ಆನ್‌ಲೈನ್ ಮತ್ತು ಆಫ್‌ಲೈನ್ ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಕೆ.ಸಿ. ವೀರೇಂದ್ರ ಅಲಿಯಾಸ್ ಪಪ್ಪಿ ಅವರ ಇಡಿ ಕಸ್ಟಡಿ ಅವಧಿಯನ್ನು 6 ದಿನಗಳ ಕಾಲ ವಿಸ್ತರಿಸಲಾಗಿದೆ. 

 ಬೆಂಗಳೂರು (ಆ.29): ಆನ್‌ಲೈನ್‌ ಮತ್ತು ಆಫ್‌ಲೈನ್‌ ಅಕ್ರಮ ಬೆಟ್ಟಿಂಗ್‌ ಪ್ರಕರಣದಲ್ಲಿ ಬಂಧಿತ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅಲಿಯಾಸ್‌ ಪಪ್ಪಿ ಅವರ ಜಾರಿ ನಿರ್ದೇಶನಾಲಯದ (ಇ.ಡಿ.) ಕಸ್ಟಡಿ ಅವಧಿಯನ್ನು ಆರು ದಿನಗಳ ಕಾಲ ವಿಸ್ತರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ವೀರೇಂದ್ರ ಅವರ ಐದು ದಿನಗಳ ಕಸ್ಟಡಿ ಗುರುವಾರ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯದ ನ್ಯಾ. ಸಂತೋಷ್‌ ಗಜಾನನ ಭಟ್‌ ಅವರ ಮುಂದೆ ಹಾಜರುಪಡಿಸಲಾಯಿತು. ಇ.ಡಿ.ಯನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಐ.ಎಸ್‌. ಪ್ರಮೋದ್‌ ಚಂದ್ರ ಅವರು ‘ವಡೋದರಾ, ಹೈದ್ರಾಬಾದ್‌ ಮತ್ತು ಇತರೆ ಡೆ ದಾಖಲಾಗಿರುವ ಎಫ್‌ಐಆರ್‌ಗಳ ಸಂಬಂಧ ತನಿಖೆ ನಡೆಯುತ್ತಿದ್ದು, ಪ್ರಕರಣದಲ್ಲಿ ಬೇರೆ ಆರೋಪಿಗಳು ಪಪ್ಪಿ ಅವರ ಹೆಸರು ಬಾಯ್ಬಿಟ್ಟಿದ್ದಾರೆ. ಹೀಗಾಗಿ, ವಿಚಾರಣೆಗಾಗಿ ಮತ್ತೆ 14 ದಿನ ಅವರನ್ನು ಕಸ್ಟಡಿಗೆ ನೀಡಬೇಕು’ ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಪಪ್ಪಿ ಪರ ಹಿರಿಯ ವಕೀಲ ಎಚ್‌.ಎಸ್‌.ಚಂದ್ರಮೌಳಿ ಮತ್ತು ಕಿರಣ್‌ ಜವಳಿ ಅವರು ‘ವೀರೇಂದ್ರ ಅವರಿಗೆ ಕ್ರಿಮಿನಲ್‌ ಹಿನ್ನೆಲೆ ಇಲ್ಲ. ಯಾವುದೇ ಕೇಸ್‌ ಬಾಕಿ ಇಲ್ಲ. ತನಿಖೆಗೆ ಅವರ ಅಗತ್ಯವಿದ್ದರೆ ಬೆಳಗ್ಗೆಯಿಂದ ಸಂಜೆವರೆಗೆ ಅವರನ್ನು ವಿಚಾರಣೆಗೆ ಒಳಪಡಿಸಿ ಬಿಡುಗಡೆ ಮಾಡಬಹುದು. ಇದಕ್ಕಾಗಿ ಕಸ್ಟಡಿಗೆ ನೀಡುವ ಅಗತ್ಯವಿಲ್ಲ’ ಎಂದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್‌ ಮತ್ತೆ 6 ದಿನ ಇ.ಡಿ. ಕಸ್ಟಡಿಗೆ ನೀಡಿತು.

ಅಗತ್ಯ ಮೂಲಸೌಕರ್ಯ ಒದಗಿಸಿ ಪಪ್ಪಿ ಮನವಿಗೆ ಕೋರ್ಟ್‌ ಸೂಚನೆ

ಬೆಳಗಿನ ಜಾವ 3ಗಂಟೆ ವರೆಗೆ ವಿಚಾರಣೆ ಮಾಡಿದ್ದಾರೆ. ನಾನು ಸಸ್ಯಾಹಾರಿ. ಊಟಕ್ಕೆ ಮೊಸರು ನೀಡುತ್ತಿಲ್ಲ. ಸಮಸ್ಯೆ ಮಾಡುತ್ತಿದ್ದಾರೆ ಎಂದು ನ್ಯಾಯಾಲಯದ ವಿಚಾರಣೆ ವೇಳೆ ವೀರೇಂದ್ರ ಅಲವತ್ತುಕೊಂಡಿದ್ದಾರೆ.

ಈ ಸಂಬಂಧ ವೀರೇಂದ್ರ ಅವರನ್ನು 24 ಗಂಟೆಗಳಿಗೊಮ್ಮೆ ವೈದ್ಯಕೀಯ ತಪಾಸಣೆ ಮಾಡಿಸಬೇಕು. ಶುದ್ಧ ಆಹಾರ, ನೀರು, ಔಷಧ ಸೇರಿ ಅಗತ್ಯ ಮೂಲಸೌಕರ್ಯ ನೀಡಬೇಕು. ಆರೋಪಿಗೆ ಸ್ವಲ್ಪ ವಿಶ್ರಾಂತಿ ಕೊಟ್ಟು ವಿಚಾರಣೆ ಮಾಡಬೇಕು. ವಕೀಲರ ಭೇಟಿಗೆ ಅವಕಾಶ ನೀಡಬೇಕು, ನಿಗದಿತ ವೇಳೆಯ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ಇ.ಡಿ. ಅಧಿಕಾರಿಗಳಿಗೆ ಸೂಚಿಸಿದೆ.