ವಿಜಯಪುರದಲ್ಲಿ ಪಿಪಿಪಿ ಮಾದರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಚಿವ ಶಿವಾನಂದ ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಿರ್ಧಾರ ತಮಗೆ ನೋವು ತಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯಪುರ (ಆ.28): ಕರ್ನಾಟಕ ಸರ್ಕಾರದ ಸಚಿವ ಶಿವಾನಂದ ಪಾಟೀಲ್ ಅವರು ವಿಜಯಪುರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮದೇ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಪಿಪಿಪಿ (ಪಬ್ಲಿಕ್-ಪ್ರೈವೇಟ್-ಪಾರ್ಟನರ್‌ಶಿಪ್) ಮಾದರಿಯಲ್ಲಿ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಪ್ರಸ್ತಾಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸರ್ಕಾರದ ಈ ನಿರ್ಧಾರಕ್ಕೆ ಅಸಮಾಧಾನ:

ಪಿಪಿಪಿ (ಪಬ್ಲಿಕ್-ಪ್ರೈವೇಟ್-ಪಾರ್ಟನರ್‌ಶಿಪ್) ಯೋಜನೆಯನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದ ಸಚಿವರು, ಸರ್ಕಾರದ ಈ ನಿರ್ಧಾರ ನನಗೆ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಯಾವ ಉದ್ದೇಶಕ್ಕಾಗಿ ಈ ಪಿಪಿಪಿ ಪ್ರಸ್ತಾವನೆ ತರಲಾಗಿದೆ? ಯಾರ ಅನುಕೂಲಕ್ಕಾಗಿ ಇದನ್ನು ಮಾಡಲಾಗುತ್ತಿದೆ? ಎಂದು ಸಚಿವ ಶಿವಾನಂದ ಪಾಟೀಲ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ತಾವು ಮನವಿ ಸಲ್ಲಿಸಿರುವುದಾಗಿಯೂ ಅವರು ತಿಳಿಸಿದರು.

ಇದನ್ನೂ ಓದಿ: ಧರ್ಮಸ್ಥಳ, ಚಾಮುಂಡಿ ಬೆಟ್ಟ ವಿವಾದ, ಡಿಕೆ ಶಿವಕುಮಾರ ಹೇಳಿಕೆಗೆ ವಿ ಸೋಮಣ್ಣ ತಿರುಗೇಟು

ನನ್ನ ಹೆಸರಿದೆ ಎಂಬ ಕಾರಣಕ್ಕೆ ಉದ್ಘಾಟನೆಯಾಗಿಲ್ಲ:

ಪಕ್ಷದ ಮ್ಯಾನಿಫೆಸ್ಟೋದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಬಗ್ಗೆ ಭರವಸೆ ನೀಡಲಾಗಿತ್ತು. ಆದರೆ ಈಗ ಯಾಕೆ ಪಿಪಿಪಿ ಮಾದರಿಯ ಮೆಡಿಕಲ್ ಕಾಲೇಜು? ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರಲ್ಲದೇ, ತಾವು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಆಸ್ಪತ್ರೆಯನ್ನು ದೇಶದಲ್ಲೇ ಅತ್ಯುತ್ತಮ ಸರ್ಕಾರಿ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಿದ್ದೆ. ಆದರೆ ಅಂದು ನಾನು ಆರಂಭಿಸಿದ ಎಂಸಿಎಚ್ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಇನ್ನೂ ಉದ್ಘಾಟನೆ ಮಾಡಿಲ್ಲ. ನನ್ನ ಹೆಸರಿದೆ ಎಂಬ ಕಾರಣಕ್ಕೆ ಉದ್ಘಾಟನೆ ಮಾಡದಿರಬಹುದು ಎಂದು ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಮೈಸೂರು ದಸರಾ ಸರ್ಕಾರಿ ಕಾರ್‍ಯಕ್ರಮ..', ಬಾನು ಮುಷ್ತಾಕ್‌ ವಿರೋಧಕ್ಕೆ ಹರಿಪ್ರಸಾದ್ ಆಕ್ಷೇಪ

ಜಿಲ್ಲೆಯ ಶಾಸಕರು ಮತ್ತು ಸಚಿವರು ತಮಗೆ ಸಹಕಾರ ನೀಡದಿರುವುದರ ಬಗ್ಗೆಯೂ ಶಿವಾನಂದ ಪಾಟೀಲ್ ತಮ್ಮ ಅಳಲನ್ನು ತೋಡಿಕೊಂಡರು ಬಗ್ಗೆಯೂ ಶಿವಾನಂದ ಪಾಟೀಲ್ ತಮ್ಮ ಅಳಲನ್ನು ತೋಡಿಕೊಂಡರು ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ಒಳಗಿನ ಅಸಮಾಧಾನ ಮತ್ತು ವಿಜಯಪುರದ ವೈದ್ಯಕೀಯ ಕಾಲೇಜಿನ ಭವಿಷ್ಯದ ಕುರಿತು ತೀವ್ರ ಗಮನ ಸೆಳೆಯುವ ಸಾಧ್ಯತೆಯಿದೆ.