ಧರ್ಮದ ಕಾಲಂನಲ್ಲಿ ಏನನ್ನು ಬರೆಸಬೇಕು ಎಂಬ ಜಿಜ್ಞಾಸೆ ಕೆಲ ಸಮುದಾಯಗಳನ್ನು ಕಾಡುತ್ತಿದೆ. ಇದರ ಬೆನ್ನಲ್ಲೇ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.
ಸಿದ್ದು ಚಿಕ್ಕಬಳ್ಳೇಕೆರೆ
ಸೆ.22ರಿಂದ ರಾಜ್ಯಾದ್ಯಂತ ಕೈಗೊಳ್ಳಲು ಉದ್ದೇಶಿಸಿರುವ ಬಹುನಿರೀಕ್ಷಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಬರೋಬ್ಬರಿ 1561 ಜಾತಿಗಳ ಪಟ್ಟಿ ನೀಡಿರುವುದಕ್ಕೆ ಟೀಕೆಗಳೂ ಕೇಳಿಬಂದಿವೆ. ಕೆಲವು ಸಮುದಾಯಗಳು ಸಮೀಕ್ಷೆಯನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದರೆ, ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಧರ್ಮದ ಕಾಲಂನಲ್ಲಿ ಏನನ್ನು ಬರೆಸಬೇಕು ಎಂಬ ಜಿಜ್ಞಾಸೆ ಕೆಲ ಸಮುದಾಯಗಳನ್ನು ಕಾಡುತ್ತಿದೆ. ಇದರ ಬೆನ್ನಲ್ಲೇ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದು, ಧರ್ಮದ ಕಾಲಂನಲ್ಲಿ ಸಮುದಾಯದವರು ‘ಹಿಂದೂ’ ಎಂದು ಬರೆಸಬೇಕು. ಇಲ್ಲಿಯವರೆಗೂ ನಾವು ಹಿಂದೂ ಧರ್ಮದ ಹೆಸರಿನಲ್ಲೇ ಸೌಲಭ್ಯ ಪಡೆದಿದ್ದೇವೆ. ಅದನ್ನೇ ಮುಂದುವರೆಸೋಣ. ‘ವೀರಶೈವ’ಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಇಲ್ಲ. ಮಾನ್ಯತೆ ಸಿಕ್ಕಾಗ ಬರೆಸೋಣ ಎನ್ನುತ್ತಾರೆ. ಕ್ರಿಶ್ಚಿಯನ್ ಧರ್ಮದ ಜೊತೆ ಹಲವು ಜಾತಿಗಳ ಕಾಲಂ ನೀಡಿರುವ ಬಗ್ಗೆ ತಮ್ಮ ಮುಕ್ತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
* ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದ ಜಾತಿ ಗಣತಿ ಅರ್ಥಾತ್ ಸಮೀಕ್ಷೆಗೆ ಬಲಾಢ್ಯ ಜಾತಿಗಳ ಅಪಸ್ವರ ಸದಾ ಇರುತ್ತಲ್ಲ, ಏಕೆ?
ಹಿಂದುಳಿದವರಿಗೆ ಬಲ ತುಂಬಲು ಸಮೀಕ್ಷೆಯ ಅಗತ್ಯವಿದೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಇಂತಹ ಮಹತ್ತರ ಸಮೀಕ್ಷೆ ಕೈಗೊಳ್ಳಬೇಕಾದಾಗ ಸರಿಯಾದ ಕ್ರಮ ಅನುಸರಿಸುತ್ತಿಲ್ಲ. ಇದರಿಂದಾಗಿ ಬಹಳಷ್ಟು ಗೊಂದಲ ಉಂಟಾಗುತ್ತಿದ್ದು, ತಕ್ಷಣ ಇವುಗಳನ್ನು ಬಗೆಹರಿಸಬೇಕಿದೆ.
* ಏನು ಆ ಗೊಂದಲ?
ಒಂದೇ ಜಾತಿಯ ಹೆಸರನ್ನು ಸ್ವಲ್ಪ ಬದಲಿಸಿ ಇನ್ನೊಂದು ಜಾತಿ ಇದೆಯೇನೋ ಎಂಬಂತೆ ಪಟ್ಟಿಯಲ್ಲಿ ನೀಡಲಾಗಿದೆ. ಇದರಿಂದ ಸಾಕಷ್ಟು ಗೊಂದಲ ಉಂಟಾಗಿದೆ. ಉದಾಹರಣೆಗೆ ಕ್ರಮ ಸಂಖ್ಯೆ 11ರಲ್ಲಿ ಅಗಸ ಲಿಂಗಾಯತ್ ಎಂದು ನಮೂದಿಸಲಾಗಿದೆ. ಆದರೆ ಕ್ರಮ ಸಂಖ್ಯೆ 760ರಲ್ಲಿ ಲಿಂಗಾಯತ್ ಅಗಸ ಎಂದು ನೀಡಲಾಗಿದೆ. ಅದೇ ರೀತಿ 18ರಲ್ಲಿ ಅಕ್ಕಸಾಲಿ ಲಿಂಗಾಯತ್ ಎಂದು, 761ರಲ್ಲಿ ಲಿಂಗಾಯತ್ ಅಕ್ಕಸಾಲಿ; 507ರಲ್ಲಿ ಜಂಗಮ ಲಿಂಗಾಯತ್ ಎಂದು, 774ರಲ್ಲಿ ಲಿಂಗಾಯತ್ ಜಂಗಮ; 792ರಲ್ಲಿ ಲಿಂಗಾಯತ್ ವೀರಶೈವ ಎಂದು, ಕ್ರಮ ಸಂಖ್ಯೆ 1366 ರಲ್ಲಿ ವೀರಶೈವ ಲಿಂಗಾಯಿತ ಎಂದು ನೀಡಲಾಗಿದೆ. ಒಂದೇ ಜಾತಿಗೆ ಸಂಬಂಧಿಸಿದಂತೆ ಈ ರೀತಿ ಎರಡು ಜಾತಿ ಸಂಖ್ಯೆ ನೀಡಿರುವುದು ಗೊಂದಲ ಉಂಟಾಗಲು ಕಾರಣವಾಗಿದೆ.
* ಆಯೋಗವು ಆಕ್ಷೇಪಣೆ ವ್ಯಕ್ತಪಡಿಸಲು ಸಮಯ ನೀಡಿತ್ತಲ್ಲವೇ?
ರಾಜ್ಯದ 7 ಕೋಟಿಗೂ ಅಧಿಕ ಜನರ ಜೀವನಕ್ಕೆ ಸಂಬಂಧಿಸಿದಂತಹ ಮಹತ್ವದ ವಿಷಯ ಇದಾಗಿದ್ದು, ನೊಂದವರು-ಬೆಂದವರ ಅಹವಾಲನ್ನು ಆಯೋಗ ಸರಿಯಾಗಿ ಸ್ವೀಕರಿಸಬೇಕಾಗಿತ್ತು. ಆದರೆ ಆಯೋಗವು ಆಕ್ಷೇಪಣೆ ಸಲ್ಲಿಸಲು ಕೇವಲ ಒಂದು ವಾರ ಕಾಲಾವಕಾಶ ನೀಡಿದೆ. ಇಷ್ಟೊಂದು ತುರ್ತು ಏಕೆ? ಇದರ ಹಿಂದಿನ ರಾಜಕೀಯ ಉದ್ದೇಶವೇನು ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಸಮುದಾಯವೊಂದಕ್ಕೆ ಸಂಘಟನೆಯ ದೃಷ್ಟಿಯಿಂದ ಅಭಿಪ್ರಾಯ ಆಲಿಸಲು ಕನಿಷ್ಠ ಹತ್ತು ದಿನಗಳ ಅವಧಿ ಬೇಕಾಗುತ್ತದೆ. ಸದಸ್ಯರಿಗೆ ನೋಟಿಸ್ ನೀಡಲು, ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲು ಸಮಯಾವಕಾಶದ ಅಗತ್ಯವಿದೆ. ಆದರೆ ಸರ್ಕಾರ ಕೇವಲ ಒಂದು ವಾರದಲ್ಲಿ ಆಕ್ಷೇಪಣೆ ಸಲ್ಲಿಸಿ ಎನ್ನುವುದು ಎಷ್ಟರಮಟ್ಟಿಗೆ ಸರಿ?
* ಪಟ್ಟಿಯಲ್ಲಿ ಜಾತಿಗಳ ಸಂಖ್ಯೆ ಅಧಿಕವಾಗಿದೆ ಎಂಬ ತಕರಾರೇ?
ಆ.22ರಂದು ಪ್ರಕಟವಾದ ಪಟ್ಟಿಯಲ್ಲಿ ಒಟ್ಟು 1400 ಜಾತಿಗಳಿದ್ದವು. ಆದರೆ, ಈಗ ಆಯೋಗದ ಅಧಿಕೃತ ಕೈಪಿಡಿಯಲ್ಲಿ ಈ ಸಂಖ್ಯೆ 1561ಕ್ಕೆ ಹೆಚ್ಚಳವಾಗಿದೆ. ಇದು ಜನರಲ್ಲಿ ಬಹಳಷ್ಟು ಗೊಂದಲ ಉಂಟು ಮಾಡಿದೆ. ಹೆಚ್ಚುವರಿಯಾಗಿ ಸೇರ್ಪಡೆ ಮಾಡಿರುವ ಜಾತಿಗಳ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಬೇಕು. ಮೊದಲು ಈ ಗೊಂದಲ ನಿವಾರಣೆಯಾಗಬೇಕು.
* ಸೆ.19 ರಂದು ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ನಡೆಯುತ್ತಿದೆ?
ಶುಕ್ರವಾರ ಹುಬ್ಬಳ್ಳಿಯಲ್ಲಿ ಆಯೋಜಿಸುತ್ತಿರುವುದು ಏಕತಾ ಸಮಾವೇಶವಲ್ಲ; ಇದು ಬೇಡ ಜಂಗಮ ಸಮಾವೇಶ. ‘ನಾವು ಬೇಡ ಜಂಗಮರು. ಪರಿಶಿಷ್ಟ ಜಾತಿಯವರು’ ಎಂದು ಹೇಳಿಕೊಳ್ಳುತ್ತಿದ್ದ ಸ್ವಾಮೀಜಿಗಳು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಲಿಂಗಾಯತ ಸಮುದಾಯದ ಯಾವ ಒಳ ಪಂಗಡದ ಸ್ವಾಮೀಜಿಗಳೂ ಅಲ್ಲಿಗೆ ತೆರಳುತ್ತಿಲ್ಲ. ನಾವೂ ತೆರಳುತ್ತಿಲ್ಲ. ಕೂಡಲ ಸಂಗಮದವರು, ಗಾಣಿಗ ಪೀಠ, ಸಾಣೆಹಳ್ಳಿ, ಸಿರಿಗೆರೆ, ಕುಂಬಾರ ಪೀಠ ಸೇರಿದಂತೆ ಯಾವ ಸ್ವಾಮೀಜಿಗಳೂ ಸಮಾವೇಶಕ್ಕೆ ಹಾಜರಾಗುತ್ತಿಲ್ಲ. ಊರಿಗೆ ಎರಡ್ಮೂರು ಜನರಿರುವವರನ್ನು ಪ್ರತಿನಿಧಿಸುವ ಸಣ್ಣ ಸಮುದಾಯದ ಸ್ವಾಮೀಜಿಗಳು ಮಾತ್ರ ಅಲ್ಲಿ ಸೇರುತ್ತಿದ್ದಾರೆ.
* ವೀರಶೈವ-ಲಿಂಗಾಯತ ಧರ್ಮದ ಬಗ್ಗೆ ನಿಮ್ಮ ನಿಲುವು?
ಪ್ರಸ್ತುತ ಧರ್ಮದ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ವೇ ಇಲ್ಲ. ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಗೆ ಅನುಗುಣವಾಗಿ ಹಿಂದೂ ಧರ್ಮದ ಆಧಾರದಲ್ಲಿ ನಮಗೆ ಸೌಲಭ್ಯಗಳು ಸಿಗುತ್ತಿವೆ. ಧರ್ಮದ ಕಾಲಂನಲ್ಲಿ ನಾವು ಹಿಂದೂಗಳು ಎಂದು ಬರೆಸಬೇಕು. ಆದರೆ ಅಖಿಲ ಭಾರತ ವೀರಶೈವ ಮಹಾಸಭೆಯು ದ್ವಂದ್ವದ ಹೇಳಿಕೆಗಳನ್ನು ನೀಡುತ್ತಿದೆ. ಒಂದು ಕಡೆ ಪಂಚ ಪೀಠದವರು ನಾವು ಹಿಂದೂ ಧರ್ಮದ ಒಂದು ಭಾಗ ಎನ್ನುತ್ತಾರೆ. ಮತ್ತೊಂದೆಡೆ ಧರ್ಮದ ಕಾಲಂನಲ್ಲಿ ವೀರಶೈವ ಎಂದು ಬರೆಸಲು ಹೇಳುತ್ತಾರೆ. ಇದು ಗೊಂದಲ ಸೃಷ್ಟಿಸಿದೆ.
* ಮಹಾಸಭೆಯು ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಲು ಕರೆ ನೀಡಿದೆಯಲ್ಲಾ?
2002ರವರೆಗೂ ಗೊಂದಲ ಇರಲಿಲ್ಲ. 2002ರಲ್ಲಿ ಬೆಂಗಳೂರಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಭವನ ನಿರ್ಮಾಣ ಮಾಡಲಾಯಿತು. ಆಗ ಸಂಘಟನೆಯ ಹೆಸರಿನಲ್ಲಿ ಲಿಂಗಾಯತ ಎಂದು ಇದ್ದಿದ್ದರಿಂದ ಅನೇಕ ಸ್ವಾಮೀಜಿಗಳು ಉದ್ಘಾಟನಾ ಸಮಾರಂಭಕ್ಕೇ ಆಗಮಿಸಲಿಲ್ಲ. ಈಗ ಅವರು ಹೇಳುವುದು ‘ವೀರಶೈವ ಲಿಂಗಾಯತ ಮಹಾಸಭಾ’ ಎಂದು. ಆದರೆ ಲೆಟರ್‌ಹೆಡ್‌ನಲ್ಲಿ ಲಿಂಗಾಯತ ಹೆಸರಿಲ್ಲ. 2002ರ ಪೂರ್ವದಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ ವೀರಶೈವ ಶಬ್ಧವೇ ಇರಲಿಲ್ಲ. ಆದರೆ ಆಗ ಮಹಾಸಭೆಯ ಅಧ್ಯಕ್ಷರಾಗಿದ್ದ ಭೀಮಣ್ಣ ಖಂಡ್ರೆ ಮತ್ತು ಮುಖಂಡ ಎಂ.ಪಿ.ಪ್ರಕಾಶ್ ಅವರ ಕಾರ್ಯಗಳಿಂದ ವೀರಶೈವ ಶಬ್ಧ ಸೇರ್ಪಡೆಯಾಯಿತು. 2002ಕ್ಕಿಂತ ಮೊದಲಿನ ಜಾತಿ ಪ್ರಮಾಣ ಪತ್ರಗಳಲ್ಲಿ ಹಿಂದೂ ಲಿಂಗಾಯತ ಎಂದೇ ಇದೆ. 2004ರಲ್ಲಿ ಕೇಂದ್ರ ಸರ್ಕಾರವು ವೀರಶೈವವು ಸನಾತನದ ಒಂದು ಭಾಗ ಎಂದು ‘ವೀರಶೈವ ಲಿಂಗಾಯತ’ ಧರ್ಮವನ್ನು ತಿರಸ್ಕರಿಸಿತು. ಬಳಿಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಾಗ ‘ಲಿಂಗಾಯತ ಧರ್ಮಕ್ಕೆ ಮಾನ್ಯತೆ ನಿಡಲು ಕಷ್ಟ ಸಾಧ್ಯ’ ಎಂದು ಕೇಂದ್ರ ಸರ್ಕಾರ ಹೇಳಿದೆಯೇ ಹೊರತು ತಿರಸ್ಕರಿಸಿಲ್ಲ. ಆದ್ದರಿಂದ ಇದೀಗ ಸಮೀಕ್ಷೆ ಸಮಯದಲ್ಲಿ ವೀರಶೈವ ಲಿಂಗಾಯತ ಧರ್ಮ ಎಂದು ಬರೆಯುವ ಅವಶ್ಯಕತೆಯಿಲ್ಲ.
* ಒಂದೊಮ್ಮೆ ‘ಲಿಂಗಾಯತ’ಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ?
ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ ಅದನ್ನು ನಾವು ಒಪ್ಪುತ್ತೇವೆ. ಆಗ ವೀರಶೈವ ಲಿಂಗಾಯತ ಧರ್ಮ ಎಂದು ಬರೆಸುತ್ತೇವೆ. ಆದರೆ ಅಲ್ಲಿಯವರೆಗೂ ಹಿಂದೂ ಧರ್ಮ ಎಂದು ಬರೆಸಬೇಕು. ಈ ಹಿಂದೆ ಜೈನರು ‘ಹಿಂದೂ ಜೈನ್’ ಎಂದು ಬರೆಸುತ್ತಿದ್ದರು. ಸಿಖ್ಖರು ‘ಹಿಂದೂ ಸಿಖ್’ ಎಂದು ಬರೆಸುತ್ತಿದ್ದರು. ಇವರಿಗೆ ಧರ್ಮದ ಮಾನ್ಯತೆ ಸಿಕ್ಕ ಬಳಿಕ ಜೈನ್, ಸಿಖ್ ಎಂದು ಪ್ರತ್ಯೇಕವಾಗಿ ಧರ್ಮ ಬರೆಸುತ್ತಿದ್ದಾರೆ. ಸದ್ಯಕ್ಕೆ ಧರ್ಮದ ಕಾಲಂನಲ್ಲಿ ವೀರಶೈವ ಎಂದು ಬರೆಸುವುದರಲ್ಲಿ ಯಾವುದೇ ಲಾಭವಿಲ್ಲ. ಏಕೆಂದರೆ, ಇದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯೇ ಹೊರತು ಧರ್ಮದ ಸಮೀಕ್ಷೆಯಲ್ಲ.
*ಕ್ರಿಶ್ಚಿಯನ್ ಧರ್ಮದ ಜೊತೆ ಹಲವು ಜಾತಿಗಳ ಕಾಲಂ ಇರುವುದು ವಿವಾದವಾಗುತ್ತಿದೆಯಲ್ಲಾ ?
ಕ್ರಿಶ್ಚಿಯನ್ ಧರ್ಮದ ಜೊತೆ ಹಲವು ಜಾತಿಗಳನ್ನು ಸೇರಿಸಿರುವುದು ಸರಿಯಲ್ಲ. ಹಿಂದೂಗಳ ಜನಸಂಖ್ಯೆಯನ್ನು ಕಡಿಮೆಗೊಳಿಸುವ ಷಡ್ಯಂತ್ರದಿಂದ ಹೀಗೆ ಮಾಡಲಾಗಿದೆ. ಈ ಬಗ್ಗೆ ಆಯೋಗ ಆಕ್ಷೇಪಣೆಗಳನ್ನೂ ಆಹ್ವಾನಿಸಿಲ್ಲ. ಇದನ್ನು ಪ್ರಶ್ನಿಸಿದರೆ ಸಮೀಕ್ಷೆ ಮುಗಿದ ಬಳಿಕ ಪರಿಷ್ಕರಣೆ ಮಾಡುತ್ತೇವೆ ಎನ್ನುತ್ತಾರೆ. ಕ್ರಿಶ್ಚಿಯನ್ ಜಂಗಮ, ಕ್ರಿಶ್ಚಿಯನ್ ದಲಿತ ಸೇರಿದಂತೆ ಹಲವು ಜಾತಿಗಳನ್ನು ಕ್ರಿಶ್ಚಿಯನ್ ಧರ್ಮದ ಜೊತೆ ಸೇರಿಸಬಾರದಿತ್ತು. ಲಾಭಕ್ಕೆ, ಆಮಿಷಕ್ಕೆ ಒಳಗಾಗಿ ಅವರು ಹೋಗಿದ್ದಾರೆ. ದಲಿತ ಕ್ರಿಶ್ಚಿಯನ್ ಆದರೆ ದಲಿತ ಸಮುದಾಯದ ಮೀಸಲಾತಿ ಬಿಟ್ಟು ಕ್ರಿಶ್ಚಿಯನ್ ಮೀಸಲಾತಿ ಪಡೆಯಬೇಕಾಗುತ್ತದೆ. ಮೂಲ ಜಾತಿಯ ಮೀಸಲಾತಿ ಪಡೆಯಬಾರದು.
* ಪಂಚಮಸಾಲಿ ಸಮುದಾಯದಲ್ಲಿ ಗೊಂದಲ ಉಂಟಾಗಿಲ್ಲವೇ ?
ಲಿಂಗಾಯತ ಪಂಚಮಸಾಲಿ ಅಥವಾ ವೀರಶೈವ ಪಂಚಮಸಾಲಿ ಎಂದು ಬರೆಸಬೇಕೇ ಎಂಬ ಗೊಂದಲ ಉಂಟಾಗಿತ್ತು. ಈ ಬಗ್ಗೆ ಪೀಠದ ಅಧ್ಯಕ್ಷರಾಗಿ 16 ಜಿಲ್ಲೆಯಲ್ಲಿ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಸಾವಿರಾರು ಜನ ಪ್ರತಿಕ್ರಿಯೆ ನೀಡಿದ್ದು ಇದನ್ನು ವಿಡಿಯೋ ಮಾಡಿಕೊಳ್ಳಲಾಗಿದೆ. ಕೊನೆಗೆ, ಬುಧವಾರ ಬೆಂಗಳೂರಿನಲ್ಲಿ ನಿರ್ಣಾಯಕ ಸಭೆ ಕರೆದು ಎಲ್ಲರೊಂದಿಗೂ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಧರ್ಮದ ಕಾಲಂನಲ್ಲಿ ‘ಹಿಂದೂ’ಎಂದು, ಜಾತಿಯ ಕಾಲಂನಲ್ಲಿ ‘ಲಿಂಗಾಯತ ಪಂಚಮಸಾಲಿ’ ಎಂದು ಬರೆಸಲು ಅಂತಿಮ ನಿರ್ಣಯವಾಗಿದೆ.
