ಅಕ್ರಮ ಬೆಟ್ಟಿಂಗ್ ಕಂಪನಿ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಶಾಸಕ ಕೆ.ಸಿ. ವೀರೇಂದ್ರ 'ಪಪ್ಪಿ' ಬಂಧನಕ್ಕೊಳಗಾಗಿದ್ದಾರೆ. ಈ ನಡುವೆ ದೋಷಮುಕ್ತರಾಗಲೆಂದು ಬೆಂಬಲಿನೋರ್ವ ಅಯ್ಯಪ್ಪಸ್ವಾಮಿಗೆ ಕರ್ಪೂರ ಬೆಳಗಿ ಸಂಕಲ್ಪ ಮಾಡಿದ್ದಾನೆ.

ಚಿತ್ರದುರ್ಗ (ಆ.28): ಅಕ್ರಮ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ 'ಪಪ್ಪಿ' ಅವರು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದಾರೆ. 

ಕಳೆದವಾರ ಪಪ್ಪಿ ಅವರ ವಿರುದ್ಧ ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ, ಜೋಧ್‌ಪುರ, ಮುಂಬೈ ಮತ್ತು ಗೋವಾದ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ED ಶೋಧ ನಡೆಸಿತು. ಗೋವಾದ 'ಪಪ್ಪೀಸ್ ಕ್ಯಾಸಿನೊ ಗೋಲ್ಡ್', 'ಓಷನ್ ರಿವರ್ಸ್ ಕ್ಯಾಸಿನೊ', 'ಪಪ್ಪೀಸ್ ಕ್ಯಾಸಿನೊ ಪ್ರೈಡ್', 'ಓಷನ್ 7 ಕ್ಯಾಸಿನೊ' ಮತ್ತು 'ಬಿಗ್ ಡ್ಯಾಡಿ ಕ್ಯಾಸಿನೊ' ಸೇರಿದಂತೆ ಐದು ಕ್ಯಾಸಿನೊಗಳ ಮೇಲೆ ದಾಳಿ ಬಳಿಕ ಪ್ರಕರಣದ ಹೆಚ್ಚಿನ ತನಿಖೆಗಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಭಾನುವಾರ (ಆಗಸ್ಟ್ 24) ಬೆಂಗಳೂರಿಗೆ ಕರೆತಂದಿದ್ದಾರೆ.

ಈ ನಡುವೆ, ಚಿತ್ರದುರ್ಗದಲ್ಲಿ ಶಾಸಕನ ಬೆಂಬಲಿಗ ಬಸವರಾಜ ಕೊಕೊನಟ್, ಪಪ್ಪಿ ದೋಷಮುಕ್ತರಾಗಿ ಬರಲೆಂದು ಚಿತ್ರದುರ್ಗದ ಅಯ್ಯಪ್ಪಸ್ವಾಮಿ ದೇಗುಲದ ಬಳಿ ಕರ್ಪೂರ ಬೆಳಗಿ ಸಂಕಲ್ಪ ಮಾಡಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಚಿತ್ರದುರ್ಗದಿಂದ ಶಬರಿಮಲೆಗೆ ಪಾದಯಾತ್ರೆ ಕೈಗೊಳ್ಳುವ ಸಂಕಲ್ಪ ಮಾಡಿರುವ ಬಸವರಾಜ ಕೊಕೊನಟ್, ಆ ಬಗ್ಗೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

5 ದಿನಗಳ‌ ಇಡಿ ಕಸ್ಟಡಿ ಇಂದಿಗೆ ಅಂತ್ಯ:

ಅಕ್ರಮ ಹಣ ವರ್ಗಾವಣೆ ಮಾಹಿತಿ ಆಧಾರ ಹಾಗೂ ಬೆಟ್ಟಿಂಗ್ ದಂಧೆ ಆರೋಪದ ಮೇಲೆ ಬಂಧಿತರಾಗಿದ್ದ ವೀರೇಂದ್ರ ಪಪ್ಪಿ ಅವರನ್ನು ನ್ಯಾಯಾಲಯ ಐದು ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದ್ದು ಇಂದಿಗೆ ಅಂತ್ಯವಾಗಿದೆ. ಇಂದು ಕಸ್ಟಡಿ ಅಂತ್ಯಗೊಂಡಿರುವ ಹಿನ್ನಲೆ ಇಡಿ ಅಧಿಕಾರಿಗಳು ಇಂದು ಮಧ್ಯಾಹ್ನ ಪಪ್ಪಿ ಅವರನ್ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.