ಬಿಜೆಪಿ ನಾಯಕರು ಧರ್ಮಸ್ಥಳ ಯಾತ್ರೆ ಬದಲು ಕರ್ನಾಟಕದ ಪಾಲಿನ ಹಣ ಕೊಡಿಸಲು ದೆಹಲಿಯಲ್ಲಿ ಹೋರಾಟ ಮಾಡಲಿ ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಸೆ.1): ಬಿಜೆಪಿಯವರಿಗೆ ರಾಜಕೀಯ ಇಚ್ಛಾಸಕ್ತಿ ಇದ್ದರೆ ಧರ್ಮಸ್ಥಳ ಯಾತ್ರೆ ಬದಲು ಕರ್ನಾಟಕದ ಪಾಲಿನ ಹಣ ಕೊಡಿಸಲು ದೆಹಲಿಯಲ್ಲಿ ಹೋರಾಟ ಮಾಡಲಿ. ಭದ್ರಾ ಮೇಲ್ದಂಡೆ, ಮೇಕೆದಾಟು, ಮಹದಾಯಿಗೆ ಅನುಮತಿ ಕೊಡಿಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ಜನರ ಹಿತಾಸಕ್ತಿ ಬೇಕಿದ್ದರೆ, ರಾಜಕೀಯ ಇಚ್ಛಾಸಕ್ತಿ ಇದ್ದರೆ ಅಭಿವೃದ್ಧಿ ಬಗ್ಗೆ ಹೋರಾಟ ಮಾಡಬೇಕು ಎಂದು ಆಗ್ರಹ ಮಾಡಿದರು.
ಬಿಜೆಪಿಯವರು ಧರ್ಮಸ್ಥಳಕ್ಕೆ ಹೋಗಿ ತಮ್ಮ ವೈಯಕ್ತಿಕ ಲಾಭಕ್ಕೆ ಪ್ರಾರ್ಥನೆ ಮಾಡಿಕೊಂಡು ಬರುತ್ತಾರೆಯೇ ಹೊರತು ಬೇರೇನೂ ಇಲ್ಲ. ಇವರ ಹೋರಾಟ ಧರ್ಮಸ್ಥಳದಲ್ಲಿ ಅಲ್ಲ, ಎಲ್ಲಾ ಸಂಸದರು, ಶಾಸಕರನ್ನು ಕರೆದುಕೊಂಡು ಹೋಗಿ ದೆಹಲಿಯಲ್ಲಿ ಹೋರಾಟ ಮಾಡಿ ರಾಜ್ಯಕ್ಕೆ ಅನುದಾನ ತರಲಿ. ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರದಿಂದ ಹಣ ಕೊಡಿಸಲಿ. ಮೇಕೆದಾಟು, ಭದ್ರಾ ಮೇಲ್ದಂಡೆ, ಮಹದಾಯಿಗೆ ಅನುಮತಿ ಕೊಡಿಸಲಿ ಎಂದು ಹೇಳಿದರು.
ಸಗಣಿ ಮೇಲೆ ಕಲ್ಲು ಹಾಕಲ್ಲ:
ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲದಿರುವ ಕಾರಣಕ್ಕೆ ಬಿಜೆಪಿ ಕರೆದುಕೊಳ್ಳುತ್ತಿಲ್ಲ ಎನ್ನುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ‘ಕಸ, ಸಗಣಿ ಮೇಲೆ ಕಲ್ಲು ಹಾಕುವುದಕ್ಕೆ ನಾನು ಇಷ್ಟಪಡುವುದಿಲ್ಲ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
