ಸಿಎಂ ಸಿದ್ದರಾಮಯ್ಯನವರಿಗೆ ನಿಸಾರ್ ಅಹ್ಮದ್ ಅವರ ಸಾಹಿತ್ಯದ ಕನಿಷ್ಠ ಜ್ಞಾನವಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು (ಸೆ.9): ಸಿಎಂ ಸಿದ್ದರಾಮಯ್ಯನವರಿಗೆ ನಿಸಾರ್ ಅಹ್ಮದ್ ಅವರ ಸಾಹಿತ್ಯದ ಕನಿಷ್ಠ ಜ್ಞಾನವಿದ್ದಂತಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.

ಬಂಧನಕ್ಕೆ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ ಸಿಂಹ ಅವರು, ಸಿಎಂ ಸಿದ್ದರಾಮಯ್ಯ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ ತಕ್ಷಣವೇ ತಕರಾರು ಮಾಡಿದ್ದೇವೆ. ಬಾನು ಮುಷ್ತಾಕ್ ಅವರು ಕನ್ನಡವನ್ನು ಭುವನೇಶ್ವರಿಯಾಗಿ ಗೌರವಿಸದೆ, ಅರಿಶಿಣ-ಕುಂಕುಮದ ಬಗ್ಗೆ ತಕರಾರು ಮಾಡಿದ್ದಾರೆ. ಜನಸಾಹಿತ್ಯ ಸಮ್ಮೇಳನದಲ್ಲಿ ಮಸೀದಿಯ ಮುಲ್ಲಾ ರೀತಿ ಮಾತನಾಡಿದ್ದಾರೆ. ಅವುಗಳನ್ನ ಸಹಿಸಿಕೊಳ್ಳುವ ಸಹೃದಯತೆ ಆಕೆಯಲ್ಲಿ ಇಲ್ಲ. ಇಂತಹ ವ್ಯಕ್ತಿಯನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.

ನಿಸಾರ್ ಬಗ್ಗೆ ಸಿದ್ದರಾಮಯ್ಯಗೆ ಕನಿಷ್ಟ ಜ್ಞಾನ ಇಲ್ಲ:

ನೀವು ಮರುಚಿಂತನೆಯನ್ನ ಮಾಡಿ ಎಂದೆ. ಆದ್ರೂ ಸಿದ್ದರಾಮಯ್ಯ ಒಂದು ದಿನವೂ ಸಮರ್ಥನೆ ರೀತಿ ಸರಿಯಾದ ಉತ್ತರ ಕೊಟ್ಟಿಲ್ಲ. ನಿಸಾರ್ ಅಹ್ಮದ್ ಬಗ್ಗೆ ಮಾತಾಡ್ತಾರೆ. ಆದ್ರೆ ನಿಸಾರ್‌ರ ಸಾಹಿತ್ಯದ ಕನಿಷ್ಠ ಜ್ಞಾನ ಸಿದ್ದರಾಮಯ್ಯ ಅವ್ರಿಗೆ ಇದ್ದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ನಿಸಾರ್ ಅಹ್ಮದ್ ಅವ್ರಿಗೂ, ಮಸೀದಿ ಮುಲ್ಲಾ ರೀತಿ ಮಾತನಾಡಿರೋ ಇವ್ರಿಗೂ ವ್ಯತ್ಯಾಸ ಇಲ್ವ? ಬಾನು ಮುಷ್ತಾಕ್ ಮಾಡಿರೋ ಭಾಷಣ ಹೊರಹಾಕಿದ್ರೂ ಕನ್ನಡಿಗರಲ್ಲಿ ಕ್ಷಮೆ ಕೇಳಲಿಲ್ಲ. ಇವರ ಭಾಷಣದಿಂದ ಕನ್ನಡಿಗರ ಮನಸ್ಸು ನೋಯಿತು, ಆದರೂ ಕ್ಷಮೆ ಕೇಳಲಿಲ್ಲ ಇಂಥವರು ದಸರಾ ಉದ್ಘಾಟನೆ ಮಾಡಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡರಾಮಯ್ಯ ಇದೇನಾ ನಿಮ್ಮ ಕನ್ನಡಾಭಿಮಾನ?

ಕನ್ನಡಿಗರ ಬಗ್ಗೆ, ಭುವನೇಶ್ವರಿ ಬಗ್ಗೆ ಅರಿಶಿನ ಕುಂಕುಮದ ಬಗ್ಗೆ ಮಾತನಾಡಿದ್ದಕ್ಕೆ ಕರೆದು ಬುದ್ದಿ ಹೇಳಿ ಕ್ಷಮೆ ಕೇಳಿಸಿದ್ರೆ ನಾವು ಹೋರಾಟ ಮಾಡ್ತಾ ಇದ್ವಾ? ಮಾತೆತ್ತಿದರೆ ಕನ್ನಡದ ಬಗ್ಗೆ ಮಾತನಾಡುವವರು ನೀವು, ಆದ್ರೆ ತಾಯಿ ಭುವನೇಶ್ವರಿ ಕನ್ನಡ ಬಾವುಟದ ಬಗ್ಗೆ ಬಾನು ಮುಸ್ತಾಕ್ ಆಡಿದ ಮಾತುಗಳ ಬಗ್ಗೆ ಯಾಕೆ ಸೈಲೆಂಟ್, ಆಕೆ ಮುಸ್ಲಿಂ ಎಂಬ ಕಾರಣಕ್ಕೆ ಮಾತು ಬರುತ್ತಿಲ್ಲವೇ? ಬುದ್ಧಿ ಹೇಳಲು ಧೈರ್ಯ ಸಾಲುತ್ತಿಲ್ಲವೇ? ಕನ್ನಡಿಗರಿಗೆ ಕನಿಷ್ಟ ಕ್ಷಮೆಯೂ ಕೇಳಿಲ್ಲ ಅವಮ್ಮ. ಸಿದ್ದರಾಮಯ್ಯನವರೇ ನಿಮಗೆ ಇಷ್ಟವಾದರೆ ನಿಮಗೆ ಮಗನ ಮದುವೆಗೆ ತಾಂಬೂಲ ಕೊಡಿಸಿ ಅದನ್ನ ಬಿಟ್ಟು ತಾಯಿ ಭುವನೇಶ್ವರಿಗೆ ಬಗ್ಗೆ ಅಪದ್ಧ ಭಾವನೆ ಇಟ್ಕೊಂಡಿರುವ ಅವ್ರನ್ನ ಯಾಕೆ ದಸರಾ ಉದ್ಘಾಟನೆ ಕರೆಯುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ತಾಲಿಬಾನ್ ಸರ್ಕಾರ?

ಪ್ರಜಾತಾಂತ್ರಿಕವಾಗಿ ಪಾದಯಾತ್ರೆಗೆ ಅವಕಾಶ ನೀಡದೆ, ನಡೆದುಕೊಂಡು ಹೋಗುವವರನ್ನ ಅಟ್ಟಿಸಿಕೊಂಡು ಅರೆಸ್ಟ್ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಅವ್ರೇ ನೀವು ವಿರೋಧ ಪಕ್ಷದ ನಾಯಕರಾಗಿ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ರಲ್ಲ. ಹೋದ ಕಡೆ ಎಲ್ಲ ಸಮ್ಮೇಳನ ಮಾಡ್ತಾ ಇದ್ರಲ್ಲ. ಅವಾಗ ಬಿಜೆಪಿ ಸರ್ಕಾರ ಇತ್ತಲ್ಲವಾ? ನಾವು ತಡೆಯೊಡ್ಡೀದ್ದೀವಾ? ಇದೇ ರೀತಿ ಅಕ್ರಮಣಕಾರಿಯಾಗಿ ಬಂಧಿಸಿ ಜೈಲಿಗೆ ದಬ್ಬಿದ್ದೇವ? ನೀವು ಕಾನೂನು ಪದವಿಧರರಾಗಿ ತಾಲಿಬಾನ್ ಆಡಳಿತದ ರೀತಿ ವರ್ತಿಸುವುದು ಸರಿ ಅನಿಸುತ್ತ? ಈ ಸರ್ಕಾರ ತಾಲಿಬಾನ್ ರೀತಿಯೇ ಆಡಳಿತ ನಡೆಸ್ತಿದೆ ಅನ್ನೋದು ಜನರಿಗೆ ಅರಿವಾಗಿದೆ ಎಂದು ಕಿಡಿಕಾರಿದರು.