ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ತಮ್ಮ 77ನೇ ಇಳಿ ವಯಸ್ಸಿನಲ್ಲಿ ವಿಶ್ವವಿಖ್ಯಾತ ಅಂಜನಾದ್ರಿಯ 575 ಮೆಟ್ಟಿಲುಗಳನ್ನು ಕೇವಲ 30 ನಿಮಿಷಗಳಲ್ಲಿ ಏರಿ, ಆಂಜನೇಯಸ್ವಾಮಿಯ ದರ್ಶನ ಪಡೆದಿದ್ದಾರೆ.

ಕೊಪ್ಪಳ : ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ತಮ್ಮ 77ನೇ ಇಳಿ ವಯಸ್ಸಿನಲ್ಲಿ ವಿಶ್ವವಿಖ್ಯಾತ ಅಂಜನಾದ್ರಿಯ 575 ಮೆಟ್ಟಿಲುಗಳನ್ನು ಕೇವಲ 30 ನಿಮಿಷಗಳಲ್ಲಿ ಏರಿ, ಆಂಜನೇಯಸ್ವಾಮಿಯ ದರ್ಶನ ಪಡೆದಿದ್ದಾರೆ.

ಬುಧವಾರ ಅವರು ಕುಟುಂಬ ಸದಸ್ಯರೊಂದಿಗೆ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿದ್ದರು. ಬೆಳಗ್ಗೆ 7.15ರ ಸುಮಾರಿಗೆ ಕಮಲಾಪುರ, ಬುಕ್ಕಸಾಗರ ಮೂಲಕ ಅಂಜನಾದ್ರಿಗೆ ಆಗಮಿಸಿದರು. ರಾಜ್ಯಪಾಲರು ಸರ್ಕಾರಿ ಕಾರಿನಲ್ಲಿ ಸಂಚರಿಸಿದರೆ, ಅವರ ಕುಟುಂಬದವರು 5 ಖಾಸಗಿ ಇನ್ನೋವಾ ಕಾರುಗಳಲ್ಲಿ ಆಗಮಿಸಿದರು.

ಬಳಿಕ, ರಾಜ್ಯಪಾಲರು ಯುವಕರಂತೆ ಸರಸರನೇ ಬೆಟ್ಟವೇರಿದರು. ಸಾಮಾನ್ಯವಾಗಿ ಯುವ ಉತ್ಸಾಹಿಗಳು ಬೆಟ್ಟವೇರಲು ಅರ್ಧ ಗಂಟೆ, ಉಳಿದಂತೆ ಎಲ್ಲರೂ ಗಂಟೆಗಟ್ಟಲೇ ಸಮಯ ತೆಗೆದುಕೊಳ್ಳುತ್ತಾರೆ. ಏಕೆಂದರೆ ಕಡಿದಾದ ಬೆಟ್ಟ ಇದಾಗಿದ್ದು, ಕಲ್ಲಿನ ಮೆಟ್ಟಿಲು ಏರುವುದು ಸುಲಭವಲ್ಲ. ಆದರೆ, ರಾಜ್ಯಪಾಲರು ಎಲ್ಲಿಯೂ ವಿಶ್ರಾಂತಿ ಸಹ ಪಡೆಯದೇ ಕೇವಲ 30 ನಿಮಿಷಗಳಲ್ಲಿ 575 ಮೆಟ್ಟಿಲುಗಳನ್ನು ಸರಾಗವಾಗಿ ಏರುವ ಮೂಲಕ ಎಲ್ಲರೂ ಬೆರಗಾಗುವಂತೆ ಮಾಡಿದರು.

ಬಳಿಕ, ಅಂಜನಾದ್ರಿ ಪಾದಗಟ್ಟಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ, ಆಂಜನೇಯ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಜಿಲ್ಲಾಡಳಿತದ ವತಿಯಿಂದ ರಾಜ್ಯಪಾಲರನ್ನು ಸನ್ಮಾನಿಸಲಾಯಿತು.

ಹಂಪಿಗೆ ಭೇಟಿ:

ಬಳಿಕ, ಕುಟುಂಬ ಸಮೇತರಾಗಿ ಹಂಪಿಗೆ ಆಗಮಿಸಿ, ಇಲ್ಲಿಯ ಐತಿಹಾಸಿಕ ಸ್ಮಾರಕ ವೀಕ್ಷಿಸಿದರು. ಈ ವೇಳೆ, ವಿರೂಪಾಕ್ಷೇಶ್ವರ ದೇವಾಲಯದ ಆನೆ ಲಕ್ಷ್ಮೀ, ಹೂಮಾಲೆ ಅರ್ಪಿಸಿ ರಾಜ್ಯಪಾಲರನ್ನು ಬರಮಾಡಿಕೊಂಡಿತು. ವಿರೂಪಾಕ್ಷೇಶ್ವರ ದೇವಾಲಯದಲ್ಲಿ ದೇವರ ದರ್ಶನ ಪಡೆದ ಬಳಿಕ, ಉಗ್ರ ನರಸಿಂಹ, ಬಡವಿ ಲಿಂಗ ಸ್ಮಾರಕ ವೀಕ್ಷಿಸಿದರು. ನಂತರ, ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರಳಿ, ದೇವಾಲಯದ ಆವರಣದಲ್ಲಿರುವ ಕಲ್ಲಿನ ತೇರು, ಸಪ್ತಸ್ವರ ಮಂಟಪ, ಮದುವೆ ಮಂಟಪಗಳನ್ನು ವೀಕ್ಷಿಸಿದರು.

ಇದಕ್ಕೂ ಮುನ್ನ, ದಾರಿಮಧ್ಯೆ, ರಾಜ್ಯಪಾಲರು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದರು. ಡ್ಯಾಂ ಬಳಿ ತಮ್ಮ ಮೊಮ್ಮಗಳ ಚಿತ್ರವನ್ನು ಸ್ವತಃ ತಾವೇ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದರು.

2 ದಿನದ ಹಿಂದೆ ಕೂಡ ರಾಜ್ಯಪಾಲರು ತಿರುಪತಿ ಸೇರಿ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದ್ದರು,

- ಯುವಕರೂ ನಾಚುವಂತೆ ಬರೀ 30 ನಿಮಿಷದಲ್ಲಿ 575 ಮೆಟ್ಟಿಲು ಹತ್ತಿ ಆಂಜನೇಯಗೆ ವಿಶೇಷ ಪೂಜೆ

- ಕಡಿದಾದ ಮೆಟ್ಟಿಲಿರುವ ಕಲ್ಲಿನ ಬೆಟ್ಟ ಏರುವಾಗ ವಿಶ್ರಾಂತಿಯನ್ನೂ ಪಡೆಯದ ಗೆಹಲೋತ್‌

- ಕೇವಲ 30 ನಿಮಿಷದಲ್ಲಿ ಅಂಜನಾದ್ರಿ ಬೆಟ್ಟ ಏರಿದ ಗೆಹಲೋತ್‌ । ಕುಟುಂಬ ಸಮೇತ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಕೆ

- ಯುವಕರೂ ಕಷ್ಟಪಟ್ಟು ಬೆಟ್ಟ ಹತ್ತುವಾಗ ರಾಜ್ಯಪಾಲರು ಸರಸರನೇ ಬೆಟ್ಟ ಹತ್ತಿದ್ದು ನೋಡಿ ಎಲ್ಲರಿಗೂ ಅಚ್ಚರಿ । ಬಳಿಕ ಹಂಪಿಗೂ ಭೇಟಿ

- ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ರಾಮಭಕ್ತ ಹನುಮನ ಜನ್ಮಸ್ಥಳವೆಂದೇ ಪ್ರಸಿದ್ಧ

- ಇಲ್ಲಿಗೆ ಕುಟುಂಬ ಸಮೇತರಾಗಿ ಆಗಮಿಸಿದ್ದ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌

- ಬೆಳಗ್ಗೆ 7.15ಕ್ಕೆ ಆಗಮಿಸಿ ಬೆಟ್ಟ ಏರಿ 7.45ಕ್ಕೆ ದೇಗುಲ ತಲುಪಿದ ರಾಜ್ಯಪಾಲರು

- ಅಂಜನಾದ್ರಿ ಪಾದಗಟ್ಟಿಯಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿ, ಆಂಜನೇಯ ಸ್ವಾಮಿ ದರ್ಶನ

- ಬಳಿಕ ಹಂಪಿಗೆ ಭೇಟಿ, ವಿರೂಪಾಕ್ಷನ ದರ್ಶನ. ಕಲ್ಲಿನ ತೇರು ಸೇರಿ ಸ್ಮಾರಕ ವೀಕ್ಷಣೆ

- ತುಂಗಭದ್ರಾ ಜಲಾಶಯಕ್ಕೂ ಭೇಟಿ. ಮೊಮ್ಮಗಳ ಜತೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮ