ಈ ತಿಂಗಳ 15ರಿಂದ ಕರಾವಳಿಯ ಮೂರು ಜಿಲ್ಲೆಗಳು ಸೇರಿ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳು ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು (ಆ.11): ರಾಜ್ಯಾದ್ಯಂತ ಮಳೆ ಮುಂದುವರೆದಿದ್ದು, ಸೋಮವಾರದಿಂದ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಆದರೆ, ಆ.15 ರಿಂದ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಭಾರೀ ಮಳೆಯಾಗಿದೆ. ಸೋಮವಾರದಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದ್ದು, ಅಲ್ಲಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ.
ಸ್ವಾತಂತ್ರ್ಯಾದಿನ ಬಳಿಕ ಮತ್ತೆ ಭಾರೀ ಮಳೆ: ಈ ತಿಂಗಳ 15ರಿಂದ ಕರಾವಳಿಯ ಮೂರು ಜಿಲ್ಲೆಗಳು ಸೇರಿ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳು ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ವರದಿಯ ಪ್ರಕಾರ ಕಳೆದ 24 ಗಂಟೆಯಲ್ಲಿ ಗೌರಿಬಿದನೂರಿನಲ್ಲಿ ಅತಿ ಹೆಚ್ಚು 12 ಸೆಂ.ಮೀ ಮಳೆಯಾಗಿದೆ. ಅಫಜಲಪುರ 10, ತಾವರಗೆರ 9, ಬರಗೂರು 8, ಕೆರೂರು, ಕೆಂಬಾವಿ ಹಾಗೂ ಬಿಳಗಿಯಲ್ಲಿ ತಲಾ 7, ಹುನಗುಂದ, ಚಿಂಚೋಳಿ, ಬೆಳ್ಳಟ್ಟಿಯಲ್ಲಿ ತಲಾ 6, ಮಂಠಾಳ, ಹೊಸಪೇಟೆ, ಗಂಗಾವತಿ, ಗಾಣಗಪುರದಲ್ಲಿ ತಲಾ 5, ಸಿಂದಗಿ, ಮುದ್ದೇಬಿಹಾಳ, ಕೂಡಲಸಂಗಮದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
20 ಮರಗಳು ಧರೆಗೆ: ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಭಾರೀ ಮಳೆಯಾಗಿದ್ದು, ಮಹದೇವಪುರದ ಹೂಡಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದರೆ, ಮೈಸೂರು ರಸ್ತೆಯ ಬಿಜಿಎಸ್ ಮೇಲ್ಸೇತುವೆ, ಹೆಬ್ಬಾಳದ ಮುಖ್ಯ ರಸ್ತೆಯಲ್ಲಿ ಭಾರೀ ಪ್ರಮಾಣದ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಕಳೆದ ಎರಡ್ಮೂರು ದಿನದಿಂದ ನಗರದಲ್ಲಿ ಮಳೆ ಚುರುಕುಗೊಂಡಿದ್ದು, ಶನಿವಾರ ರಾತ್ರಿಯಿಂದ ಸಣ್ಣ ಪ್ರಮಾಣ ಮಳೆ ಆರಂಭಗೊಂಡಿತ್ತು.
ಭಾನುವಾರ ಬೆಳಿಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂತು. ನಗರದ ಕೆಲವು ಭಾಗದಲ್ಲಿ ಭಾರೀ ಮಳೆ ಸುರಿಯಿತು. ಮಹದೇವಪುರದ ಹೂಡಿ ವಾರ್ಡ್‌ನ ವಾರಣಾಸಿಯಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಬಿಬಿಎಂಪಿಯ ಮಳೆ ನೀರುಗಾಲುವೆಯಲ್ಲಿ ಹೂಳು ತುಂಬಿಕೊಂಡ ಹಿನ್ನೆಲೆಯಲ್ಲಿ ಬಿದ್ದ ಮಳೆ ನೀರು ಸರಾಗವಾಗಿ ಹರಿದು ಹೋಗದೇ ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಜಂಕ್ಷನ್, ಫ್ಲೈಓವರ್‌ನಲ್ಲಿ ನೀರು: ಮೈಸೂರು ರಸ್ತೆಯ ಬಿಜಿಎಸ್ ಮೇಲ್ಸೇತುವೆ, ಹೆಬ್ಬಾಳದ ಕೆಂಪಾಪುರದ ಮುಖ್ಯ ರಸ್ತೆಯಲ್ಲಿ ಭಾರೀ ಪ್ರಮಾಣ ನೀರು ನಿಂತುಕೊಂಡು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ರಾಮಮೂರ್ತಿ ನಗರ ಸಿಗ್ನಲ್ ಬಳಿ, ಕೆಆರ್ ಪುರ ಕಡೆಯಿಂದ ಹೊಸಕೋಟೆ ಮಾರ್ಗವಾಗಿ ಹೋಗುವ ಓಎಂಆರ್ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರ ಸುಗಮ ಸಂಚಾರಕ್ಕೆ ಪರದಾಡಿದರು.
ಉಳಿದಂತೆ ಥಣಿಸಂದ್ರ ಮತ್ತು ನಾಗವಾರ ಜಂಕ್ಷನ್ ಮಾರ್ಗ, ಸಿಟಿ ಮಾರ್ಕೆಟ್ ವೃತ್ತ ದಿಂದ ಎಸ್‌ಜೆಪಿ ವೃತ್ತ, ಬಾಗಲೂರು ಕ್ರಾಸ್ ಯಿಂದ ಐಎಎಫ್ ಜಂಕ್ಷನ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಹೆಬ್ಬಾಳದಿಂದ ಬೆಂಗಳೂರು ಕಡೆಗೆ, ದೇವಿನಗರದಿಂದ ಕುವೆಂಪು ವೃತ್ತದ ಮಾರ್ಗ, ಕುವೆಂಪು ವೃತ್ತದಿಂದ ದೇವಿನಗರ ಮಾರ್ಗ, ವಡ್ಡರಪಾಳ್ಯದಿಂದ ಹೆಣ್ಣೂರು ಮಾರ್ಗದಲ್ಲಿ ಮಳೆ ನೀರು ನಿಂತುಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.
