ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ದೇಗುಲವನ್ನು ಬಂದ್ ಮಾಡಲಾಗಿದೆ. ಪೂಜೆ ಬಳಿಕ ದೇವಾಲಯದ ಬಾಗಿಲು ಮುಚ್ಚಲಾಗಿದ್ದು, ನಾಳೆ ಬೆಳಿಗ್ಗೆ ಶುದ್ಧೀಕರಣದ ನಂತರ ತೆರೆಯಲಾಗುವುದು.
ಕೊಪ್ಪಳ (ಸೆ.7): ಇಂದು ಚಂದ್ರ ಗ್ರಹಣ ಗೋಚರ ಹಿನ್ನೆಲೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮ ಜನ್ಮಸ್ಥಳ ಅಂಜನಾದ್ರಿ ದೇಗುಲ ಬಂದ್ ಮಾಡಲಾಯಿತು. ಪವಿತ್ರ ಅಂಜನಾದ್ರಿ ಬೆಟ್ಟದಲ್ಲಿ ದೇಗುಲ ಬಂದ್ ಮಾಡುವ ಮುನ್ನ ಪೂಜೆ ಮಾಡಲಾಯಿತು. ಸಂಜೆ ದೇವಸ್ಥಾನದ ಪ್ರಧಾನ ಅರ್ಚಕ ವಿದ್ಯಾದಾಸಬಾಬಾ ಅವರು ವಿಶೇಷ ಮಹಾಮಂಗಳಾರತಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಭಕ್ತರು ಭಕ್ತಿಭಾವದ ಪೂಜಿಸಿದರು. ಪೂಜೆಯ ಬಳಿಕ ದೇವಸ್ಥಾನದ ಸಿಬ್ಬಂದಿಗಳು ಬಾಗಿಲನ್ನು ಬಂದ್ ಮಾಡಿದರು.
ಚಂದ್ರಗ್ರಹಣದ ಕಾರಣದಿಂದ ದೇವಸ್ಥಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಭಕ್ತರು ಬೆಟ್ಟದಿಂದ ಕೆಳಗಿಳಿಯುವ ದೃಶ್ಯ ಕಂಡುಬಂತು.
ಅಂಜನಾದ್ರಿ ಬೆಟ್ಟವು ಶ್ರೀ ಹನುಮಂತನ ಜನ್ಮಸ್ಥಳವೆಂದು ಪರಿಗಣಿತವಾಗಿದ್ದು, ದೇಶದಾದ್ಯಂತ ಭಕ್ತರಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಚಂದ್ರಗ್ರಹಣದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಯಾವುದೇ ಪೂಜಾ ಕಾರ್ಯಕ್ರಮಗಳನ್ನು ನಡೆಸದಿರುವುದು ಶಾಸ್ತ್ರೀಯ ಸಂಪ್ರದಾಯವಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಮುಚ್ಚಲಾಗಿದೆ
ನಾಳೆ ಬೆಳಗ್ಗೆ ಶುದ್ಧೀಕರಣ ಕಾರ್ಯಕ್ರಮಗಳನ್ನು ನಡೆಸಿದ ಬಳಿಕ ದೇವಸ್ಥಾನವನ್ನು ಎಂದಿನಂತೆ ಭಕ್ತರಿಗಾಗಿ ತೆರೆಯಲಾಗುವುದು.
