ಜಮಖಂಡಿಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ಗಣೇಶೋತ್ಸವ ಆಚರಿಸಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ಜಂಟಿಯಾಗಿ ಗಣೇಶನನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ನೆರವೇರಿಸಿದ್ದಾರೆ.
ಬಾಗಲಕೋಟೆ(ಆ.3): ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಗಣೇಶನನ್ನ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಹಿಂದೂ ಮುಸ್ಲಿಂ ಸಮಾಜದ ಬಾಂಧವರು ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
ನಗರದ ತಾಲೂಕು ಕ್ರೀಡಾಂಗಣದ ಮುಂಭಾಗ ಶ್ರೀ ಮಹಾಗಣಪತಿ ಉತ್ಸವ ಸಮಿತಿ ವತಿಯಿಂದ ಬೃಹತ್ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ವಿಶೇಷ ಅಂದರೆ ಈ ಶ್ರೀ ಮಹಾಗಣಪತಿ ಉತ್ಸವ ಸಮಿತಿಯಲ್ಲಿ ಮುಸ್ಲಿಂ ಬಾಂಧವರು ಕೂಡ ಸದಸ್ಯರಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಿಂದೂ ಮುಸ್ಲಿಂ ಬೇಧವಿಲ್ಲದೇ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಯಾವ ಧರ್ಮವು ಕೆಡುಕನ್ನು ಬೋಧಿಸುವುದಿಲ್ಲ: ಶ್ರೀಜಗದ್ಗುರು ಬಸವಲಿಂಗ ಮಹಾಸ್ವಾಮಿ
ನಂತರ ಜಂಟಿಯಾಗಿಯೇ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಿದ್ದಾರೆ. ಜಮಖಂಡಿಯ ಮಾಜಿ ಶಾಸಕ ಆನಂದ ನ್ಯಾಮಗೌಡ ಹಾಗೂ ಸ್ಥಳೀಯ ಪ್ರಮುಖರು ಕೂಡ ಗಣೇಶನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದ್ರು. ಒಟ್ಟಾರೆ ಜಮಖಂಡಿ ನಗರದಲ್ಲಿ ಹಿಂದೂ ಮುಸ್ಲಿಂ ಸಮಾಜದ ಬಾಂಧವರು ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
