ಯತೀಂದ್ರ ಮಾತಿಗೆ ರಾಜಣ್ಣ ದನಿ; 'ಅವರೆಲ್ಲ ಮೇಧಾವಿಗಳಿದ್ದಾರೆ ನೋಟಿಸ್ ಕೊಡಲಿ ನೋಡೋಣ ಎಂದಿದ್ದು ಯಾರಿಗೆ?. ಸಿದ್ದರಾಮಯ್ಯನವರ ಸೈದ್ಧಾಂತಿಕ ಉತ್ತರಾಧಿಕಾರಿಯಾಗಲು ಸತೀಶ್ ಜಾರಕಿಹೊಳಿ ಸಮರ್ಥರು ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಸಮರ್ಥಿಸಿಕೊಂಡಿದ್ದಾರೆ.

-ಬೆಂಗಳೂರು (ಅ.2): ಸಚಿವ ಸತೀಶ್ ಜಾರಕಿಹೊಳಿ ಕುರಿತ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ನಮ್ಮ ಸಹಮತವಿದೆ. ಅವರ ಹೇಳಿಕೆಯಲ್ಲಿ ತಪ್ಪೇನಿದೆ? ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರ ಸೈದ್ಧಾಂತಿಕ ಉತ್ತರಾಧಿಕಾರಿ ಸ್ಥಾನ ತುಂಬಲು ಸತೀಶ್ ಜಾರಕಿಹೊಳಿ ಸಮರ್ಥರು ಎಂಬ ಯತೀಂದ್ರ ಹೇಳಿಕೆಯನ್ನು ರಾಜಣ್ಣ ಬಲವಾಗಿ ಸಮರ್ಥಿಸಿಕೊಂಡಿದ್ದು, ‘ಸಿದ್ದರಾಮಯ್ಯ ನಂತರ ಅಹಿಂದ ಚಳವಳಿ ಮುಂದುವರೆಸುವಲ್ಲಿ ಜಾರಕಿಹೊಳಿ ಸಮರ್ಥರಿದ್ದಾರೆ ಎಂದು ಯತೀಂದ್ರ ಬೆಳಗಾವಿಯಲ್ಲಿ ಹೇಳಿದ್ದಾರೆ. ಇದಕ್ಕೆ ನನ್ನ ಸಹಮತವಿದೆ. ಸತೀಶ್ ಜಾರಕಿಹೊಳಿ ಈಗ ಮುಖ್ಯಮಂತ್ರಿ ಆಗಲ್ಲ. 2028ಕ್ಕೆ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಎಂದಿದ್ದಾರೆ. ಅದಕ್ಕೂ ನನ್ನ ಸಹಮತವಿದೆ’ ಎಂದು ಹೇಳಿದ್ದಾರೆ.

ಅವರೆಲ್ಲ ಮೇಧಾವಿಗಳಿದ್ದಾರೆ:

ಯತೀಂದ್ರಗೆ ನೋಟೀಸ್ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ರಾಜಣ್ಣ, ಡಿ.ಕೆ.ಶಿವಕುಮಾರ್ ಮತ್ತು ತಂಡ ಒತ್ತಡ ಹೇರಿದರೆ ನೋಡೋಣ. ಅವರೆಲ್ಲ ಮೇಧಾವಿಗಳಿದ್ದಾರೆ. ತೀರ್ಮಾನ ನೋಡೋಣ ಬಿಡಿ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ಸಂಪುಟ ಸೇರ್ಪಡೆಯಾಗುವ ಸಿಹಿ ಸುದ್ದಿ ಇದೆಯೇ ಎಂಬ ಪ್ರಶ್ನೆಗೆ, ನನಗೆ ಎಲ್ಲ ಕಾಲದಲ್ಲಿಯೂ ಅದೃಷ್ಟ ಇದೆ. ಮತ್ತೆ ಮಂತ್ರಿಯಾಗುವ ಬಗ್ಗೆ ನಾನು ಏನೂ ಹೇಳಲ್ಲ. ಹೈಕಮಾಂಡ್ ಎಲ್ಲ ತೀರ್ಮಾನ ಮಾಡುತ್ತದೆ. ನಮ್ಮ ಮೇಲಿನ ಅಭಿಮಾನಕ್ಕೆ ಅಭಿಮಾನಿಗಳು ಮಾತಾಡುತ್ತಾರೆ ಎಂದಷ್ಟೇ ಹೇಳಿದರು.

ನಮ್ಮ ಸಮುದಾಯಕ್ಕೆ ಸಚಿವ ಸ್ಥಾನ ಬೇಕು:

ನಮ್ಮ ಸಮುದಾಯದರು 16 ಜನ ಶಾಸಕರು ಇದ್ದೇವೆ. ಇಬ್ಬರನ್ನು ತೆಗೆದಿದ್ದಾರೆ. ಆ ಸ್ಥಾನ ತುಂಬಬೇಕು. ಸದ್ಯ ಸಿಎಂ ಬದಲಾವಣೆ ಇಲ್ಲವೇ ಇಲ್ಲ. ಅದನ್ನೆಲ್ಲ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾನು ದೆಹಲಿಗೆ ಹೋಗುತ್ತೇನೆ. ನನಗೆ ಸಚಿವಗಿರಿ ಕೊಡಿ ಅಂತ ಹೋಗಲ್ಲ. ನನ್ನ ಮೇಲೆ ಬಂದಿರೋ ಆರೋಪದ ಬಗ್ಗೆ ಸ್ಪಷ್ಟನೆ ಕೊಡಲು ಹೋಗ್ತೇನೆ ಎಂದು ರಾಜಣ್ಣ ಹೇಳಿದರು.