ಸಾಗರ ತಾಲೂಕಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಂಗವೈಕಲ್ಯ ಪ್ರಮಾಣಪತ್ರ ನೀಡಲು ಲಂಚ ಪಡೆಯುತ್ತಿದ್ದ ಕ್ಲರ್ಕ್ ನೀಲಕಂಠೇಗೌಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 1,500 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ (ಆ.13): ಅಂಗವೈಕಲ್ಯ ಪ್ರಮಾಣ ಪತ್ರ ನೀಡಲು 1,500 ರೂ. ಲಂಚ ಪಡೆಯುತ್ತಿದ್ದ ವೇಳೆ ಸಾಗರ ತಾಲೂಕಿನ ಮೆಗ್ಗಾನ್ ಆಸ್ಪತ್ರೆಯ ಕ್ಲರ್ಕ್ ಕ್ಲರ್ಕ್ ನೀಲಕಂಠೇಗೌಡ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಅಂದಾಸುರ ಗ್ರಾಮದ ನಿವಾಸಿಯೊಬ್ಬರು ತಮ್ಮ 8 ವರ್ಷದ ಪುತ್ರಿಗೆ ಅಂಗವೈಕಲ್ಯ ಪ್ರಮಾಣಪತ್ರ ಪಡೆಯಲು ಆಸ್ಪತ್ರೆಯಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದರು. 15 ದಿನಗಳ ಹಿಂದೆ ಹೊರರೋಗಿಗಳ ವಿಭಾಗದಲ್ಲಿ ನೋಂದಣಿ ಮಾಡಿಸಿ, ವೈದ್ಯರಿಂದ ತಪಾಸಣೆಗೊಳಪಡಿಸಿದ್ದರು. ತಪಾಸಣೆ ಬಳಿಕ ಅಗತ್ಯ ದಾಖಲೆಗಳನ್ನು ನೀಲಕಂಠೇಗೌಡರಿಗೆ ಸಲ್ಲಿಸಿದ್ದರು. ಆದರೆ, ಪ್ರಮಾಣಪತ್ರ ನೀಡಲು 1,500 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ. ಲಂಚಕ್ಕಾಗಿ ಉದ್ದೇಶಪೂರ್ವಕವಾಗಿ ದಾಖಲೆಗಳನ್ನು ಮುಂದೂಡುತ್ತಿದ್ದರು. ಈ ಕುರಿತು ಒತ್ತಡಕ್ಕೊಳಗಾದ ದೂರುದಾರರು ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿದರು.

ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ಮತ್ತು ಇನ್ಸ್ಪೆಕ್ಟರ್ ವೀರಬಸಪ್ಪ ಎಲ್ ಕುಸಲಾಪುರ ನೇತೃತ್ವದಲ್ಲಿ ಯೋಜಿತ ಕಾರ್ಯಾಚರಣೆ ನಡೆಸಲಾಯಿತು. ಮೆಗ್ಗಾನ್ ಆಸ್ಪತ್ರೆಯ ಕಚೇರಿಯಲ್ಲಿ ನೀಲಕಂಠೇಗೌಡ 1,500 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಲೋಕಾಯುಕ್ತ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮಕ್ಕಾಗಿ ತನಿಖೆ ಆರಂಭಿಸಿದ್ದಾರೆ.

ಈ ಘಟನೆಯು ಸರ್ಕಾರಿ ಆಸ್ಪತ್ರೆಗಳಲ್ಲಿ ಲಂಚದ ಕಾಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಲೋಕಾಯುಕ್ತ ಪೊಲೀಸರ ಈ ಕಾರ್ಯಾಚರಣೆಯನ್ನು ಸ್ವಾಗತಿಸಿರುವ ನಾಗರಿಕರು, ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮತ್ತಷ್ಟು ಕಠಿಣ ಕ್ರಮಗಳನ್ನು ಕೋರಿದ್ದಾರೆ.