ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದೆ. ರಾಜ್ಯದ ಬೇರೆಡೆ ಇಲ್ಲದ ಸಮಸ್ಯೆ ಚಿತ್ತಾಪುರದಲ್ಲಿ ಏಕೆ ಎಂದು ನ್ಯಾಯಪೀಠ ಪ್ರಶ್ನಿಸಿದ್ದು, ಕಾನೂನು ಸುವ್ಯವಸ್ಥೆ ಕಾರಣ ನೀಡಿ ಸರ್ಕಾರ ಕಾಲಾವಕಾಶ ಕೋರಿದೆ.
ಕಲಬುರಗಿ (ಅ.25): ಸಂಘ ಶತಾಬ್ದಿ ಸಂಭ್ರಮಾಚರಣೆ ನಿಮಿತ್ತ ರಾಜ್ಯಾದ್ಯಂತ ಇದುವರೆಗೂ ಒಂದು ತಿಂಗಳಲ್ಲಿ 250ಕ್ಕೂ ಹೆಚ್ಚು ಕಡೆ ಆರೆಸ್ಸೆಸ್ ಪಥಸಂಚಲನ ನಡೆದಿವೆ. ಎಲ್ಲಿಯೂ ಎದುರಾಗದ ಸಮಸ್ಯೆ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲೇ ಯಾಕೆ?
ಹೀಗೊಂದು ಪ್ರಶ್ನೆ ಇಂದಿಲ್ಲಿ ರಿಂಗ್ ರಸ್ತೆಯಲ್ಲಿರುವ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಪ್ರತಿಧ್ವನಿಸಿದ್ದು ವಿಶೇಷವಾಗಿತ್ತು.
ಚಿತ್ತಾಪುರದಲ್ಲಿ ಅ.19ರಂದು ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಅನುಮತಿ ನಿರಾಕರಿಸಿರುವ ತಹಸೀಲ್ದಾರ್ ಕ್ರಮಕ್ಕೆ ಆಕ್ಷೇಪಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ಹೈಕೋರ್ಟ್ ಪೀಠದ ಕೋರ್ಟ್ ಹಾಲ್ 4ರಲ್ಲಿ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ ಅವರು ವಿಚಾರಣೆ ನಡೆಸುತ್ತಿದ್ದಾಗ, ಮೇಲಿನ ಮಾತು ಕೇಳಿಬಂತು.
250 ಕಡೆ ಪಥ ಸಂಚಲ ನಡೆದರೂ ಎಲ್ಲೂ ಸಮಸ್ಯೆಯಾಗಿಲ್ಲ
ಸರ್ಕಾರದ ಪರವಾಗಿ ಅಡ್ವೋಕೆಟ್ ಜನರಲ್ ಶಶಿಕಿರಣ ಶೆಟ್ಟಿ ವಾದ ಮಂಡಿಸಿ, ಶಾಂತಿ ಸುವ್ಯವಸ್ಥೆ ಹಿನ್ನೆಲೆಯಲ್ಲಿ ಇನ್ನಷ್ಟು ಸಮಯ ನೀಡಬೇಕು ಎಂದು ಕೋರಿದಾಗ, ವಿಡಿಯೋ ಕಾನ್‌ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಹಾಜರಾಗಿದ್ದ ಆರೆಸ್ಸೆಸ್ ಪರ ವಕೀಲ ಅರುಣ ಶ್ಯಾಮ್ ಅವರು ಅದನ್ನು ಆಕ್ಷೇಪಿಸಿದರು. ಸಂಘದಿಂದ ಅ.17ಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾಗಿತ್ತು. ತಕ್ಷಣ ಅನುಮತಿ ಬೇಕೆಂದರೆ ಹೇಗೆ? ರಾಜ್ಯದೆಲ್ಲೆಡೆ ಅಂದಾಜು 250 ಕಡೆ ಪಥ ಸಂಚಲ ಈ ಅವಧಿಯಲ್ಲಿ ನಡೆದರೂ ಎಲ್ಲೂ ಸಮಸ್ಯೆಯಾಗಿಲ್ಲ, ಚಿತ್ತಾಪುರದಲ್ಲಿ ಪರಿಸ್ಥಿತಿ ಭಿನ್ನವಾಗಿರೋದು ಗಮನಕ್ಕೆ ಬಂದಿದೆ. ಅದನ್ನು ಅವಲೋಕಿಸಿ ಪರಿಹಾರ ಹುಡುವ ಪ್ರಯತ್ನಕ್ಕೆ 2 ವಾರವಾದರೂ ಸಮಯಾವಕಾಶ ಬೇಕು ಎಂದರು.
ಕಾಲಹರಣ ಮಾಡೋದು ಬೇಡ. ವಿಳಂಬ ಪರಿಹಾರವಲ್ಲ
ಸಂಘದ ಪರ ವಕೀಲ ಅರುಣ ಶ್ಯಾಮ್, ಕಾಲಹರಣ ಮಾಡೋದು ಬೇಡ. ವಿಳಂಬ ಪರಿಹಾರವಲ್ಲ. ನ.2ರ ಪಥ ಸಂಚಲನಕ್ಕೆ ತಯಾರಿಯಾಗಿದೆ. ಸ್ಥಳೀಯ ಭದ್ರತೆ ಒದಗಿಸಲಾಗದು ಎಂದಾದರೆ ಕೇಂದ್ರೀಯ ಭದ್ರತಾ ಪಡೆ ನಿಯೋಜಿಸಿ. ನ.2ಕ್ಕೆ ನಮ್ಮ ಅರ್ಜಿದಾರ ಸಂಘಟನೆ ಆರೆಸ್ಸೆಸ್‌ಗೆ ಅನುಮತಿ ಕೊಡಿ, ನಂತರ ಉಳಿದವರು ಇಡೀ ವರ್ಷ ಬೇಕಾದರೆ ಚಿತ್ತಾಪುರದಲ್ಲಿ ಪ್ರತಿಭಟನೆ, ಪಥ ಸಂಚಲನ ಮಾಡುತ್ತಿರಲಿ. ಬಂದೋಬಸ್ತ್ ಜೊತೆಗೆ ನ.2ರ ಪಥ ಸಂಚಲನಕ್ಕೆ ಅನುಮತಿಸಿ ಎಂದು ನ್ಯಾಯಪೀಠಕ್ಕೆ ಕೋರಿದರು.
ಈಗಾಗಲೇ 8 ಸಂಘಟನೆಗಳು ನ.2ರಂದೇ ಚಿತ್ತಾಪುರದಲ್ಲಿ ಪಥ ಸಂಚಲನ, ಪ್ರತಿಭಟನೆಗೆ ಕೋರಿವೆ. ಅ.19ರಿಂದ ಚಿತ್ತಾಪುರ ಹಾಗೂ ಸತ್ತುಮುತ್ತ ಪರಿಸ್ಥಿತಿ ಸರಿಯಾಗಿಲ್ಲ ಎಂದು ಜಿಲ್ಲಾ ಎಸ್ಪಿ ವರದಿಯಾಗಿದೆ. ಹೀಗಾಗಿ ಕಾನೂನು- ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಕಾಲಾವಕಾಶ ಕೊಡಿ ಎಂದು ಕಿರಣ ಶೆಟ್ಟಿ ವಾದ ಮಂಡಿಸಿದರು.
ಆರೆಸ್ಸೆಸ್ ಪಥ ಸಂಚಲನ ಅವರ ಮೂಲಭೂತ ಹಕ್ಕು. ಸಂವಿಧಾ ನೀಡಿರುವ ಹಕ್ಕನ್ನೇ ಮೊಟಕು ಮಾಡಿದರೆ ಹೇಗೆಂದು ಅರುಣ ಶ್ಯಾಮ್ ಪ್ರಶ್ನಿಸಿ, ಶಾಂತಿಯಿಂದ ಪಥ ಸಂಚಲನ ಮಾಡುವುದಕ್ಕೆ ಅನುಮತಿ ನೀಡುವಂತೆ ನ್ಯಾಯಾಧೀಶರ ಮುಂದೆ ವಾದ ಮಂಡಿಸಿದರು. ಬಳಿಕ ವಿಚಾರಣೆ 30ಕ್ಕೆ ಮುಂದೂಡಲಾಯಿತು.
