ಯಾದಗಿರಿ ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ವಿದೇಶಕ್ಕೆ ರವಾನೆ ಆಗುತ್ತಿರುವ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ತನಿಖೆಗೆ ಒಪ್ಪಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಮಂಗಳವಾರ ಆದೇಶಿಸಿದ್ದಾರೆ.

ಬೆಂಗಳೂರು (ಸೆ.17): ಯಾದಗಿರಿ ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ವಿದೇಶಕ್ಕೆ ರವಾನೆ ಆಗುತ್ತಿರುವ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ತನಿಖೆಗೆ ಒಪ್ಪಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಮಂಗಳವಾರ ಆದೇಶಿಸಿದ್ದಾರೆ. ಯಾದಗಿರಿ ಜಿಲ್ಲೆ ಗುರಮಿಠ್ಕಲ್ ತಾಲೂಕಿನಿಂದ ರಾಜ್ಯದ ಬಡವರ ಪಾಲಿನ ಪಡಿತರ ಅಕ್ಕಿಯನ್ನು ಗಲ್ಫ್‌ ದೇಶಗಳು, ಫ್ರಾನ್ಸ್‌ ಸೇರಿದಂತೆ ವಿದೇಶಕ್ಕೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂಬ ದಂಧೆಯನ್ನು ಸೆ.8ರಂದು ‘ಕನ್ನಡಪ್ರಭ’ ಬಯಲುಗೊಳಿಸಿತ್ತು. ಈ ಅಕ್ಕಿ ಹಗರಣವು ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಈ ಬಗ್ಗೆ ಗುರಮಿಠ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಐವರ ಬಂಧನವಾಗಿತ್ತು. ಈ ಪ್ರಕರಣದ ಜಾಲವು ಬಹು ವಿಸ್ತಾರವಾಗಿರುವ ಕಾರಣಕ್ಕೆ ಹೆಚ್ಚಿನ ತನಿಖೆಗೆ ಸಿಐಡಿಗೆ ಡಿಜಿಪಿ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಅಕ್ಕಿ ಹಗರಣದ ಬಗ್ಗೆ ಸಿಐಡಿಯಲ್ಲಿ ಎಸ್ಪಿ ನೇತೃತ್ವದಲ್ಲಿ ತಂಡ ರಚನೆಯಲಾಗಿದ್ದು, ಮತ್ತಷ್ಟು ಜನರಿಗೆ ತನಿಖೆ ಬಿಸಿ ತಟ್ಟಲಿದೆ.

ಪ್ರಕರಣದ ಹಿನ್ನೆಲೆ

ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ರಫ್ತು ಕುರಿತು "ಕನ್ನಡಪ್ರಭ" ವರದಿ ಸಂಚಲನ ಮೂಡಿಸಿದೆ. ಸೆ.5ರಂದು ಆಹಾರ ಇಲಾಖೆ ಅಧಿಕಾರಿಗಳು ಯಾದಗಿರಿ ಜಿಲ್ಲೆಯ ಗುರುಮಠಕಲ್‌ನ 2 ರೈಸ್‌ಮಿಲ್‌ಗಳ ಮೇಲೆ ದಾಳಿ ಮಾಡಿದಾಗ 5000-6000 ಟನ್‌ನಷ್ಟು ಪಡಿತರ ಅಕ್ಕಿ ದಾಸ್ತಾನು ಪತ್ತೆಯಾಗಿತ್ತು. ಈ ಅಕ್ಕಿಯನ್ನು ಪಾಲಿಶ್‌ ಮಾಡಿ, ಬೇರೆ ಬೇರೆ ಬ್ರ್ಯಾಂಡ್‌ಗಳ ಹೆಸರಲ್ಲಿ ವಿದೇಶಗಳಿಗೆ ಮಾರಾಟ ಮಾಡುತ್ತಿರುವ ಜಾಲ ಸಿಕ್ಕಿಬಿದ್ದು, ಎರಡೂ ರೈಸ್‌ಮಿಲ್‌ನ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಅಕ್ರಮದ ಬಗ್ಗೆ ಸೆ.8ರಂದು ಕನ್ನಡಪ್ರಭ ‘ಅನ್ನಭಾಗ್ಯ ಅಕ್ಕಿ ಫಾರಿನ್‌’ ತಲೆಬರದಡಿ ಪ್ರಕಟಿಸಿದ್ದ ಮುಖಪುಟದ ವರದಿ ಸಂಚಲನ ಮೂಡಿಸಿತ್ತು. ಈ ಕುರಿತ ಕನ್ನಡಪ್ರಭ ಸಂಪಾದಕೀಯ ಸರ್ಕಾರವನ್ನು ಎಚ್ಚರಿಸಿತ್ತು.

ಅಕ್ಕಿ ಹಗರಣದಲ್ಲಿ ಯಾದಗಿರಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಅವಮಾನದ ಸಂಗತಿ. ರೈಸ್‌ಮಿಲ್‌ವೊಂದರಲ್ಲಿ ಭಾರಿ ಪ್ರಮಾಣದ ಅಕ್ಕಿ ದಾಸ್ತಾನು ಪತ್ತೆಯಾಗಿರುವುದು ನೋಡಿದರೆ, ಚಿಲ್ಲರೆ ಅಂಗಡಿಗಳಿಂದಲ್ಲ, ನ್ಯಾಯಬೆಲೆ ಅಂಗಡಿಗಳ ಡೀಲರುಗಳಿಂದಲೇ ದಾಸ್ತಾನು ಅಕ್ರಮ ಪೂರೈಕೆ ಆಗಿರುವ ಬಗ್ಗೆ ಅನುಮಾನವಿದೆ.
- ಶರಣಬಸಪ್ಪಗೌಡ ದರ್ಶನಾಪುರ, ಸಚಿವ