Lokayukta raid Yadgir city council corruption: ಯಾದಗಿರಿ ನಗರಸಭೆಯ ಬಿಲ್ ಕಲೆಕ್ಟರ್ ನರಸಪ್ಪ, ಇ-ಖಾತಾ ಮಾಡಿಕೊಡಲು ₹8,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅರ್ಜಿದಾರರಿಂದ ₹5,000 ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಯಾದಗಿರಿ:(ಅ.3): ಇ-ಖಾತಾ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಯಾದಗಿರಿ ನಗರಸಭೆ ಅಧಿಕಾರಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.

ಯಾದಗಿರಿ ನಗರಸಭೆ ಕಚೇರಿಯ ಬಿಲ್ ಕಲೆಕ್ಟರ್ ಆಗಿರುವ ನರಸಪ್ಪ ಲೋಕಾಬಲೆಗೆ ಬಿದ್ದಿರುವ ಅಧಿಕಾರಿ. ಇ-ಖಾತಾ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇ-ಖಾತಾಗೆ 8 ಸಾವಿರಕ್ಕೆ ಬೇಡಿಕೆಯಿಟ್ಟಿದ್ದ ಭ್ರಷ್ಟ:

ನರಸಪ್ಪ ಇ-ಖಾತಾ ಸೌಲಭ್ಯಕ್ಕಾಗಿ ಅರ್ಜಿದಾರ ಶಶಿಕುಮಾರ್ ಬಳಿ 8,000 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಮುಂಗಡವಾಗಿ 5 ಸಾವಿರ ರೂಪಾಯಿ ಕೊಡುವುದಾಗಿ ಹೇಳಿದ್ದರು. 5,000 ರೂ. ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಲೋಕಾಯುಕ್ತ ಡಿವೈಎಸ್‌ಪಿ ಜೆ.ಎಚ್. ಇನಾಂದಾರ್, ಪಿಐ ಸಿದ್ದರಾಯ ಮತ್ತು ಸಂಗಮೇಶ ನೇತೃತ್ವದ ತಂಡವು ದಾಳಿ ನಡೆಸಿತು. ಈ ವೇಳೆ ಲಂಚದ ಹಣ ಸಹಿತ ನರಸಪ್ಪನನ್ನು ವಶಕ್ಕೆ ಪಡೆಯಲಾಯಿತು. ದಾಳಿಯ ಬಳಿಕ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆಯಿಂದ ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂಬ ಸಾರ್ವಜನಿಕ ಆರೋಪಗಳಿಗೆ ಮತ್ತಷ್ಟು ಬಲಗೊಂಡಿವೆ. ಲೋಕಾಯುಕ್ತ ತಂಡವು ತನಿಖೆಯನ್ನು ಮುಂದುವರೆಸಿದ್ದು, ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿದ್ಧತೆ ನಡೆಸಿದೆ.