ಓಸಿ-ಸಿಸಿ ಇಲ್ಲದೆ ನಿರ್ಮಿಸಲಾದ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡಲು ಸರ್ಕಾರ ಒಂದು ಬಾರಿಯ ವಿನಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಕಾನೂನು ತೊಡಕುಗಳನ್ನು ನಿವಾರಿಸಿ, ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ.

ಬೆಂಗಳೂರು (ಅ.9): ಬೆಂಗಳೂರು ಸೇರಿ ರಾಜ್ಯಾದ್ಯಂತ ಓಸಿ-ಸಿಸಿ ಇಲ್ಲದೆ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ಒಂದು ಬಾರಿಯ ಪರಿಹಾರವಾಗಿ ಓಸಿ-ಸಿಸಿಯಿಂದ ವಿನಾಯಿತಿ ನೀಡಿ ವಿದ್ಯುತ್‌ ಸಂಪರ್ಕ, ನೀರಿನ ಸಂಪರ್ಕ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಓಸಿ,ಸಿಸಿ ಇಲ್ಲದೆ ವಿದ್ಯುತ್, ನೀರು, ಒಳಚರಂಡಿ ಸಂಪರ್ಕ ನೀಡದಂತೆ 2024ರಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ. ಅದರಂತೆ ಎಸ್ಕಾಂಗಳು 2025ರ ಮಾರ್ಚ್‌ನಿಂದ ಓಸಿ, ಸಿಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಹೀಗಾಗಿ 2025ರ ಮಾರ್ಚ್‌ಗೆ ಮೊದಲು ನಿರ್ಮಾಣವಾಗಿರುವ ಅಥವಾ ನೀರು, ವಿದ್ಯುತ್‌ಗೆ ಅರ್ಜಿ ಸಲ್ಲಿಸಿರುವ ಕಟ್ಟಡಗಳಿಗೆ ಸುಗ್ರೀವಾಜ್ಞೆ ಮೂಲಕ ಒಂದು ಬಾರಿಗೆ ಸೀಮಿತವಾಗಿ ವಿನಾಯಿತಿ ನೀಡಲು ಸರ್ಕಾರ ಗಂಭೀರ ಚರ್ಚೆ ನಡೆಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ಸುಮಾರು 2.5 ಗಂಟೆಗಳ ಕಾಲ ವಿಸ್ತೃತ ಸಭೆ ನಡೆಸಿದ್ದು, ಸುಪ್ರೀಂ ಕೋರ್ಟ್‌ ನ್ಯಾಯಾಂಗ ನಿಂದನೆಗೆ ಒಳಗಾಗದೆ ಈಗಾಗಲೇ ಕಟ್ಟಡ ನಿರ್ಮಿಸಿರುವವರಿಗೆ ಹೇಗೆ ರಕ್ಷಣೆ ನೀಡಬಹುದು ಎಂಬ ಬಗ್ಗೆ ಚರ್ಚಿಸಲಾಯಿತು.

ಈ ವೇಳೆ 1,200 ಚದರಡಿವರೆಗಿನ ವಿಸ್ತೀರ್ಣದಲ್ಲಿ ಈಗಾಗಲೇ ನಿರ್ಮಿಸಿರುವ ಕಟ್ಟಡಗಳಿಗೆ ಸುಗ್ರೀವಾಜ್ಞೆ ಮೂಲಕ ವಿನಾಯಿತಿ ನೀಡಲು ಸರ್ಕಾರ ಗಂಭೀರವಾಗಿ ಚಿಂತಿಸಿದೆ. ಇದೇ ವೇಳೆ 1,200 ಚದರಡಿಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಿಗೆ ಹೇಗೆ ಅವಕಾಶ ನೀಡಬೇಕು? ಯಾವ ಅವಧಿವರೆಗೆ ನಿರ್ಮಿಸಿರುವ (ಕಟ್‌ ಆಫ್‌ ಡೇಟ್) ಕಟ್ಟಡಗಳಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ತೀವ್ರ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಈ ಬಗ್ಗೆ ಬುಧವಾರದ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಆಗದೆ ಗೊಂದಲ ಮುಂದುವರೆದಿರುವುದಾಗಿ ಎಂದು ತಿಳಿದುಬಂದಿದೆ.

ಕಾನೂನು ಇಲಾಖೆಗೆ ವರದಿಗೆ ಸೂಚನೆ:

ಸುಪ್ರೀಂ ಕೋರ್ಟ್‌ ಓಸಿ-ಸಿಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್‌, ನೀರು ನೀಡದಂತೆ ಸ್ಪಷ್ಟ ಆದೇಶ ಹೊರಡಿಸಿದೆ. ಈ ರೀತಿಯ ಆದೇಶ ಪಾಲನೆ ಮಾಡದೆ ಕೆಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಮೇಲೆ ನ್ಯಾಯಾಂಗ ನಿಂದನೆ ನೋಟಿಸ್‌ ನೀಡಿದೆ. ಹೀಗಾಗಿ ಯಾವ ರೀತಿ ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂಬ ಬಗ್ಗೆ ತೀವ್ರ ಗೊಂದಲ ಸೃಷ್ಟಿಯಾಗಿದ್ದು, ಗುರುವಾರದ ಸಚಿವ ಸಂಪುಟ ಸಭೆಯಲ್ಲಾದರೂ ಪರಿಹಾರ ಸಿಗಲಿದೆಯೇ ಎಂಬ ಬಗ್ಗೆ ಕುತೂಹಲ ಮೂಡಿದೆ.

ಸಭೆಯಲ್ಲಿ ಕಾನೂನು ಸಚಿವ ಎಚ್.ಕೆ ಪಾಟೀಲ್, ಇಂಧನ ಸಚಿವ ಕೆ.ಜೆ. ಜಾರ್ಜ್‌, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಚಿವಾದ ಪ್ರಿಯಾಂಕ್ ಖರ್ಗೆ, ರಹೀಂ ಖಾನ್, ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌, ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಮತ್ತಿತರು ಹಾಜರಿದ್ದರು.

ಕಾನೂನು ತಜ್ಞರೊಂದಿಗೆ ಚರ್ಚಿಸಿ ಕ್ರಮ

ಓಸಿ-ಸಿಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್‌, ನೀರು ನೀಡುವ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 1,200 ಚದರಡಿ ವಿಸ್ತೀರ್ಣದವರೆಗಿನ ಕಟ್ಟಡಗಳಿಗೆ ವಿನಾಯಿತಿ ನೀಡುವ ಬಗ್ಗೆ ಚರ್ಚೆಯಾಗಿದೆ. ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಬಗ್ಗೆ ಗೊಂದಲ ಇದೆ.

ಕಟ್‌ ಆಫ್‌ ಡೇಟ್‌ ಮಾಡುವುದೋ ಅಥವಾ ಕಾಲಾವಕಾಶ ವಿಸ್ತರಿಸಬೇಕೋ ಎಂಬ ಗೊಂದಲ ಇದೆ. ಇದು ಕೇವಲ ಜಿಬಿಎ ವ್ಯಾಪ್ತಿಯ ವಿಷಯವಲ್ಲ ಪಂಚಾಯತಿ, ಮುನ್ಸಿಪಾಲಿಟಿ ಎಲ್ಲರಿಗೂ ಅನ್ವಯವಾಗುತ್ತದೆ. ಹೀಗಾಗಿ ಕಾನೂನು ತಜ್ಞರೊಂದಿಗೆ ಮತ್ತೊಮ್ಮೆ ಅಭಿಪ್ರಾಯ ಪಡೆದು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಚಿವ ಸಂಪುಟ ಸಭೆಗೆ ತರಲಾಗುವುದು ಎಂದು ಹೇಳಿದರು.

ಕಾನೂನಿನಲ್ಲಿ ಅನೇಕ ಅಡಚಣೆ:

ಕಾನೂನಿನಲ್ಲಿ ಅನೇಕ ಅಡಚಣೆಗಳು ಇವೆ. ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆ ಆಗುವುದರಿಂದ ಬೇರೆ ರಾಜ್ಯಗಳಲ್ಲಿ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ನೀಡಿದ್ದಾರೆ. ಹೀಗಾಗಿ ಕಾನೂನು ಚೌಕಟ್ಟಿನಲ್ಲಿ ಸಚಿವ ಸಂಪುಟ ಸಭೆಗೆ ಈ ವಿಚಾರ ಹೇಗೆ ತರಲು ಸಾಧ್ಯ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.