ಪರಮಣ್ಣ ತಮ್ಮ ಜಮೀನು ಕೆಲಸಕ್ಕೆ ಅಣ್ಣನ ಜತೆಗೆ ಹೋಗಿದ್ದ. ಗುಡುಗು ಸಹಿತ ಮಳೆ ಬರ್ತಿದ್ದಂತೆ ಅಣ್ಣ-ತಮ್ಮಂದಿರು ಗಿಡದ ಕೆಳಗೆ ನಿಂತಿದ್ದರು. ಆಗ ಸಿಡಿಲು ಬಡಿದಿದ್ದು, ಪರಮಣ್ಣ ಸ್ಥಳದಲ್ಲಯೇ ಮೃತಪಟ್ಟಿದ್ದಾನೆ.
ಬೆಂಗಳೂರು (ಆ.09): ರಾಜ್ಯದಲ್ಲಿ ಗುಡುಗು-ಸಿಡಿಲು ಸಮೇತ ಶುಕ್ರವಾರ ಭರ್ಜರಿ ಮಳೆ ಸುರಿದಿದ್ದು, ಸಿಡಿಲು ಬಡಿದು ಓರ್ವ ಯುವಕ ಮೃತಪಟ್ಟಿದ್ದಾನೆ. ಬೆಳಗಾವಿ, ರಾಯಚೂರು, ಯಾದಗಿರಿ, ಗದಗ, ಹಾವೇರಿ ಸೇರಿ ಆರೇಳು ಜಿಲ್ಲೆಗಳಲ್ಲಿ ಧಾರಾಕಾರ ವರ್ಷಧಾರೆಗೆ ರಸ್ತೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಮದಲಿಂಗನಾಳ ಗ್ರಾಮದ ಹೊರವಲಯದಲ್ಲಿ ಪರಮಣ್ಣ ಕಕ್ಕೇರಾ (26) ಎಂಬ ಯುವಕ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಪರಮಣ್ಣ ತಮ್ಮ ಜಮೀನು ಕೆಲಸಕ್ಕೆ ಅಣ್ಣನ ಜತೆಗೆ ಹೋಗಿದ್ದ. ಗುಡುಗು ಸಹಿತ ಮಳೆ ಬರ್ತಿದ್ದಂತೆ ಅಣ್ಣ-ತಮ್ಮಂದಿರು ಗಿಡದ ಕೆಳಗೆ ನಿಂತಿದ್ದರು. ಆಗ ಸಿಡಿಲು ಬಡಿದಿದ್ದು, ಪರಮಣ್ಣ ಸ್ಥಳದಲ್ಲಯೇ ಮೃತಪಟ್ಟಿದ್ದಾನೆ. ಅಣ್ಣನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡೋಣಿ ನದಿಯ ರಭಸಕ್ಕೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಬಳಿಯಿರುವ ಸೇತುವೆಯಿಂದ ಲಾರಿಯೊಂದು ಕೊಚ್ಚಿಕೊಂಡು ಹೋಗಿದೆ. ಶುಕ್ರವಾರ ಮುಂಜಾನೆ 3 ಗಂಟೆಗೆ ತುಂಬಿ ಹರಿಯುತ್ತಿದ್ದ ನದಿಯನ್ನು ಲೆಕ್ಕಿಸದೇ ಚಾಲಕ ಲಾರಿಯನ್ನು ನದಿ ದಾಟಿಸಲು ಯತ್ನಿಸಿದಾಗ ಲಾರಿ ಕೊಚ್ಚಿಕೊಂಡು ಹೋಗಿದೆ. ಈ ವೇಳೆ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಕೂಡಲೇ ಚಾಲಕ ಲಾರಿಯಿಂದ ಜಿಗಿದು ಈಜಿಕೊಂಡು ದಡ ಸೇರಿದ್ದಾನೆ. ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿ, ಗುತ್ತಿಹಾಳ, ಬೋಳವಾಡ, ತಾಳಿಕೋಟೆ, ಹರನಾಳ, ಮಿಣಜಗಿ ಗ್ರಾಮಗಳ ಜಮೀನುಗಳಿಗೆ ಡೋಣಿ ನದಿ ನೀರು ನುಗ್ಗಿದ್ದು, ಸಂಪೂರ್ಣ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ರಸ್ತೆಗೆ ಉರುಳಿದ ಕಲ್ಲುಬಂಡೆಗಳು: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಿಲ್ಲಾತೋರಗಲ್ ಬಳಿ ಗುಡ್ಡಕುಸಿತವಾಗಿದ್ದು, ನಡುರಸ್ತೆಯಲ್ಲೇ ಬೃಹತ್ ಕಲ್ಲುಬಂಡೆಗಳು ಉರುಳಿಬಿದ್ದಿವೆ. ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸವದತ್ತಿ ತಾಲೂಕಿನಲ್ಲಿ ಹಳ್ಳ-ಕೊಳ್ಳಗಳು ಉಕ್ಕಿಹರಿದಿದ್ದು, ಶ್ರೀಕ್ಷೇತ್ರ ಯಲ್ಲಮ್ಮನ ದೇವಾಲಯಕ್ಕೆ ಮಳೆ ನುಗ್ಗಿದ ಪರಿಣಾಮ ಕ್ಷೇತ್ರದ ಎಣ್ಣೆಹೊಂಡ ಸೇರಿ ದೇವಸ್ಥಾನದ ಆವರಣ ಸಂಪೂರ್ಣ ಜಲಾವೃತವಾಗಿದೆ. ಸವದತ್ತಿ-ಉಗರಗೋಳ ನಡುವಿನ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಬಂದ್ ಆಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಯಲ್ಲಮ್ಮನಗುಡ್ಡಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಭಕ್ತರ ಸಂಚಾರಕ್ಕೆ ತೊಡಕಾಗಿದೆ.
ಮಸ್ಕಿ ಜಲಾಶಯ ಭರ್ತಿ: ರಾಯಚೂರು ಜಿಲ್ಲೆಯಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮಸ್ಕಿ ಜಲಾಶಯ ಭರ್ತಿ ಆಗಿದ್ದು, ಡ್ಯಾಂನಿಂದ ಹಿರೇಹಳ್ಳಕ್ಕೆ ನೀರು ಬಿಡಲಾಗಿದೆ. ಹಿರೇಹಳ್ಳ ತೀರದ ಜನರು ಎಚ್ಚರದಿಂದ ಇರುವಂತೆ ಮಸ್ಕಿ ತಾಲೂಕು ಆಡಳಿತದಿಂದ ಸೂಚನೆ ನೀಡಿದೆ. ಲಿಂಗಸಗೂರು ತಾಲೂಕಿ ನಾಗರಹಾಳ ಗ್ರಾಮದಲ್ಲಿ ಮನೆ ಛಾವಣಿ ಕುಸಿದಿದ್ದು, ಕುಟುಂಬಸ್ಥರು ಕ್ಷಣಮಾತ್ರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ತಾಜ್ ಬೇಗಂ ಎನ್ನುವವರ ಮನೆಯಲ್ಲಿ ರಾತ್ರಿ ಊಟ ಮುಗಿಸಿ ಕುಟುಂಬದ 8 ಜನರು ಮಲಗಿದ್ದರು. ತಡರಾತ್ರಿ ಮಲಗಿದವರ ಪಕ್ಕದಲ್ಲಿಯೇ ಮನೆಯ ಛಾವಣಿ ಕುಸಿದು ಬಿದ್ದಿದ್ದು, ಮನೆಯಲ್ಲಿರುವ ಸಾಮಾಗ್ರಿ ಚೆಲ್ಲಾಪಿಲ್ಲಿ ಆಗಿವೆ.
