ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ವಕ್ತಾರರಾದ ನಿಕೇತ್ ರಾಜ್ ಮೌರ್ಯ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬಿಎಂಟಿಸಿಯನ್ನು ಮತ್ತಷ್ಟು ಜನಪರ ಮತ್ತು ಪರಿಣಾಮಕಾರಿಯಾಗಿಸಲು ಶ್ರಮಿಸುವುದಾಗಿ ಅವರು ಭರವಸೆ ನೀಡಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಪೈಕಿ ಪ್ರಮುಖವಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಗೆ ನೂತನ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ನಿರ್ದೇಶಕರ ಮಂಡಳಿ ಸದಸ್ಯರು ಹಾಜರಿದ್ದು, ಪುಷ್ಪಗುಚ್ಛ ನೀಡಿ ನೂತನ ಅಧ್ಯಕ್ಷರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಂಸ್ಥೆಯ ಭವಿಷ್ಯದ ಅಭಿವೃದ್ಧಿ, ನವೀನ ಯೋಜನೆಗಳು ಹಾಗೂ ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವ ನಿಟ್ಟಿನಲ್ಲಿ ನಿಕೇತ್ ರಾಜ್ ಮೌರ್ಯ ತಮ್ಮ ನಿಲುವು ವ್ಯಕ್ತಪಡಿಸಿದರು.
ಖ್ಯಾತ ವಾಗ್ಮಿ, ಕಾಂಗ್ರೆಸ್ ವಕ್ತಾರ ಮೌರ್ಯ
ನಿಕೇತ್ ರಾಜ್ ಮೌರ್ಯ ಅವರು ರಾಜಕೀಯ ಕ್ಷೇತ್ರದಲ್ಲಿಯೂ ಚಿರಪರಿಚಿತರಾಗಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ವಕ್ತಾರರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ತಮ್ಮ ಚುರುಕು ಕಾರ್ಯಶೈಲಿ ಹಾಗೂ ಸಂಘಟನಾ ಕೌಶಲ್ಯದಿಂದ ಅವರು ಹೊಸ ಹುದ್ದೆಯಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದ್ದಾರೆ.
ಎಕ್ಸ್ ನಲ್ಲಿ ಸಂತಸ ಹಂಚಿಕೊಂಡ ಮೌರ್ಯ
ಬಿಎಂಟಿಸಿಗೆ ನೂತನ ಅಧ್ಯಕ್ಷರಾಗಿ ನೇಮಕವಾದ ಬೆನ್ನಲ್ಲೇ ಟ್ವೀಟ್ ಮಾಡಿರುವ ನಿಕೇತ್ ರಾಜ್ ಮೌರ್ಯ ಅವರು, ಓರ್ವ ಸಾಮಾನ್ಯ ಕಾರ್ಯಕರ್ತ ನಾಗಿ ಕೆಲಸವನ್ನು ಪ್ರಾರಂಭಿಸಿದ್ದ ನನಗೆ, ಇಂದು ಕರ್ನಾಟಕ ಕಾಂಗ್ರೆಸ್ ಸರ್ಕಾರವು “ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷ” ಸ್ಥಾನದಂತಹ ಮಹೋನ್ನತ ಸ್ಥಾನವನ್ನು ನೀಡಿರುವುದು ನನ್ನ ಜವಾಬ್ದಾರಿಯನ್ನು ಮತ್ತು ಪಕ್ಷದ ಋಣವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮಹತ್ತರವಾದ ಹೊಣೆಗಾರಿಕೆಯನ್ನು ನನಗೆ ವಹಿಸಿದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರಿಗೆ, ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ರವರಿಗೆ, ಗೃಹಸಚಿವ ಶ್ರೀ ಜಿ. ಪರಮೇಶ್ವರ್ ರವರಿಗೆ ಮತ್ತು ಸಾರಿಗೆ ಸಚಿವ ಶ್ರೀ ರಾಮಲಿಂಗ ರೆಡ್ಡಿ ರವರಿಗೆ ನಾನು ಸದಾ ಅಭಾರಿ. ಜನಸೇವೆಯೇ ಧ್ಯೇಯವಾಗಿಸಿಕೊಂಡು, ಸಾರ್ವಜನಿಕರ ವಿಶ್ವಾಸಕ್ಕೆ ತಕ್ಕಂತೆ ಬಿಎಂಟಿಸಿಯನ್ನು ಮತ್ತಷ್ಟು ಜನಪರ ಮತ್ತು ಪರಿಣಾಮಕಾರಿಯಾಗಿಸಲು ನಾನು ಶ್ರಮಿಸುತ್ತೇನೆ ಎಂದು ಈ ಮೂಲಕ ನಾನು ಪ್ರಮಾಣಿಕರಿಸುತ್ತೇನೆ! ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು ಎಂದು ಬರೆದು ಕೊಂಡಿದ್ದಾರೆ.
