ಮೈಸೂರು ದಸರಾ ಮಹೋತ್ಸವಕ್ಕೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಆಹ್ವಾನಿಸಿದ್ದಾರೆ. ಸರ್ಕಾರದ ಗೌರವಧನದ ಚೆಕ್ ಅನ್ನು ನೀಡಲಾಗಿದೆ. ಆಸನಗಳ ಸಂಖ್ಯೆ ಕಡಿಮೆ ಮಾಡುವಂತೆ ಪ್ರಮೋದಾದೇವಿ ಒಡೆಯರ್ ಸಲಹೆ ನೀಡಿದ್ದಾರೆ.
ಮೈಸೂರು (ಸೆ.15):ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ರಾಜ್ಯ ಸರ್ಕಾರದ ಪರವಾಗಿ ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರಿಗೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಭಾನುವಾರ ಅಧಿಕೃತವಾಗಿ ಆಹ್ವಾನ ನೀಡಿದರು. ಸರ್ಕಾರದಿಂದ ಪ್ರತಿ ವರ್ಷ ನೀಡಲಾಗುವ ಗೌರವಧನದ ಚೆಕ್ ನೀಡಿದರು.
ಮೈಸೂರು ಅರಮನೆಯಲ್ಲಿರುವ ನಿವಾಸದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಯಾದ ಸಚಿವರು, ಸಾಂಪ್ರದಾಯಿಕವಾಗಿ ಫಲ ತಾಂಬೂಲ ಹಾಗೂ ಆಮಂತ್ರಣ ಪತ್ರಿಕೆ ನೀಡಿ ದಸರಾ ಮಹೋತ್ಸವಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.
ದಸರಾ ಮಹೋತ್ಸವಕ್ಕೆ ರಾಜವಂಶಸ್ಥರನ್ನು ಆಹ್ವಾನಿಸಿದ್ದೇವೆ: ಮಹದೇವಪ್ಪ
ಭೇಟಿ ಬಳಿಕ ಮಾತನಾಡಿದ ಸಚಿವರು, ದಸರಾ ಮಹೋತ್ಸವಕ್ಕೆ ಸಂಪ್ರದಾಯದಂತೆ ರಾಜವಂಶಸ್ಥರನ್ನು ಆಹ್ವಾನಿಸಿದ್ದೇವೆ. ಪ್ರಮೋದಾದೇವಿ ಒಡೆಯರ್ ಅವರು ಎಂದಿನಂತೆ ಉತ್ಸಾಹ, ಸಂತೋಷದಿಂದ ದಸರಾಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ.
ಅರಮನೆ ಆವರಣದಲ್ಲಿ ಕಳೆದ ವರ್ಷ ಆಸನಗಳ ಸಂಖ್ಯೆಯನ್ನು ಹೆಚ್ಚು ಮಾಡಿದ್ದರಿಂದ ಮಳೆ ಬಂದಾಗ ಕಿರಿಕಿರಿ ಉಂಟಾಗಿತ್ತು. ಹೀಗಾಗಿ, ಆಸನಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ರಾಜವಂಶಸ್ಥರು ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ. ಅದನ್ನು ನಾವು ಸ್ವೀಕರಿಸಿದ್ದೇವೆ ಎಂದು ಹೇಳಿದರು.
