ಸಹಕಾರ ಸಚಿವ ಕೆ.ಎನ್. ರಾಜಣ್ಣ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಹೋರಾಟದ ವಿರುದ್ಧ ಮಾತನಾಡಿದ್ದು ಸೇರಿದಂತೆ 8 ವಿವಾದಾತ್ಮಕ ಹೇಳಿಕೆಗಳು ಯಾವುವು? ಅವುಗಳಿಂದ ಕಾಂಗ್ರೆಸ್‌ಗೆ ಉಂಟಾದ ಮುಜುಗರ ಎಷ್ಟು ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ..

ಬೆಂಗಳೂರು (ಆ.11): ತಮ್ಮ ನೇರ ಮಾತು, ಆದರೆ ವಿವಾದಾತ್ಮಕ ಹೇಳಿಕೆಗಳಿಂದಲೇ ರಾಜ್ಯ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಅಂತಿಮವಾಗಿ ತಮ್ಮ ಮಾತಿನಿಂದಲೇ ರಾಜಕೀಯ ಜೀವನವನ್ನು ಅಂತ್ಯಗೊಳಿಸುವ ಹಂತಕ್ಕೆ ತಲುಪಿದ್ದಾರೆ. ತಮ್ಮ ಹೇಳಿಕೆಯಿಂದ ಸಚಿವ ಸ್ಥಾನದಿಂದ ವಜಾಗೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತನಾಗಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಕಾಂಗ್ರೆಸ್ ಹೈಕಮಾಂಡ್‌ನ ಎಚ್ಚರಿಕೆಗೂ ಮಣಿಯದೆ ಸರಣಿ ವಿವಾದಗಳನ್ನು ಸೃಷ್ಟಿಸಿದ್ದರು. ಕೊನೆಗೆ ಹೈಕಮಾಂಡ್ ಸುಪೀರಿಯರ್ ನಾಯಕ ರಾಹುಲ್ ಗಾಂಧಿ ದೇಶದಾದ್ಯಂತ ದೊಡ್ಡ ಮಟ್ಟದ ಹೋರಾಟಕ್ಕೆ ನಾಂದಿ ಹಾಡಲು ಹೊರಟ್ಟಿದ್ದ ವಿಷಯದ ವಿರುದ್ಧವೇ ಮಾತನಾಡುವ ಮೂಲಕ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ದುರಂತ ಸ್ಥಿತಿಗೆ ತಲುಪಿದ್ದಾರೆ. ಇದು ಅವರ ರಾಜಕೀಯ ಭವಿಷ್ಯಕ್ಕೆ ಕೊಡಲಿಪೆಟ್ಟು ಹಾಕಿಕೊಂಡಂತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿವಾದಗಳ ಸರಣಿ:

ರಾಜಣ್ಣ ಅವರ ರಾಜಕೀಯ ಜೀವನದಲ್ಲಿ ಪದೇ ಪದೇ ತಲೆದೋರುತ್ತಿದ್ದ ವಿವಾದಗಳು ಅವರ ರಾಜೀನಾಮೆಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ. ಅವರ ಕೆಲವು ಪ್ರಮುಖ ವಿವಾದಾತ್ಮಕ ಹೇಳಿಕೆಗಳು ಇಲ್ಲಿವೆ:

1. ರಾಹುಲ್ ಮತಗಳ್ಳತನ ಹೋರಾಟಕ್ಕೆ ತದ್ವಿರುದ್ಧ ಹೇಳಿಕೆ:

ಲೋಕಸಭಾ ಚುನಾವಣೆಗಳಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋರಾಟ ನಡೆಸಿದಾಗ ಅದಕ್ಕೆ ವಿರುದ್ಧವಾಗಿ ಕೆ.ಎನ್. ರಾಜಣ್ಣ ಹೇಳಿದ್ದರು. ರಾಜ್ಯದಲ್ಲಿ ಮತಗಳ್ಳತನ ನಡೆದಿರುವುದು ನೂರಕ್ಕೆ ನೂರು ಸತ್ಯ. ನಮ್ಮ ಕಣ್ಮುಂದೆಯೇ ನಡೆದಿವೆಯಲ್ಲ. ಆಗ ಅಧಿಕಾರದಲ್ಲಿ ಇದ್ದದ್ದು ನಮ್ಮದೇ ಸರ್ಕಾರ. ನಮಗೇ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ' ಎಂದು ಹೇಳಿ ಪಕ್ಷದ ನಿಲುವಿಗೆ ವಿರುದ್ಧವಾಗಿ ಮಾತನಾಡಿದ್ದರು.

2. ಸರ್ಕಾರದಲ್ಲಿ ಸೆಪ್ಟೆಂಬರ್ ಕ್ರಾಂತಿ ಬಾಂಬ್:

ರಾಜ್ಯದಲ್ಲಿ ಸೆಪ್ಟಂಬರ್ ತಿಂಗಳಲ್ಲಿ ದೊಡ್ಡ ರಾಜಕೀಯ ಕ್ರಾಂತಿ ಸಂಭವಿಸಲಿದೆ. ಆಗ ಸಚಿವ ಸಂಪುಟ ಬದಲಾವಣೆ ಆಗಲಿದೆ ಎಂಬ ಮಾತುಗಳನ್ನು ಹೇಳಿದ್ದರು. ಆದರೆ, ಇವರ ಹೇಳಿಕೆಯನ್ನು ಸಿಎಂ ಹಾದಿಯಾಗಿ ಯಾರೂ ಒಪ್ಪಿಕೊಳ್ಳಲಿಲ್ಲ.

3. ಸಿದ್ದರಾಮಯ್ಯನೇ 5 ವರ್ಷ ಸಿಎಂ ಮಾತು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರಾಜ್ಯದಲ್ಲಿ 5 ವರ್ಷ ಸಿಎಂ ಆಗಿರುತ್ತಾರೆ. ಸಿಎಂ ಹುದ್ದೆ ರಾಜ್ಯದಲ್ಲಿ ಖಾಲಿ ಇಲ್ಲ. ಈ ಹುದ್ದೆ ಮೇಲೆ ಯಾರೇ ಕಣ್ಣಿಟ್ಟರೂ ಅವರ ಆಸೆ ಈಡೇರುವುದಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಈ ಮೂಲಕ ನೇರವಾಗಿ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದರು.

4. 2028ಕ್ಕೂ ಸಿದ್ದರಾಮಯ್ಯರದ್ದೇ ನಾಯಕತ್ವ:

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನಾನೇ 5 ವರ್ಷ ಸಿಎಂ ಎಂಬ ಹೇಳಿಕೆ ನೀಡಿದ ನಂತರ, 2028ಕ್ಕೆ ನನ್ನದೇ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ. ಜೊತೆಗೆ, ಇತರರ ನಾಯಕತ್ವವೂ ಇರಲಿದೆ ಎಂದಿದ್ದರು. ಆದರೆ, ಸಚಿವ ರಾಜಣ್ಣ 2028ಕ್ಕೂ ಸಿದ್ದರಾಮಯ್ಯ ಅವರದ್ದೇ ನಾಯಕತ್ವ, ಅವರೇ ಸಿಎಂ ಎಂಬ ಅರ್ಥದಲ್ಲಿ ಮಾತನಾಡಿದ್ದರು.

5. ಡಿಸಿಎಂ ಸ್ಥಾನ ಅಂದರೆ ತಲೆ ಮೇಲೆ ಕಿರೀಟ ಇರಲ್ಲ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಲು ಶ್ರಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಈ ಬಾರಿ ಸಿಎಂ ಖುರ್ಚಿ ತನಗೇ ಬೇಕು ಎಂದು ಭಾರೀ ಪೈಪೋಟಿ ನಡೆಸಿದ ನಂತರ ಹೈಕಮಾಂಡ್ ಮನವೊಲಿಕೆ ಮೇರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವುದಕ್ಕೆ ಒಪ್ಪಿಗೆ ಸೂಚಿಸಿದ್ದರು. ಜೊತೆಗೆ, ರಾಜ್ಯದಲ್ಲಿ 'ಸಮುದಾಯಕ್ಕೊಬ್ಬರಂತೆ ಡಿಸಿಎಂ' ಮಾಡಬೇಕು ಎಂಬ ಆಗ್ರಹವಿತ್ತು. ಆದರೆ, ಡಿ.ಕೆ. ಶಿವಕುಮಾರ್ ಡಿಸಿಎಂ ಹುದ್ದೆ ತಮಗೆ ಮಾತ್ರ ಉಳಿಸಿಕೊಂಡಿದ್ದರು. ಇದಾದ ನಂತರ ಡಿಸಿಎಂ ಸ್ಥಾನ ಎಂದರೆ ತಲೆ ಮೇಲೆ ಕಿರೀಟ ಇರೊಲ್ಲ ಎಂಬ ಹೇಳಿಕೆಯನ್ನು ರಾಜಣ್ಣ ಹೇಳಿದ್ದರು. ಈ ಮೂಲಕ ಕೆಪಿಸಿಸಿ ಅಧ್ಯಕ್ಷರ ಕೆಂಗಣ್ಣಿಗೆ ಗುರಿಯಾಗಿದ್ದರು.

6. ಸುರ್ಜೇವಾಲಾ ಸಭೆ ವಿರುದ್ಧ ಆಕ್ರೋಶ:

ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಶಾಸಕರು ಮತ್ತು ಸಚಿವರ ಸಭೆ ನಡೆಸಿದ್ದರ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಉಸ್ತುವಾರಿಗಳು ಸಭೆ ನಡೆಸೋದು ಸರಿಯಲ್ಲ ಎಂದು ಹೇಳಿದ್ದರು.

7. ನಾನು ಸೇರಿ 48 ರಾಜಕಾರಣಿಗಳಿಗೆ ಹನಿ ಟ್ರ್ಯಾಪ್‌:

ರಾಜ್ಯದ ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗುವಂತೆ ನನ್ನನ್ನೂ ಸೇರಿದಂತೆ 48 ಸಚಿವರು, ಮಾಜಿ ಸಚಿವರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ. ಈ ಬಗ್ಗೆ ತನ್ನ ಬಳಿ ಸಾಕ್ಷಿಯಿದೆ ಎಂದು ಹೇಳಿದ್ದರು. ಈ ಬಗ್ಗೆ ಸಾಕ್ಷಿ ಕೊಡುವುದಾಗಿ ಹೇಳಿ, ಕನಿಷ್ಠ ದೂರು ಕೊಡದೇ ಸುಮ್ಮನಾಗಿದ್ದರು.

8. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬೇಡಿಕೆ:

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನದಿಂದ ಡಿ.ಕೆ. ಶಿವಕುಮಾರ್ ಅವರನ್ನು ಬದಲಾಯಿಸಬೇಕೆಂದು ಬಹಿರಂಗವಾಗಿ ಒತ್ತಾಯಿಸಿ, ಪಕ್ಷದೊಳಗೆ ಭಿನ್ನಾಭಿಪ್ರಾಯ ಸೃಷ್ಟಿಸಿದ್ದರು. ಆಗ ಸಿಎಂ ಸಿದ್ದರಾಮಯ್ಯ ಬಣದ ನಾಯಕರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಸಭೆಯನ್ನೂ ನಡೆಸಿದ್ದರು.

ಇತರೆ ಹೇಳಿಕೆಗಳು: ರಾಜ್ಯದಲ್ಲಿ ಸಮುದಾಯಕ್ಕೆ ಒಬ್ಬರಂತೆ 5 ಡಿಸಿಎಂ ಹುದ್ದೆ ಸೃಷ್, ಎಸ್ಸಿ, ಎಸ್ಟಿ ಶಾಸಕರ ಪ್ರತ್ಯೇಕ ಸಭೆ, ಸಿಎಂ ಸಿದ್ದರಾಮಯ್ಯ ಸಾಧನಾ ಸಮಾವೇಶ ಆಯೋಜನೆ, ಹೀಗೆ ಅನೇಕ ವಿಷಯಗಳ ಕುರಿತು ಅವರು ನೀಡಿದ್ದ ಹೇಳಿಕೆಗಳು ಪಕ್ಷದಲ್ಲಿ ಭಾರಿ ತಳಮಳ ಸೃಷ್ಟಿಸಿದ್ದವು.

ಹೈಕಮಾಂಡ್‌ಗೆ ಬೇಸರ:

ಕೆ.ಎನ್. ರಾಜಣ್ಣ ಒಂದಲ್ಲ ಒಂದು ಹೇಳಿಕೆಗಳಿಂದ ಸದಾ ವಿವಾದದಲ್ಲಿರುತ್ತಿದ್ದರು. ಅವರ ಹೇಳಿಕೆ ಕುರಿತು ಹೈಕಮಾಂಡ್‌ನ ಎಚ್ಚರಿಕೆಯನ್ನೂ ನಿರ್ಲಕ್ಷಿಸಿದ್ದರು. 'ಕೆಪಿಸಿಸಿ ಅಧ್ಯಕ್ಷರ ಬಗ್ಗೆಯೂ ಐ ಡೋಂಟ್ ಕೇರ್' ಎಂಬಂತಹ ಧೋರಣೆ ಅನುಸರಿಸಿದ್ದು, ಅವರ ವಿರುದ್ಧ ಪಕ್ಷದಲ್ಲಿ ಆಂತರಿಕವಾಗಿ ಭಾರೀ ವಿರೋಧ ವ್ಯಕ್ತವಾಗಲು ಕಾರಣವಾಯಿತು.

ಅಂತಿಮವಾಗಿ, ರಾಜಣ್ಣ ಅವರು ತಮ್ಮದೇ ಮಾತಿನಿಂದಾಗಿ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದಿದೆ. 'ದುಬಾರಿ ಹೇಳಿಕೆ ನೀಡಿದ ಸಚಿವ ರಾಜಣ್ಣ ತಲೆದಂಡ' ಎಂಬಂತೆ ಈ ಬೆಳವಣಿಗೆಯನ್ನು ಪಕ್ಷದ ಒಳಗಿನ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಅವರ ರಾಜೀನಾಮೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳು ರಾಜ್ಯ ರಾಜಕೀಯದಲ್ಲಿ ಸ್ಪಷ್ಟವಾಗಲಿದೆ.