Dinesh Gundu Rao on ambulance service: ಖಾಸಗಿ ಏಜೆನ್ಸಿಗಳ ಗೊಂದಲಗಳನ್ನು ನಿವಾರಿಸಲು ಕರ್ನಾಟಕದ 108 ಆಂಬುಲೆನ್ಸ್ ಸೇವೆಯನ್ನು ಎರಡು ತಿಂಗಳೊಳಗೆ ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರು (ಅ.15): ಕರ್ನಾಟಕದ 108 ಆಂಬುಲೆನ್ಸ್ ಸೇವೆಯ ನಿರ್ವಹಣೆಯಲ್ಲಿ ಖಾಸಗಿ ಏಜೆನ್ಸಿಗಳ ಗೊಂದಲಗಳನ್ನು ತೊಡೆದುಹಾಕಲು ಸರ್ಕಾರ ನೇರ ನಿಯಂತ್ರಣ ತೆಗೆದುಕೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇಂದು ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ ಸಚಿವರು, ಜಿವಿಕೆ ಸಂಸ್ಥೆಯಿಂದ ಇನ್ನೂ ಸಂಪೂರ್ಣ ಸರ್ಕಾರದ ಕಂಟ್ರೋಲ್‌ಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇನ್ನು ಎರಡು ತಿಂಗಳೊಳಗೆ ಎಲ್ಲಾ ನಿಯಂತ್ರಣ ಸರ್ಕಾರ ತೆಗೆದುಕೊಳ್ಳುತ್ತೇವೆ ಎಂದರು.
ಆಂಬುಲೆನ್ಸ್ ಕೆಟ್ಟು ನಿಂತಿವೆ ಎಂಬ ವರದಿ ಸುಳ್ಳು:
ಸುದ್ದಿ ಸಂಸ್ಥೆಗಳಲ್ಲಿ 108 ಆಂಬುಲೆನ್ಸ್‌ಗಳು ಕೆಟ್ಟು ನಿಂತಿವೆ ಎಂದು ತೋರಿಸುತ್ತಿರುವುದು ಸತ್ಯವಲ್ಲ. ಸುವರ್ಣ ಚಾನಲ್‌ನಲ್ಲಿ ತೋರಿಸುತ್ತಿರುವ ಆಂಬುಲೆನ್ಸ್‌ಗಳು ಹಲವು ಕೆಟ್ಟು ನಿಂತ ಗಾಡಿಗಳು. ಅವುಗಳನ್ನು ಗುಜರಿಗೆ ಹಾಕಬೇಕಿತ್ತು. ಆದರೆ ನಮ್ಮ ಬಳಿ ಸರಿಯಾಗಿ ಕೆಲಸ ಮಾಡುತ್ತಿರುವ 700 ಆಂಬುಲೆನ್ಸ್‌ಗಳಿವೆ. ಕೇವಲ 300 ಆಂಬುಲೆನ್ಸ್‌ಗಳು ಮಾತ್ರ ಕೆಲಸ ಮಾಡುತ್ತಿವೆ ಎಂಬುದು ತಪ್ಪು ಎಂದರು.
ಹೊಸ ಬದಲಾವಣೆ ತರಲಿದ್ದೇವೆ:
ಚಾಮರಾಜನಗರ ಜಿಲ್ಲೆಯಲ್ಲಿ ಪೈಲಟ್ ಪ್ರಾಜೆಕ್ಟ್ ರೀತಿಯಲ್ಲಿ 108 ಸೇವೆಯನ್ನು ಸರ್ಕಾರದ ಕಂಟ್ರೋಲ್ ತೆಗೆದುಕೊಂಡಿದ್ದೇವೆ. ಸೇವೆಯನ್ನು ಉತ್ತಮಗೊಳಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದೇವೆ ಎಂದರು. ಖಾಸಗಿ ಏಜೆನ್ಸಿಗಳಲ್ಲಿ ಕೆಲವು ಗೊಂದಲಗಳಿವೆ - ಪ್ರೆಷರ್ ಸಮಯದಲ್ಲಿ ಆಂಬುಲೆನ್ಸ್ ಇಲ್ಲ ಎಂದು ಹೇಳಿರಬಹುದು. ಆದರೆ ನಮ್ಮಲ್ಲಿ ಕೊರತೆ ಇಲ್ಲ; ಕೆಲವೊಮ್ಮೆ ಬೇರೆಡೆಯಿಂದ ತರಿಸಬೇಕಾಗುತ್ತದೆ ಹೊಸ ಬದಲಾವಣೆಗಳನ್ನು ತರಲು ಸರ್ಕಾರ ಮುಂದಾಗಿದ್ದು, ಇನ್ನೂ 200 ಆಂಬುಲೆನ್ಸ್‌ಗಳ ಖರೀದಿಗೆ ಅನುಮೋದನೆ ಸಿಕ್ಕಿದೆ ಎಂದು ಸಚಿವರು ತಿಳಿಸಿದರು.
ಶಿಫ್ಟ್ ಗೊಂದಲ ಸರಿಪಡಿಸುತ್ತೇವೆ:
ಶಿಫ್ಟ್ ಸಮಯದ ಬದಲಾವಣೆಯನ್ನು ಸರ್ಕಾರ ಮಾಡಿಲ್ಲ. ಏಜೆನ್ಸಿಗಳು ಮೊದಲಿನ 12 ಗಂಟೆಯ ಎರಡು ಶಿಫ್ಟ್‌ಗಳನ್ನು ಮಾಡಿಕೊಂಡಿದ್ದರು. ಈಗ 8 ಗಂಟೆಯ ಮೂರು ಶಿಫ್ಟ್‌ಗಳಾಗಿ ಬದಲಾಯಿಸಿಕೊಂಡಿದ್ದು, ಅದರಿಂದ ಗೊಂದಲ ಉಂಟಾಗಿರಬಹುದು ಎಂದರು. 'ನಾನು ಎಲ್ಲವನ್ನೂ ಚೆಕ್ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಖಾಸಗಿ ಏಜೆನ್ಸಿಗಳಿಗೆ ಇದು ಸ್ವಲ್ಪ ಕಷ್ಟ ಆಗಬಹುದು. ಆದ್ರೆ ಆಂಬುಲೆನ್ಸ್ ನಿಯಂತ್ರಣ ಸರ್ಕಾರ ವಶಕ್ಕೆ ಪಡೆಯಲಿದೆ. ಇನ್ನೂ ಎರಡು ತಿಂಗಳಿನಲ್ಲಿ ಒಂದು ಹಂತಕ್ಕೆ ಬರಲಿದೆ. ಏಜೆನ್ಸಿ ಗಳು ಹಣ ಉಳಿಸಲು ಕೆಲವು ಗೊಂದಲಗಳನ್ನು ಮಾಡಿಕೊಳ್ಳುತ್ತವೆ. ಇದನ್ನೆಲ್ಲಾ ಸರಿ ಮಾಡಲೆಂದೇ ಸರ್ಕಾರ ಕಂಟ್ರೋಲ್ ಗೆ ತೆಗೆದುಕೊಳ್ಳಲಿದೆ ಎಂದರು
ದೇಶದಲ್ಲೇ ಆಂಬುಲೆನ್ಸ್ ಸೇವೆಯಲ್ಲಿ ಕರ್ನಾಟಕವು ಪ್ರಥಮ ಸ್ಥಾನ ಪಡೆಯಲಿದೆ. ವ್ಯವಸ್ಥೆ ಸುಧಾರಣೆಗೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಭರವಸೆ ನೀಡಿದರು. ಈ ಬೆಳವಣಿಗೆಯಿಂದ ಖಾಸಗಿ ಏಜೆನ್ಸಿಗಳಿಗೆ ಕಷ್ಟ ಆಗಬಹುದು ಎಂದು ಅವರು ಒಪ್ಪಿದರೂ, ಜನರ ಸೇವೆಗೆ ಆದ್ಯತೆ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಇನ್ನು ಎರಡು ತಿಂಗಳೊಳಗೆ ಒಂದು ಹಂತಕ್ಕೆ ಬರಲಿದ್ದೇವೆ ಎಂದು ಹೇಳಿದರು.
