ಸಹಕಾರ ಸಚಿವ ಕೆ.ಎನ್. ರಾಜಣ್ಣ ತಾವಾಗಿಯೇ ನೀಡಿದ ರಾಜೀನಾಮೆ ಪತ್ರವನ್ನು ಸರ್ಕಾರ ಅಂಗೀಕಾರ ಮಾಡಿಲ್ಲ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ನೇರವಾಗಿ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಾಗಿದೆ. ವೋಟರ್ ಐಡಿ ವಿಚಾರವಾಗಿ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ವಜಾ ಆದೇಶ ಬಂದಿದೆ.
ಬೆಂಗಳೂರು (ಆ.11): ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಮಧ್ಯಾಹ್ನದ ನಂತರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸರ್ಕಾರದಿಂದ ರಾಜಣ್ಣ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಲಾಗಿತ್ತು. ಆದರೆ, ಇದಾದ ನಂತರ ರಾಜಣ್ಣ ಅವರಿಂದ ರಾಜೀನಾಮೆ ಪಡೆಯದೇ ಸಚಿವ ಸಂಪುಟದಿಂದ ಉಚ್ಛಾಟನೆ ಮಾಡಲಾಗಿದೆ. ಈ ಮೂಲಕ ಸಚಿವರೊಬ್ಬರನ್ನು ಹೀನಾಯವಾಗಿ ಪಕ್ಷದ ಸಂಪುಟದಿಂದ ಹೊರಗೆ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜಣ್ಣ ರಾಜೀನಾಮೆ ಕೊಡುವುದಕ್ಕೂ ಮುನ್ನವೇ ಸಚಿವ ಸಂಪುಟದಿಂದ ವಜಾ ಮಾಡುವುದಕ್ಕೆ ರಾಜ್ಯಪಾಲರಿಗೆ ಪತ್ರವನ್ನು ರವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಅನುಮೋದನೆಯೊಂದಿಗೆ ರಾಜಭವನದ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು, 'ಮುಂದಿನ ಅಗತ್ಯ ಕ್ರಮಕ್ಕಾಗಿ, ಮಾನ್ಯ ಸಹಕಾರ ಸಚಿವ ಶ್ರೀ.ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕುವ (ವಜಾ ಮಾಡುವ) ಕುರಿತು ಮಾನ್ಯ ರಾಜ್ಯಪಾಲರು ಸಹಿ ಮಾಡಿದ ಮೂಲ ಅಧಿಸೂಚನೆಯನ್ನು ಇದರೊಂದಿಗೆ ಕಳುಹಿಸಲು ನನಗೆ ನಿರ್ದೇಶಿಸಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.
ಅವಮಾನಿಸಲೆಂದೇ ವಜಾ ಮಾಡಿತಾ ಕಾಂಗ್ರೆಸ್ ಸರ್ಕಾರ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ ಲೋಕಸಭಾ ಚುನಾವಣೆಯಲ್ಲಿ ವೋಟರ್ ಐಡಿ ಮತ್ತು ಮತದಾನ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಹೋರಾಟ ಮಾಡಿದ್ದರು. ದೇಶದಾದ್ಯಂತ ದೊಡ್ಡ ಹೋರಾಟವನ್ನು ಮಾಡುವುದಕ್ಕೆ ಕರ್ನಾಟಕವನ್ನೇ ಮೊದಲ ವೇದಿಕೆಯನ್ನಾಗಿ ಬಳಕೆ ಮಾಡಿಕೊಂಡಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಭಾರೀ ಬೆಂಬಲ ವ್ಯಕ್ತವಾಗುವ ನಿರೀಕ್ಷೆಯಲ್ಲಿದ್ದರು. ಆದರೆ, ಸ್ವತಃ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಖಾತೆಯಲ್ಲಿರುವ ಸಚಿವ ಕೆ.ಎನ್. ರಾಜಣ್ಣ ಅವರೇ ತಮ್ಮ ಪಕ್ಷ ಸುಪ್ರೀಂ ನಾಯಕನಾದ ರಾಹುಲ್ ಗಾಂಧಿ ನಡೆಗೆ ವಿರುದ್ಧವಾಗಿ ಮಾತನಾಡಿದ್ದರು. ರಾಜಣ್ಣ ಅವರ ಮಾತನ್ನು ವಿರೋಧಿಸಿ ಸ್ವಪಕ್ಷೀಯ ನಾಯಕರು ಇದನ್ನು ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರಿಗೆ ಪತ್ರದ ಮುಖೇನ ದೂರು ನೀಡಿದ್ದರು. ಇದರ ಬೆನ್ನಲ್ಲಿಯೇ ಹೈಕಮಾಂಡ್‌ನಿಂದ ಸಚಿವ ಸಂಪುಟದಿಂದ ವಜಾ ಮಾಡುವುದಕ್ಕೆ ಆದೇಶ ಬಂದಿದೆ.
ನೆಪ ಮಾತ್ರಕ್ಕೆ ರಾಜೀನಾಮೆ ಪತ್ರ ಸಲ್ಲಿಕೆ:
ಇನ್ನು ರಾಜಣ್ಣ ಅವರನ್ನು ವಜಾ ಮಾಡುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಕೂಡಲೇ ತಾವು ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡುವ ನಾಟಕ ಮಾಡಿದ್ದಾರೆ. ಆದರೆ, ಇದಕ್ಕೂ ಮೊದಲೇ ತಮ್ಮನ್ನು ಸಚಿವ ಸಂಪುಟದಿಂದ ಹೊರಗೆ ಹಾಕುವುದು ನಿಶ್ಚಿತ ಎಂಬ ಮಾಹಿತಿ ತಿಳಿದುಕೊಂಡಿದ್ದರು. ಇಲ್ಲಿ ನೆಪ ಮಾತ್ರಕ್ಕೆ ರಾಜಣ್ಣ ರಾಜೀನಾಮೆ ಸಲ್ಲಿಕೆ ಮಾಡಿದರೆ, ಅದನ್ನು ಸಿಎಂ ಸಿದ್ದರಾಮಯ್ಯ ಕೂಡ ಅಂಗೀಕಾರ ಕೂಡ ಮಾಡಿದ್ದರು. ಆದರೆ, ಇದೆಲ್ಲಾ ಪ್ರಹಸನ ನಡೆದ ನಂತರವೂ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವುದಕ್ಕೆ ರಾಜಭವನದಿಂದ ಆದೇಶ ಬಂದಿದೆ.
ರಾಜಕೀಯ ಹೆಮ್ಮರಕ್ಕೆ ಕೊಡಲಿ ಪೆಟ್ಟು:
ಕೆ.ಎನ್. ರಾಜಣ್ಣ ರಾಜ್ಯ ರಾಜಕಾರಣವನ್ನು ಅಲುಗಾಡಿಸುವಂತಹ ಅನೇಕ ಹೇಳಿಕೆಗಳನ್ನು ನೀಡಿದ್ದಾರೆ. ಅವರ ಕೆಲವೊಂದು ಹೇಳಿಕೆಗಳು ರಾಜ್ಯ ಸರ್ಕಾರಕ್ಕೆ ಬಾಯಲ್ಲಿಟ್ಟುಕೊಂಡ ಬಿಸಿ ತುಪ್ಪದಂತಾಗುತ್ತಿದ್ದವು. ಆಗ ಅವರನ್ನು ಸಹಿಸಿಕೊಳ್ಳಲೂ ಆಗದೇ, ಹೊರಹಾಕಲೂ ಆಗದೇ ಕಾಯುತ್ತಿದ್ದವು. ಇದೇ ಧೈರ್ಯದಲ್ಲಿ ರಾಹುಲ್ ಗಾಂಧಿಯ ಹೋರಾಟವನ್ನೂ ಲೆಕ್ಕಿಸದೇ ತಮಗನಿಸಿದ್ದನ್ನು ಹೇಳಿದ ರಾಜಣ್ಣ ಇದೀಗ ತಮ್ಮ ರಾಜಕೀಯ ಭವಿಷ್ಯದ ಹೆಮ್ಮರಕ್ಕೆ ಕೊಡಲಿ ಪೆಟ್ಟು ಹಾಕಿಕೊಂಡಿದ್ದಾರೆ. ತಾವು ಮಾತನಾಡುವಾಗ ತಮ್ಮ ಮಾತು ಇಷ್ಟೊಂದು ಗಂಭೀರ ಸ್ವರೂಪಕ್ಕೆ ತಿರುಗತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ರಾಜಣ್ಣನನ್ನು ಹಣಿಯಬೇಕು ಎಂದು ಕಾಯುತ್ತಿದ್ದವರಿಗೆ ಇದೊಂದು ಸದಾವಕಾಶ ಆಗಿದೆ.
