ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸಪ್ಪ ಅಪ್ಪಾ ಅವರ ಆರೋಗ್ಯ ಸ್ಥಿರವಾಗಿದೆ. ಕಲಬುರಗಿಯ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಕನಿಷ್ಠ ಆಮ್ಲಜನಕದೊಂದಿಗೆ ಉಸಿರಾಟ ನಿರ್ವಹಿಸುತ್ತಿದ್ದಾರೆ. ಸುಳ್ಳು ವದಂತಿಗಳನ್ನು ನಂಬಬೇಡಿ ಎಂದು ಆಸ್ಪತ್ರೆ ತಿಳಿಸಿದೆ.

ಕಲಬುರಗಿ (ಆ.12): ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಡಾ ಶರಣಬಸಪ್ಪ ಅಪ್ಪಾ ಅವರ ಆರೋಗ್ಯ ಸ್ಥಿರವಾಗಿದ್ದು, ಭಕ್ತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಕಲಬುರಗಿಯ ಚಿರಾಯು ಆಸ್ಪತ್ರೆಯಿಂದ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ತಿಳಿಸಿದೆ.

ಕಳೆದ ಎರಡು ವಾರಗಳಿಂದ ಡಾ. ಅಪ್ಪಾ ಅವರು ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯೋಸಹಜ ಕಾಯಿಲೆಗಳು ಮತ್ತು ನ್ಯೂಮೋನಿಯಾಕ್ಕೆ ಸಂಬಂಧಿಸಿದಂತೆ ಅವರಿಗೆ ತಜ್ಞ ವೈದ್ಯರ ತಂಡವು ಚಿಕಿತ್ಸೆ ನೀಡುತ್ತಿದೆ.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಮಂಜುನಾಥ ದೋಶೆಟ್ಟಿ ಅವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, ಡಾ. ಅಪ್ಪಾ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಕನಿಷ್ಟ ಆಕ್ಸಿಜನ್ ಸಹಾಯದೊಂದಿಗೆ ಉಸಿರಾಟ ನಿರ್ವಹಿಸುತ್ತಿದ್ದಾರೆ. ಬಹುಶಾಖಾ ತಜ್ಞ ವೈದ್ಯರ ತಂಡವು ಅವರ ಚಿಕಿತ್ಸೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಅವರ ಅಸಾಧಾರಣ ಧೈರ್ಯ ಮತ್ತು ದೃಢತೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ತಿಳಿಸಿದ್ದಾರೆ.

ಅಪ್ಪಾಜಿ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾ ಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ವದಂತಿಗಳ ಬಗ್ಗೆ ಆಸ್ಪತ್ರೆ ಎಚ್ಚರಿಕೆ ನೀಡಿದೆ. 'ಯಾರೂ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು, ಭಕ್ತರು ಇಂತಹ ವದಂತಿಗಳನ್ನು ನಂಬಬಾರದು. ಶೀಘ್ರದಲ್ಲೇ ಡಾ.ಶರಣಬಸವ ಅಪ್ಪಾ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳುವ ವಿಶ್ವಾಸವನ್ನು ಆಸ್ಪತ್ರೆ ವ್ಯಕ್ತಪಡಿಸಿದೆ. ಡಾ ಶರಣಬಸವ ಅಪ್ಪಾ ಅವರ ಆರೋಗ್ಯದ ಬಗ್ಗೆ ಭಕ್ತರಲ್ಲಿ ಉಂಟಾಗಿರುವ ಆತಂಕದ ನಡುವೆ, ಈ ಹೆಲ್ತ್ ಬುಲೆಟಿನ್ ಸಾಂತ್ವನಕರ ಸಂದೇಶವನ್ನು ತಲುಪಿಸಿದೆ. ಭಕ್ತರು ಮತ್ತು ಅಭಿಮಾನಿಗಳು ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ.