ರಾಜ್ಯ ಸರ್ಕಾರವು ಹಲವು ನಿಗಮ ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕಾತಿಯಲ್ಲಿ ಬದಲಾವಣೆ ಮಾಡಿದೆ. ಬಿಎಂಟಿಸಿ ಅಧ್ಯಕ್ಷರಾಗಿ ವಿ.ಎಸ್. ಆರಾಧ್ಯ ಅವರನ್ನು ನೇಮಿಸಲಾಗಿದ್ದು, ನಿಕೇತ್ ರಾಜ್ ಮೌರ್ಯ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರವು ಬಿಎಂಟಿಸಿ ಹಾಗೂ ಇತರೆ ನಿಗಮ ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಮೂಲಕ ಪ್ರಮುಖ ನೇಮಕಾತಿ ಪಟ್ಟಿಯನ್ನು ಹೊರಡಿಸಿದೆ. ಮುಂಚೆ ಬಿಎಂಟಿಸಿ ಅಧ್ಯಕ್ಷರಾಗಿದ್ದ ನಿಕೇತ್ ರಾಜ್ ಮೌರ್ಯ ಅವರಿಗೆ ಇದೀಗ ಉಪಾಧ್ಯಕ್ಷ ಹುದ್ದೆ ನೀಡಲಾಗಿದೆ. ಅವರ ಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿ.ಎಸ್. ಆರಾಧ್ಯ ಅವರನ್ನು ಹೊಸ ಬಿಎಂಟಿಸಿ ಅಧ್ಯಕ್ಷರಾಗಿ ನೇಮಿಸಿದ್ದಾರೆ. ಈ ನಿರ್ಧಾರದಿಂದ ನಿಗಮ ಮಂಡಳಿ ನೇಮಕಾತಿಯಲ್ಲಿ ಮತ್ತೊಂದು ಬದಲಾವಣೆಗೆ ಸಾಕ್ಷಿಯಾಗಿದೆ.
ಬಾಕಿ ಉಳಿದ ಐದು ನಿಗಮ ಮಂಡಳಿಗಳಿಗೆ ಸಹ ಸರ್ಕಾರವು ಅಧ್ಯಕ್ಷರನ್ನು ಘೋಷಿಸಿದೆ.
ಅವು ಹೀಗಿವೆ:
- ಸೈಯದ್ ಮೆಹಮೂದ್ ಚಿಸ್ಟಿ – ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿಗಳ ಅಧ್ಯಕ್ಷರು.
- ಶರಣಪ್ಪ ಸಲಾದ್ ಪುರ್ – ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರು.
- ಆಂಜನಪ್ಪ – ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ ಅಧ್ಯಕ್ಷರು.
- ನೀಲಕಂಠರಾವ್ ಎಸ್. ಮೂಲಗೆ – ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು.
- ಅನಿಲ್ ಕುಮಾರ್ ಜಮಾದಾರ್ – ಜವಾಹರ ಬಾಲಭವನ ಸೊಸೈಟಿಯ ಉಪಾಧ್ಯಕ್ಷರು.
ಬದಲಾವಣೆ ಕಾರಣವೇನು?
ಈ ಬದಲಾವಣೆಗಳಿಂದ ನಿಗಮ ಮಂಡಳಿಗಳ ಕಾರ್ಯನಿರ್ವಹಣೆಗೆ ಹೊಸ ಶಕ್ತಿ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ಅದೇ ವೇಳೆ, ಬಿಎಂಟಿಸಿ ಅಧ್ಯಕ್ಷ ಸ್ಥಾನಕ್ಕೆ ನಿಕೇತ್ ರಾಜ್ ಮೌರ್ಯ ಬದಲಾಗಿ ಆರಾಧ್ಯ ಅವರನ್ನು ನೇಮಿಸಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ನಿನ್ನೆಯಷ್ಟೇ ನಿಕೇತ್ ರಾಜ್ ಅವರು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಿ ಕೃತಜ್ಷತೆ ಅರ್ಪಿಸಿದರು. ಆದರೆ ಇಂದು ಇದ್ದಕ್ಕಿದ್ದಂತೆಯೇ ಅವರ ಸ್ಥಾನವನ್ನು ಬದಲು ಮಾಡಿ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಮುಂದಿನ 2 ವರ್ಷಗಳರೆಗೆ ಅಥವಾ ಮುಂದಿನ ಆದೇಶದವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ.
