್ರತೆ ಪಡೆದುಕೊಳ್ಳಲಿದೆ. ಆದರೆ, ಚಂಡಮಾರುತವಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಈ ಬಾರಿ ಅರಬ್ಬಿ ಸಮುದ್ರಕ್ಕಿಂತ, ಬಂಗಾಳಕೊಲ್ಲಿ ಮೂಲಕ ಹೆಚ್ಚಿನ ಮಳೆ ಮಾರುತಗಳು ಬರುತ್ತಿರುವ ಹಿನ್ನೆಲೆಯಲ್ಲಿ ಚಳಿಗಾಳಿಯೊಂದಿಗೆ ಮಳೆಯಾಗುತ್ತಿದೆ. ಧಾರಾಕಾರ ಮಳೆ ಬದಲು ಜಿಟಿ ಜಿಟಿ ಮಳೆ ಮುಂದುವರೆಯಲಿದೆ. ಮಳೆ ಕಡಿಮೆಯಾದರೂ ಮೋಡ ಕವಿದ ವಾತಾವರಣ ಒಳನಾಡು ಜಿಲ್ಲೆಗಳಲ್ಲಿ ಇರಲಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಕುಷ್ಟಗಿಯಲ್ಲಿ ಮಳೆ ಅಬ್ಬರಕ್ಕೆ ಬೆಳೆ ನಾಶ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ಅಪಾರ ಹಾನಿಯಾಗಿದೆ. ಕೆಲವು ಮನೆಗಳು ಕುಸಿದಿದ್ದರೆ, ಹತ್ತಿ, ದಾಳಿಂಬೆ ಬೆಳೆ ನೀರುಪಾಲಾಗಿದೆ. ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳದ ದಂಡೆಯ ಹತ್ತಿರ ಇರುವ ಜಮೀನಿನಲ್ಲಿರುವ ದಾಳಿಂಬೆ, ಹತ್ತಿ, ತೊಗರಿ, ಸಜ್ಜೆ ಇತರ ಬೆಳೆಗಳು ಜಲಾವೃತವಾಗಿವೆ.
ಎಲ್ಲೆಲ್ಲಿ ಹಾನಿ?: ಕುಷ್ಟಗಿ ತಾಲೂಕಿನ ಟಕ್ಕಳಕಿ ಗ್ರಾಮದ ಶರಣಮ್ಮ ಭೀಮನಗೌಡ್ರ ಅವರ ಮೂರು ಎಕರೆ ದಾಳಿಂಬೆ, ಒಂದು ಎಕರೆ ಹತ್ತಿ, ಸುರೇಶ ಭೀಮನಗೌಡ್ರ ಅವರ ಮೂರು ಎಕರೆ ದಾಳಿಂಬೆ ಹಾಗೂ ಒಂದು ಎಕರೆ ಹತ್ತಿ, ಮಾಟೂರು ಗ್ರಾಮದ ಮಹಾಂತೇಶ ಮೇಟಿ ಅವರ ಮೂರು ಎಕರೆಯ ಹತ್ತಿ, ಬೆಳೆ ಹಾಗೂ ಬಾವಿಯಲ್ಲಿನ ಮೂರು ಪಂಪ್‌ಸೆಟ್‌ಗಳು ಹಾಳಾಗಿವೆ. ಮಣ್ಣಕಲಕೇರಿ ಗ್ರಾಮದ ಈರಪ್ಪ ಬೆಳಗಲ್, ಮಾಳಮ್ಮ ಬೆಳಗಲ್ ಅವರಿಗೆ ಸೇರಿದ 5 ಎಕರೆಯ ಜಮೀನಿನಲ್ಲಿ ಬೆಳೆಯಲಾದ ಹತ್ತಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ವಣಗೇರಿ, ಬ್ಯಾಲಿಹಾಳ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿನ ಜಮೀನುಗಳಲ್ಲಿ ನೀರು ಹೊಕ್ಕು ನೂರಾರು ಎಕರೆಯ ಬೆಳೆಗಳು ಹಾಳಾಗಿದೆ.
ಸೇತುವೆಗಳು ಜಲಾವೃತ: ಕುಷ್ಟಗಿ ತಾಲೂಕಿನ ಮದಲಗಟ್ಟಿ ಕೆರೆ ತುಂಬಿ ಕೋಡಿ ಹರಿದಿದೆ. ಕೆರೆಯ ನೀರು ಬಿಜಕಲ್, ಹೆಸರೂರು, ಜಾಲಿಹಾಳ, ರ್ಯಾವಣಕಿ, ಬಳೂಟಗಿ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಸೇತುವೆ ಮೇಲ್ಬಾಗದಲ್ಲಿ ನೀರು ಹರಿಯಿತು. ಇದರಿಂದಾಗಿ ಮಧ್ಯಾಹ್ನ ಸಮಯದ ವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಆನಂತರದಲ್ಲಿ ದೊಡ್ಡ ವಾಹನಗಳು ಸಂಚಾರ ಮಾಡಿದವು. ಬೈಕ್ ಸವಾರರಿಗೆ ಕಷ್ಟವಾಯಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರದಾಡಿದರು.
