ರಾಜ್ಯದಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆಗೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಕರಿಗೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಸಮೀಕ್ಷೆ ವೇಳೆ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ₹20 ಲಕ್ಷ ಪರಿಹಾರ, ಗೌರವಧನವನ್ನು ₹20 ಸಾವಿರಕ್ಕೆ ಹೆಚ್ಚಳ ಮಾಡಿದೆ.

ಬೆಂಗಳೂರು (ಅ.07): ರಾಜ್ಯದಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಕಾರ್ಯದಲ್ಲಿ ಭಾಗವಹಿಸಲು ಉದ್ದೇಶಪೂರ್ವಕವಾಗಿ ಹಿಂದೇಟು ಹಾಕುವ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಆದರೆ, ಸಮೀಕ್ಷೆ ವೇಳೆ ಮೃತಪಟ್ಟ ಶಿಕ್ಷಕರ ಕುಟುಂಬಗಳಿಗೆ ₹20 ಲಕ್ಷ ಪರಿಹಾರ ನೀಡಲಾಗುವುದು. ಇನ್ನು ಸಮೀಕ್ಷಾ ಕಾರ್ಯಕ್ಕೆ ನೀಡಲಾಗುವ ಗೌರವ ಧನವನ್ನು ₹20 ಸಾವಿರದವರೆಗೆ ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಕಾರ್ಯದಲ್ಲಿ ತೊಡಗಿರುವ ಸುಮಾರು 1.20 ಲಕ್ಷ ಶಿಕ್ಷಕರು ಮತ್ತು 40 ಸಾವಿರ ಇತರ ಸಿಬ್ಬಂದಿ (ಒಟ್ಟು 1.60 ಲಕ್ಷ ಜನರು) ಮನವಿಯನ್ನು ಮಾಡಿದ್ದರು. ಶಿಕ್ಷಕರ ಸಂಘದ ಮನವಿ ಮೇರೆಗೆ ಸರ್ಕಾರವು ರಜೆ ಅವಧಿಯನ್ನು ಅ.18ರವರೆಗೆ ವಿಸ್ತರಣೆ ಮಾಡಿ ನಿರ್ಧಾರ ಕೈಗೊಂಡಿದೆ. ಕಾರ್ಯವನ್ನು ಅಕ್ಟೋಬರ್ 19 ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ದಸರಾ ರಜೆ ವಿಸ್ತರಣೆ: 12 ದಿನಗಳಲ್ಲಿ ಸಮೀಕ್ಷೆ ಮುಗಿಸಲು ಸೂಚನೆ:

'ಶಿಕ್ಷಕರು ಕನಿಷ್ಠ 10 ದಿನಗಳ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಕೇಳಿದ್ದರು. ಅವರ ಮನವಿ ಸ್ವೀಕರಿಸಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 'ಅಕ್ಟೋಬರ್ 18' ರವರೆಗೆ (8 ಕೆಲಸದ ದಿನಗಳು ಸೇರಿದಂತೆ ಒಟ್ಟು 12 ದಿನಗಳು) ದಸರಾ ರಜೆಯನ್ನು ವಿಸ್ತರಿಸಲಾಗಿದೆ. ಈ 12 ದಿನಗಳಲ್ಲಿ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸುವ ಭರವಸೆಯನ್ನು ಶಿಕ್ಷಕರ ಸಂಘಟನೆಗಳು ನೀಡಿವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮೃತರ ಕುಟುಂಬಕ್ಕೆ ₹20 ಲಕ್ಷ ಪರಿಹಾರ ಮತ್ತು ಗೌರವಧನ:

ಸಮೀಕ್ಷಾ ಕಾರ್ಯದ ಸಂದರ್ಭದಲ್ಲಿ ಈಗಾಗಲೇ *ಮೂವರು ಸಿಬ್ಬಂದಿ ಮರಣ ಹೊಂದಿರುವ ವಿಚಾರವನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಅವರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರ ತೀರ್ಮಾನಿಸಿದೆ. ಸರ್ವೇ ಕಾರ್ಯದ ವೇಳೆ ಮೃತಪಟ್ಟ ಆ ಮೂವರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಪರಿಹಾರ ನೀಡಲಾಗುವುದು. ಈ ಹಿಂದೆ ಘೋಷಿಸಿದ್ದ 15 ಲಕ್ಷ ರೂ.ಗಿಂತ ಹೆಚ್ಚಿಗೆ, ನಾವು 20 ಲಕ್ಷ ರೂ. ನೀಡುತ್ತೇವೆ' ಎಂದು ಸಿಎಂ ಘೋಷಿಸಿದರು.

ಜೊತೆಗೆ, ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸುವ ಶಿಕ್ಷಕರು ಮತ್ತು ಇತರೆ ಸಿಬ್ಬಂದಿಗೆ ನೀಡುವ ಗೌರವಧನವನ್ನು ಹೆಚ್ಚಳ ಮಾಡಲಾಗಿದೆ. ಪ್ರತಿ ಸಮೀಕ್ಷಾ ಸಿಬ್ಬಂದಿಗೆ ಆರಂಭಿಕವಾಗಿ ₹5,000 ನೀಡಲಾಗುತ್ತಿದ್ದು, ಜೊತೆಗೆ ಪ್ರತಿ ಮನೆ ಸಮೀಕ್ಷೆಗೆ ₹100 ರಂತೆ ಒಟ್ಟಾರೆಯಾಗಿ ಅವರಿಗೆ ₹20 ಸಾವಿರದಷ್ಟು ಗೌರವಧನ ನೀಡಲಾಗುವುದು ಎಂದು ಸಿಎಂ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ತೊಂದರೆಯಾಗದು: ಡಿಸಿಎಂ ಭರವಸೆ:

ರಜೆ ವಿಸ್ತರಣೆಯಿಂದಾಗಿ ಮಕ್ಕಳಿಗೆ ಶೈಕ್ಷಣಿಕವಾಗಿ ತೊಂದರೆಯಾಗಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, 'ಶಿಕ್ಷಕರಿಗೆ ಕೊಟ್ಟಿರುವ ಈ ಹೆಚ್ಚುವರಿ ರಜಾದಿನಗಳ ಅವಧಿಯಲ್ಲಿ ಮಕ್ಕಳಿಗೆ ಪಾಠ ಪ್ರವಚನಗಳ ತೊಂದರೆ ಆಗುವುದಿಲ್ಲ. ನಂತರದ ದಿನಗಳಲ್ಲಿ ವಿಶೇಷ ತರಗತಿಗಳನ್ನು (Special Class) ತೆಗೆದುಕೊಂಡು ಪೂರ್ಣಗೊಳಿಸಲಾಗುತ್ತದೆ. ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು' ಎಂದು ಭರವಸೆ ನೀಡಿದರು.