Gulbarga University exam scam :ಗುಲ್ಬರ್ಗಾ ವಿವಿ ಬಿಎಸ್ಸಿ ವಿದ್ಯಾರ್ಥಿನಿ ಸೈದಾ ಸಾನಿಯಾ ಅವರ ಉತ್ತರ ಪತ್ರಿಕೆ ಬೇರೊಬ್ಬರ ಪತ್ರಿಕೆಯೊಂದಿಗೆ ಅದಲುಬದಲಾಗಿ ಶೂನ್ಯ ಅಂಕ ಬಂದಿದ್ದರಿಂದ ಅನುಮಾನಗೊಂಡು ಪರಿಶೀಲಿಸಿದಾಗ, ಹಣಕ್ಕಾಗಿ ವಿವಿ ಸಿಬ್ಬಂದಿಯೇ ಈ ಕೃತ್ಯ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ.
ಕಲಬುರಗಿ (ಅ.10): ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬೀದರ್ ಮೂಲದ ಬಿಎಸ್ಸಿ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಸೈದಾ ಸಾನಿಯಾ ಅವರ ಉತ್ತರ ಪತ್ರಿಕೆಯನ್ನು ಅದಲುಬದಲು ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಗುಲ್ಬರ್ಗಾ ವಿವಿ ಹಣಕ್ಕಾಗಿ ಉತ್ತರ ಪತ್ರಿಕೆ ಅದಲು-ಬದಲು?
ಸೈದಾ ಸಾನಿಯಾ, ತನ್ನ 5ನೇ ಸೆಮಿಸ್ಟರ್‌ನ 'ಮ್ಯಾಥಮೆಟಿಕ್ಸ್ ವೆಕ್ಟರ್ ಕ್ಯಾಲ್ಕುಲಸ್ ಮತ್ತು ಎನಲಿಟಿಕಲ್ ಜಿಯೋಮೆಟ್ರಿ' ವಿಷಯದಲ್ಲಿ ಶೂನ್ಯ ಅಂಕ ಪಡೆದಿರುವುದನ್ನು ಕಂಡು ಆಘಾತಕ್ಕೊಳಗಾದರು. ತಕ್ಷಣವೇ ಉತ್ತರ ಪತ್ರಿಕೆಯ ಫೋಟೋಕಾಪಿಗಾಗಿ ಅರ್ಜಿ ಸಲ್ಲಿಸಿದ ಸೈದಾ, ವಿಶ್ವವಿದ್ಯಾಲಯ ನೀಡಿದ ಫೋಟೋಕಾಪಿಯನ್ನು ನೋಡಿ ಬೆಚ್ಚಿಬಿದ್ದು ಮೂರ್ಛೆ ಹೋಗುವುದೊಂದೇ ಬಾಕಿ ಇತ್ತು.
'ದಯವಿಟ್ಟು ನನ್ನ ಪಾಸ್ ಮಾಡಿ..'
ಆ ಉತ್ತರ ಪತ್ರಿಕೆ ಸೈದಾ ಸಾನಿಯಾ ಅವರದ್ದಲ್ಲ. ಉತ್ತರ ಪತ್ರಿಕೆಯಲ್ಲಿ ಬರೆದ ಸಾಲುಗಳಿಂದಲೇ ಬೆಚ್ಚಿಬಿದ್ದಿರೋ ವಿದ್ಯಾರ್ಥಿನಿ. ಆ ಪತ್ರಿಕೆಯಲ್ಲಿ 'ನನ್ನನ್ನು ದಯವಿಟ್ಟು ಪಾಸ್ ಮಾಡಿ' ಎಂದು ಬರೆಯಲಾಗಿತ್ತು, ಇದನ್ನು ನೋಡಿ ವಿದ್ಯಾರ್ಥಿನಿ ಗಾಬರಿಗೊಳಗಾದರು. 'ನಾನು ಈ ರೀತಿ ಬರೆದಿಲ್ಲ, ನನ್ನ ಹಿಂದಿನ ಫಲಿತಾಂಶಗಳನ್ನು ಪರಿಶೀಲಿಸಿ' ಎಂದು ಸೈದಾ ಪಟ್ಟುಹಿಡಿದರೂ, ವಿಶ್ವವಿದ್ಯಾಲಯವು ಆ ಉತ್ತರ ಪತ್ರಿಕೆ ಅವರದ್ದೇ ಎಂದು ವಾದಿಸಿತು. ಆದರೆ, ಬಾರ್‌ಕೋಡ್ ಸ್ಕ್ಯಾನ್ ಮಾಡಿದಾಗ ಆ ಉತ್ತರ ಪತ್ರಿಕೆ ಬೇರೊಬ್ಬ ಯುವಕನದ್ದು ಎಂಬ ಸತ್ಯ ಬಯಲಿಗೆ ಬಂದಿತು.
ಗುಲ್ಬರ್ಗಾ ವಿವಿ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ:
ಹಣಕ್ಕಾಗಿ ವಿಶ್ವವಿದ್ಯಾಲಯದ ಸಿಬ್ಬಂದಿಯೇ ಉತ್ತರ ಪತ್ರಿಕೆಗಳನ್ನು ಅದಲುಬದಲು ಮಾಡಿರುವ ಆರೋಪ ಕೇಳಿಬಂದಿದೆ. ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, 'ನಮ್ಮ ಸಿಬ್ಬಂದಿಯಿಂದ ತಪ್ಪಾಗಿದೆ, ಇದನ್ನು ಸರಿಪಡಿಸುತ್ತೇವೆ' ಎಂದು ಸೈದಾ ಸಾನಿಯಾಗೆ ಭರವಸೆ ನೀಡಿದ್ದಾರೆ. ಆದರೆ, ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಇಂತಹ ಅಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವೆಸಗುತ್ತಿದೆ. ಈ ಘಟನೆಯಿಂದ ಕೋಪಗೊಂಡ ವಿದ್ಯಾರ್ಥಿಗಳು ಮತ್ತು ಪೋಷಕರು, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.
