ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ರಾಜೀನಾಮೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಅಂಗೀಕರಿಸಿದ್ದಾರೆ. ಒಂದೇ ಸಮುದಾಯದ ಇಬ್ಬರು ಸಚಿವರು ಸಿದ್ದರಾಮಯ್ಯ ಸಂಪುಟದಿಂದ ರಾಜೀನಾಮೆ ನೀಡಿದ್ದಾರೆ. ಪಕ್ಷದೊಳಗಿನ ಒತ್ತಡ ರಾಜೀನಾಮೆಗೆ ಕಾರಣ ಎನ್ನಲಾಗುತ್ತಿದೆ.

ಬೆಂಗಳೂರು (ಆ.11): ವೋಟರ್ ಐಡಿ ವಿಚಾರದಲ್ಲಿ ರಾಹುಲ್ ಗಾಂಧಿ ಅವರ ಹೋರಾಟದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ, ಪಕ್ಷದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದೀಗ ರಾಜಣ್ಣ ಅವರ ರಾಜೀನಾಮೆ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರು ಅಂಗೀಕಾರ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ರಾಜೀನಾಮೆ ನೀಡಿದ ಎರಡನೇ ಸಚಿವ ಮತ್ತು ಒಂದೇ ಸಮುದಾಯಕ್ಕೆ ಸೇರಿದ 2ನೇ ಸಚಿವರಾಗಿದ್ದಾರೆ.

ರಾಜೀನಾಮೆ ಪತ್ರ ಸಲ್ಲಿಸಿದ್ದು ದೃಢ:

ಸಚಿವ ರಾಜಣ್ಣ ಅವರು ಮುಖ್ಯಮಂತ್ರಿಯವರ ಕಾರ್ಯದರ್ಶಿ ವೆಂಕಟೇಶಯ್ಯ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಈ ಕುರಿತು ಅಧಿಕೃತ ಹೇಳಿಕೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ರಾಜೀನಾಮೆ ಅಂಗೀಕಾರವಾಗಿರುವ ಕುರಿತು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ನಡೆದ ಮಹತ್ವದ ಸಭೆಯ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.

ರಾಜೀನಾಮೆಗೆ ಮುನ್ನ ನಡೆದ ಸಭೆ:

ರಾಜೀನಾಮೆ ನೀಡುವ ಮೊದಲು ರಾಜಣ್ಣ ಅವರೊಂದಿಗೆ ಹಿರಿಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾತುಕತೆ ನಡೆಸಿದ್ದು, ಈ ಸಭೆಯಲ್ಲಿ ರಾಜಣ್ಣ ಅವರ ಪುತ್ರ ರಾಜೇಂದ್ರ ಕೂಡ ಭಾಗವಹಿಸಿದ್ದರು. ಆದರೆ, ಪಕ್ಷದೊಳಗಿನ ತೀವ್ರ ಒತ್ತಡದಿಂದಾಗಿ ರಾಜೀನಾಮೆ ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಸಂಪುಟಕ್ಕೆ ಹಿನ್ನಡೆ:

ಕೇವಲ ಒಂದು ತಿಂಗಳ ಹಿಂದೆ ಪರಿಶಿಷ್ಟ ಪಂಗಡದ ಸಚಿವರಾಗಿದ್ದ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಿದ್ದರು. ಈಗ ಅದೇ ಪರಿಶಿಷ್ಟ ಪಂಗಡದ ಮತ್ತೊಬ್ಬ ಸಚಿವರಾದ ಕೆ.ಎನ್. ರಾಜಣ್ಣ ಅವರ ರಾಜೀನಾಮೆಯಿಂದಾಗಿ ಸಿಎಂ ಸಿದ್ದರಾಮಯ್ಯ ಸಂಪುಟಕ್ಕೆ ಹಿನ್ನಡೆಯಾಗಿದೆ. ಈ ರಾಜೀನಾಮೆಯಿಂದಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ. ಸಚಿವ ರಾಜಣ್ಣ ಅವರು ರಾಜೀನಾಮೆ ಕೊಟ್ಟಿದ್ದಾರೋ ಇಲ್ಲವೋ ಎಂಬ ಬಗ್ಗೆ ಸಿಎಂ ಬಂದ ಬಳಿಕ ಸ್ಪಷ್ಟಪಡಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟು 14 ತಿಂಗಳ ಅಂತರದಲ್ಲಿ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ.

ಈ ಪ್ರಕರಣವು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಪಕ್ಷದೊಳಗೆ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು ಸ್ಪಷ್ಟಪಡಿಸಿದೆ. ಸಚಿವ ರಾಜಣ್ಣ ಅವರ ರಾಜೀನಾಮೆಯ ಹಿಂದಿನ ಸಂಪೂರ್ಣ ಕಾರಣಗಳು ಮತ್ತು ಇದರ ಪರಿಣಾಮಗಳ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.