ಕರ್ನಾಟಕ ಸರ್ಕಾರ ಉದ್ಯೋಗಸ್ಥ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ 'ಋತು ಚಕ್ರ ರಜೆ ನೀತಿ-2025' ಜಾರಿಗೆ? ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದ್ದು, ಜೊತೆಗೆ ₹2,000 ಕೋಟಿ ವೆಚ್ಚದ ಸೇತುವೆ ಪುನರ್ ನಿರ್ಮಾಣ ಯೋಜನೆಗೂ ಅನುಮೋದನೆ ಸಿಗುವ ಸಾಧ್ಯತೆ

ಬೆಂಗಳೂರು (ಅ.9): ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ರಾಜ್ಯಾದ್ಯಂತ ಸರ್ಕಾರಿ ಕಚೇರಿ, ಖಾಸಗಿ ಕಂಪೆನಿ, ಕೈಗಾರಿಕಾ ವಲಯದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ರಜೆ ನೀಡುವ ‘ಋುತು ಚಕ್ರ ರಜೆ ನೀತಿ-2025’ ಜಾರಿಗೆ ತರುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆಯಿದೆ.

ಗುರುವಾರ ಬೆಳಗ್ಗೆ 11.30 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ, ಸರ್ಕಾರಿ, ಖಾಸಗಿ ಕಂಪನಿಯಲ್ಲಿ ಸೇರಿ ಎಲ್ಲಾ ಉದ್ಯೋಗಸ್ಥ ಮಹಿಳೆಯರಿಗೆ ಋತು ಚಕ್ರದ ರಜೆ ನೀಡಲು ತೀರ್ಮಾನಿಸುವ ಸಾಧ್ಯತೆಯಿದೆ.

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿನ ಉದ್ಯೋಗಿಯಾಗಿರುವ ಮಹಿಳೆಯರಿಗೆ ವೇತನ ಸಹಿತ ಋತು ಚಕ್ರ ರಜೆ ನೀಡುವ ಸಂಬಂಧ ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥೆ ಸಪ್ನಾ ಎಸ್ ಅವರ ಅಧ್ಯಕ್ಷತೆಯ 18 ಸದಸ್ಯರ ಸಮಿತಿ ಶಿಫಾರಸು ಮಾಡಿತ್ತು.

ಇದನ್ನೂ ಓದಿ: Valmiki Jayanti: ಸಿಎಂ ಸಿದ್ದರಾಮಯ್ಯರಿಂದ ಮಹತ್ವದ ಘೋಷಣೆ!

ಮುಟ್ಟಿನ ಅವಧಿಯಲ್ಲಿ ಮಹಿಳೆಯರಲ್ಲಿ ಆಗುವ ಶಾರೀರಿಕ ಬದಲಾವಣೆ, ಅನುಭವಿಸುವ ಸಂಕಷ್ಟ, ಸವಾಲು, ವಿಶ್ರಾಂತಿಯ ಅಗತ್ಯ, ಕೆಲಸದ ಸ್ಥಳದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಮುಟ್ಟಿನ ರಜೆ ನೀತಿ ಈಗಾಗಲೇ ಬಿಹಾರ, ಕೇರಳ ಮತ್ತು ಒಡಿಶಾದಲ್ಲಿ ಜಾರಿಯಲ್ಲಿದೆ. ಆ ರಾಜ್ಯಗಳು ಅನುಸರಿಸುತ್ತಿರುವ ನೀತಿ ಪರಿಗಣಿಸಿ ರಾಜ್ಯದಲ್ಲೂ ಪ್ರತ್ಯೇಕ ನೀತಿ ಜಾರಿಗೆ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

2,000 ಕೋಟಿ ರು. ವೆಚ್ಚದಲ್ಲಿ ಸೇತುವೆ ಪುನರ್‌ ನಿರ್ಮಾಣ

ಪ್ರವಾಹ ಮತ್ತಿತರ ಕಾರಣಗಳಿಂದ ಹಾನಿಗೆ ಒಳಗಾಗಿರುವ ಸೇತುವೆಗಳ ಪುನರ್‌ ನಿರ್ಮಾಣ ಹಾಗೂ ಪುನಶ್ಚೇತನ ಕಾಮಗಾರಿಗಳನ್ನು 2,000 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲೂ ಗುರುವಾರದ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ಪಡೆಯುವ ಸಾಧ್ಯತೆಯಿದೆ.

ಇದೇ ವೇಳೆ ಮೊದಲ ಹಂತದಲ್ಲಿ 39 ಬೃಹತ್‌ ಸೇತುವೆಗೆ 1,000 ಕೋಟಿ ರು. ವೆಚ್ಚಿಸಲು ಆಡಳಿತಾತ್ಮಕ ಅನುಮೋದನೆ ಪಡೆಯುವುದಾಗಿ ಮೂಲಗಳು ತಿಳಿಸಿವೆ.