ಅಂಜನಾದ್ರಿ ಬೆಟ್ಟವನ್ನು ವಿಶ್ವಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ. ವೃದ್ಧರಿಗೂ ಬೆಟ್ಟ ಏರುವ ವ್ಯವಸ್ಥೆ, ಡಾರ್ಮೆಟರಿ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು. ರೋಪ್‌ವೇ ನಿರ್ಮಾಣಕ್ಕೂ ಚಿಂತನೆ ನಡೆದಿದೆ.
ಕೊಪ್ಪಳ (ಆ.03): ಹನುಮಂತನ ಜನ್ಮಸ್ಥಳ ಎಂದು ನಂಬಲಾಗಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟವನ್ನು ವಿಶ್ವಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವೃದ್ಧರೂ ಕೂಡ ಅಂಜನಾದ್ರಿ ಬೆಟ್ಟದ ಮೇಲೆ ಹೋಗಿ ಆಂಜನೇಯನ ದರ್ಶನ ಪಡೆದು ಪ್ರದಕ್ಷಿಣೆ ಹಾಕುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಪ್ರವಾಸೋದ್ಯಮದ ಜೊತೆಗೆ ಈ ಸ್ಥಳದ ಪೌರಾಣಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಎತ್ತಿಹಿಡಿಯುವಂತೆ ಅಭಿವೃದ್ಧಿಪಡಿಸಲು ನಿರ್ದೇಶನ ನೀಡಿದ್ದಾರೆ.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಬುಧವಾರ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಸಿ.ಎಂ. ಸಿದ್ದರಾಮಯ್ಯ, ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ದೇಶೀ ಮತ್ತು ವಿದೇಶೀ ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಶೇಷವಾಗಿ ಹನುಮ ಜಯಂತಿಯ ಸಮಯದಲ್ಲಿ ಯಾತ್ರಿಕರ ಸಂಖ್ಯೆ ಅಪಾರವಾಗಿರುತ್ತದೆ. ಆದ್ದರಿಂದ, ಇಲ್ಲಿ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅತ್ಯಗತ್ಯ ಎಂದರು.
ಯಾತ್ರಿಕರಿಗೆ ಸೌಲಭ್ಯಗಳ ಅಭಿವೃದ್ಧಿ:
ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುವವರಿಗೆ ಅನುಕೂಲವಾಗುವಂತೆ ಡಾರ್ಮೆಟರಿ (ವಿದ್ಯಾರ್ಥಿ ನಿಲಯ) ವ್ಯವಸ್ಥೆ, ವಯಸ್ಕರು ಮತ್ತು ಹಿರಿಯರಿಗೆ ಸುಲಭವಾಗಿ ಬೆಟ್ಟ ಏರಲು ಅನುಕೂಲವಾಗುವಂತೆ ಮೆಟ್ಟಿಲುಗಳು, ಸಮುದಾಯ ಭವನ ನಿರ್ಮಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅಲ್ಲದೆ, ಬೆಟ್ಟದ ತುದಿಗೆ ತೆರಳಲು ಪ್ರದಕ್ಷಿಣಾ ಮಾರ್ಗ ನಿರ್ಮಿಸುವ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಅನುದಾನ ಮತ್ತು ಭೂಸ್ವಾಧೀನದ ಸಮಸ್ಯೆ:
ಈಗಾಗಲೇ ಅಂಜನಾದ್ರಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಎರಡು ಹಂತಗಳಲ್ಲಿ ಒಟ್ಟು ₹200 ಕೋಟಿ ಮಂಜೂರಾಗಿದೆ. ಆದರೆ, ಇದುವರೆಗೂ ಕೇವಲ ₹10 ಕೋಟಿ ಮಾತ್ರ ಬಿಡುಗಡೆಯಾಗಿದೆ. ಹೀಗಾಗಿ, ಉಳಿದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆಗೆ ಸೂಚಿಸಿದರು. ಇದರ ಜೊತೆಗೆ, ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ 101.30 ಎಕರೆ ಖಾಸಗಿ ಜಮೀನು ಭೂಸ್ವಾಧೀನಕ್ಕೆ ಬೇಕಾಗಿರುವ ಹೆಚ್ಚುವರಿ ಅನುದಾನ ಒದಗಿಸುವಂತೆ ತಿಳಿಸಿದರು.
ಅಲ್ಲದೆ, ಬಹುತೇಕ ಅಭಿವೃದ್ಧಿ ಕಾರ್ಯಗಳು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಜಮೀನುಗಳಲ್ಲಿರುವುದರಿಂದ, ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (NOC) ಪಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರೋಪ್‌ವೇ ನಿರ್ಮಾಣಕ್ಕೆ ಪಿಪಿಪಿ ಮಾದರಿ:
ಅಂಜನಾದ್ರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಯೋಜನೆಯು 2024-25ನೇ ಸಾಲಿನ ಬಜೆಟ್ ಘೋಷಣೆಯ ಒಂದು ಭಾಗವಾಗಿದೆ. ರಾಜ್ಯದ 11 ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ರೋಪ್‌ವೇಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಯು ಭಕ್ತರು ಮತ್ತು ಪ್ರವಾಸಿಗರಿಗೆ ಬೆಟ್ಟವನ್ನು ಸುಲಭವಾಗಿ ತಲುಪಲು ನೆರವಾಗಲಿದೆ.
ಈ ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಮತ್ತು ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಮಹತ್ವದ ನಿರ್ಧಾರಗಳು ಅಂಜನಾದ್ರಿ ಕ್ಷೇತ್ರಕ್ಕೆ ಹೊಸ ರೂಪ ನೀಡಲಿವೆ ಎಂದು ನಿರೀಕ್ಷಿಸಲಾಗಿದೆ.
