ಮಹಾನಗರ ಪಾಲಿಕೆ ಗಡಿಯಿಂದ 40 ಕಿಲೋ ಮೀಟರ್ ವ್ಯಾಪ್ತಿಯವರೆಗೆ ಬಿಎಂಟಿಸಿ ಬಸ್‌ಗಳ ಸಂಚಾರ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಇಂದೇ ಆದೇಶ ಹೊರಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ರಾಮನಗರ (ಸೆ.16): ಮಹಾನಗರ ಪಾಲಿಕೆ ಗಡಿಯಿಂದ 40 ಕಿಲೋ ಮೀಟರ್ ವ್ಯಾಪ್ತಿಯವರೆಗೆ ಬಿಎಂಟಿಸಿ ಬಸ್‌ಗಳ ಸಂಚಾರ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಇಂದೇ ಆದೇಶ ಹೊರಡಿಸಲಾಗುವುದು. ಇದರಿಂದ ಬೆಂಗಳೂರು ದಕ್ಷಿಣ ಜಿಲ್ಲೆಗೂ ಬಿಎಂಟಿಸಿ ಬಸ್‌ಗಳ ಸೇವೆ ಸಿಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಗರ ಸಾರಿಗೆ ‘ಬಸ್ ಸಂಚಾರ ಪ್ರಾರಂಭೋತ್ಸವ’ ಉದ್ಘಾಟಿಸಿ ಮಾತನಾಡಿ, ಶಾಸಕರ ಬೇಡಿಕೆಯಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ ಹಾಗೂ ಮಾಗಡಿ ತಾಲೂಕುಗಳಲ್ಲಿಯೂ ಬಿಎಂಟಿಸಿ ಬಸ್‌ಗಳು ಸಂಚರಿಸಲಿವೆ ಎಂದರು.
ಈ ಮೊದಲು ಕಾರ್ಪೋರೇಷನ್ ವ್ಯಾಪ್ತಿಯಿಂದ 25 ಕಿ.ಮೀ.ವರೆಗೆ ಮಾತ್ರ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿದ್ದವು. ಇನ್ಮುಂದೆ ಗಡಿಯಿಂದ 40 ಕಿ.ಮೀ ವ್ಯಾಪ್ತಿವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿದ್ದವು. ಈಗ ಬೆಂಗಳೂರು ದಕ್ಷಿಣ ಜಿಲ್ಲೆಗೂ ಸೇವೆ ವಿಸ್ತರಣೆಯಾಗಿದೆ ಎಂದು ತಿಳಿಸಿದರು.
542 ಕೋಟಿ ಪ್ರಯಾಣಕ್ಕೆ ₹13000 ಕೋಟಿ
ಈ ಮೊದಲು ಸಾರಿಗೆ ಬಸ್‌ಗಳಲ್ಲಿ 85 ಲಕ್ಷ ಜನ ಸಂಚರಿಸುತ್ತಿದ್ದರು. ಈಗ 1 ಕೋಟಿ 7 ಲಕ್ಷ ಜನರು ಸಂಚರಿಸುತ್ತಿದ್ದಾರೆ. ರಾಜ್ಯದ ಜನಸಂಖ್ಯೆ 7 ಕೋಟಿ ಇದ್ದು, ಶಕ್ತಿ ಯೋಜನೆ ಅಡಿಯಲ್ಲಿ ಪ್ರತಿನಿತ್ಯ 60 ರಿಂದ 65 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ನಿನ್ನೆಯವರೆಗೆ ಶಕ್ತಿ ಯೋಜನೆಯಡಿ 542 ಕೋಟಿ ಪ್ರಯಾಣಗಳಾಗಿವೆ. ಇದಕ್ಕೆ ₹13,000 ಕೋಟಿ ಖರ್ಚಾಗಿದೆ. ಸಮೀಕ್ಷೆಯೊಂದರ ಪ್ರಕಾರ ಉಚಿತ ಬಸ್ ನಿಂದಾಗಿ ಶೇ.23ರಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಶಾಸಕ ಇಕ್ಬಾಲ್ ಹುಸೇನ್ ಅವರು ಅಧಿವೇಶನದಲ್ಲಿ ರಾಮನಗರಕ್ಕೆ ನಗರ ಸಾರಿಗೆ ಬಸ್ ಬೇಕೆಂದು ಮನವಿ ಮಾಡಿದ್ದರು. ಅದರಂತೆ ವ್ಯವಸ್ಥೆ ಕಲ್ಪಿಸಿದ್ದೇವೆ. ಬಿಎಂಟಿಸಿನಲ್ಲಿ ಸಾಕಷ್ಟು ಬಸ್‌ಗಳಿವೆ. ಆದರೆ, ಕೆಎಸ್‌ಆರ್‌ಟಿಸಿನಲ್ಲಿ ಬಸ್ ಸಂಖ್ಯೆ ಕಡಿಮೆ ಇತ್ತು. 2019 ರಿಂದ 2023ರವರೆಗೆ ನಾನಾ ಕಾರಣಗಳಿಂದ ಬಸ್ ಗಳನ್ನು ಖರೀದಿ ಮಾಡಿರಲಿಲ್ಲ. ನಾನು ಸಾರಿಗೆ ಸಚಿವನಾದ ಮೇಲೆ 600 ಎಲೆಕ್ಟ್ರಾನಿಕ್ ಬಸ್‌ಗಳು ಸೇರಿದಂತೆ ಒಟ್ಟು 5800 ಬಸ್‌ಗಳನ್ನು ಖರೀದಿ ಮಾಡಿದ್ದು, ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ. ಅಲ್ಲದೆ, 2016ರ ನಂತರ ಸಾರಿಗೆ ಸಂಸ್ಥೆಯಲ್ಲಿ ನೇಮಕಾತಿಯೂ ಆಗಿರಲಿಲ್ಲ. ಈಗ 10,000 ಮಂದಿಯ ನೇಮಕಾತಿ ಆಗಿದೆ ಎಂದು ರೆಡ್ಡಿ ಹೇಳಿದರು.
