ನಮ್ಮ ಅನುಭವದ ಮೇಲೆ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‌ಗೆ ಹೋಗಬೇಕು ಅಂದುಕೊಂಡಿದ್ದೇವೆ. ಕರ್ನಾಟಕ ಮಾತ್ರವಲ್ಲ, ಬೇರೆ ಬೇರೆ ದೇಶಗಳು ಮೊದಲಿಗೆ ಇವಿಎಂ ಮಷಿನ್‌ಗೆ ಬಂದು ಈಗ ಮತ್ತೆ ಬ್ಯಾಲೆಟ್ ಪೇಪರ್‌ಗೆ ಹೋಗಿವೆ ಎಂದು ತಿಳಿಸಿದರು.

ವಿಜಯಪುರ (ಸೆ.07): ರಾಜಕೀಯ ದುರುದ್ದೇಶದಿಂದ ಬಾನು ಮುಷ್ತಾಕ್‌ ಅವರು ನಾಡಹಬ್ಬ ಉದ್ಘಾಟಿಸುವುದನ್ನು ಬಿಜೆಪಿಯವರು ವಿರೋಧಿಸುತ್ತಿದ್ದಾರೆ. ಸರ್ಕಾರ ರಾಜಕೀಯವಾಗಿಯೇ ಪ್ರತ್ಯುತ್ತರ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಕೃಷ್ಣೆಯ ಜಲಧಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಿಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಾನು ಮುಷ್ತಾಕ್‌ ಅವರು ಕನ್ನಡಾಂಬೆಯ ಬಗ್ಗೆ ಹೀಗಳೆದು ಮಾತನಾಡಿರುವ ಬಗ್ಗೆ ಯಾವ ಪುರಾವೆ ಇಲ್ಲ. ಅವರು ಕನ್ನಡದಲ್ಲಿ ಬರೆದ ಕೃತಿಯ ಅನುವಾದಕ್ಕೆ ಬುಕರ್‌ ಪ್ರಶಸ್ತಿ ಬಂದಿದೆ. ಹೀಗಾಗಿ ಸರ್ಕಾರ ಬಾನು ಮುಷ್ತಾಕ್‌ ಮತ್ತು ಆ ಕೃತಿ ಅನುವಾದಿಸಿದ ದೀಪಾ ಘಸ್ತಿಯವರಿಗೆ ಸನ್ಮಾನಿಸಲಾಗಿದೆ.

ಬಾನು ಮುಷ್ತಾಕ್‌ ಕನ್ನಡ ಸಾಹಿತಿಯಾಗಿರುವುದರಿಂದ ದಸರಾ ಉದ್ಘಾಟಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಬಾನು ಮುಷ್ತಾಕ ವಿಚಾರವಾಗಿ ಮಾಜಿ ಸಂಸದ ಪ್ರತಾಪ ಸಿಂಹ ಕೋರ್ಟ್‌ ಮೆಟ್ಟಿಲೇರಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಈ ಹಿಂದೆ ನಿಸಾರ್ ಅಹಮ್ಮದ ಇದ್ದಾಗ ಯಾಕೆ ಕೋರ್ಟ್‌ಗೆ ಹೋಗಲಿಲ್ಲ? ಹೈದರಾಲಿ ಟಿಪ್ಪು, ಮಿರ್ಜಾ ಇಸ್ಮಾಯಿಲ್ ಮೆರವಣಿಗೆ ಮಾಡಿದಾಗ ಯಾಕೆ ವಿರೋಧ ಮಾಡಲಿಲ್ಲ? ಇದು ಅವರು ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ. ನಾವು ಅದನ್ನು ನ್ಯಾಯಾಲಯದಲ್ಲೇ ಹೋರಾಟ ಮಾಡುತ್ತಿದ್ದೇವೆ. ಬಾನು ಮುಷ್ತಾಕ್ ಅವರು ಕನ್ನಡ ರೈಟರ್. ಕನ್ನಡದಲ್ಲೇ ಎದೆಯ ಹಣತೆ ಬರೆದಿದ್ದಾರೆ. ಅದಕ್ಕೆ ಬೂಕರ್‌ ಅವಾರ್ಡ್ ಕೂಡ ಬಂದಿದೆ ಎಂದರು.

ಸ್ಥಳೀಯ ಚುನಾವಣೆಗಳಲ್ಲಿ ಬ್ಯಾಲೆಟ್‌ ಬಳಕೆ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಅನುಭವದ ಮೇಲೆ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‌ಗೆ ಹೋಗಬೇಕು ಅಂದುಕೊಂಡಿದ್ದೇವೆ. ಕರ್ನಾಟಕ ಮಾತ್ರವಲ್ಲ, ಬೇರೆ ಬೇರೆ ದೇಶಗಳು ಮೊದಲಿಗೆ ಇವಿಎಂ ಮಷಿನ್‌ಗೆ ಬಂದು ಈಗ ಮತ್ತೆ ಬ್ಯಾಲೆಟ್ ಪೇಪರ್‌ಗೆ ಹೋಗಿವೆ ಎಂದು ತಿಳಿಸಿದರು. ಜಲಾಶಯ ತುಂಬಿದ್ದರಿಂದ ಇಂದು ಕೃಷ್ಣೆಗೆ, ಗಂಗಾಪೂಜೆ ಮಾಡಿ ಬಾಗಿನ ಅರ್ಪಿಸಿದ್ದೇವೆ. ನಮ್ಮ ರಾಜ್ಯದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಚನ್ನಾಗಿ ಮಳೆಯಾಗಿದ್ದರಿಂದ ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದು, ಕಬಿನಿ, ಕಾವೇರಿ, ಹೇಮಾವತಿ ಸೇರಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಜಲಾಶಯಗಳು ಭರ್ತಿಯಾಗಿದ್ದರಿಂದ ರೈತರು ಸಂತಸದಿಂದಿದ್ದಾರೆ. ರೈತರು ಖುಷಿಯಾಗಿದ್ದರಿಂದ ಸರ್ಕಾರವೂ ಖುಷಿಯಾಗಿದೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಳ್ಳುವ ವಿಚಾರವಾಗಿ ಮಾತನಾಡಿದ ಅವರು, ರೈತರಿಗೆ ಭೂ ಪರಿಹಾರ ಕೊಡುವ ವಿಚಾರಕ್ಕೆ ಬಾಧಿತ ರೈತರು, ಹೋರಾಟಗಾರರ ಜೊತೆ ಬೆಳಗಾವಿಯಲ್ಲಿ ಸಭೆ ನಡೆಸಿದ್ದೇವೆ. ಅವರೆಲ್ಲರೂ ಒಂದೇಬಾರಿ ಕನ್ಸಂಟ್ ಅವಾರ್ಡ್ ಮಾಡಿ ಎಂದು ತಿಳಿಸಿದ್ದಾರೆ. ಸರ್ಕಾರವೂ ಇದಕ್ಕೆ ಒಪ್ಪಿದೆ ಎಂದರು. ಮೂರು ದಿನಗಳ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ ಸಭೆ ನಡೆಸಿದ್ದು, ಈ ವಿಚಾರ ಒಂದು ಹಂತಕ್ಕೆ ಬಂದಿದೆ. ಮುಂದಿನ ವಾರದಲ್ಲಿ ನಾನು, ಡಿಕೆಶಿ, ಸಚಿವರು, ಶಾಸಕರು ಸೇರಿ ಒಂದು ದರ ನಿಗದಿ ಮಾಡುತ್ತೇವೆ. ಖುಷ್ಕಿ ಜಮೀನು, ನೀರಾವರಿ ಜಮೀನು, ನಾಲಾ‌ ಜಮೀನುಗಳಿಗೆ ಎಷ್ಟೆಷ್ಟು ಪರಿಹಾರ ಕೊಡಬೇಕು ಎಂದು ತೀರ್ಮಾನಿಸುತ್ತೇವೆ. ಇದನ್ನು ರೈತರು ಒಪ್ಪಿಕೊಳ್ಳಬೇಕು. ಯಾರೂ ಕೋರ್ಟ್‌ಗೆ ಹೋಗಬಾರದು. ಕೋರ್ಟ್‌ಗೆ ಹೋಗುವುದರಿಂದ ವಿಳಂಬವಾಗಲಿದೆ ಹೊರತು, ಯಾವ ಕೆಲಸ ಆಗುವುದಿಲ್ಲ ಎಂದು ವಿವರಿಸಿದರು.

ಡ್ಯಾಂ ಅನ್ನು 519.60ಮೀ.ನಿಂದ ಮೂರನೇ ಹಂತದಲ್ಲಿ 524.26 ಮೀಟರ್‌ಗೆ ಎತ್ತರಿಸುವುದರಿಂದ 130 ಟಿಎಂಸಿ ನೀರು ಉಪಯೋಗ ಮಾಡಿಕೊಳ್ಳಲು ಅನುಕೂಲ ಆಗಲಿದೆ. ಇದರಿಂದ 173 ಟಿಎಂಸಿ ನೀರನ್ನು 6.6 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರೊದಗಿಸಬಹುದು. ಕೇಂದ್ರದಿಂದ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ. ಅದು ಆದರೆ ಅನುಕೂಲ ಆಗಲಿದೆ. ನಾನು ಮೂರು ಬಾರಿ ಭೇಟಿ ಮಾಡಿದ್ದು, ಡಿ.ಕೆ.ಶಿವಕುಮಾರ ಅವರು ಐದು ಬಾರಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಆರ್‌.ಬಿ.ತಿಮ್ಮಾಪುರ, ಶಾಸಕರಾದ ಸಿ.ಎಸ್.ನಾಡಗೌಡ, ವಿಜಯಾನಂದ ಕಾಶಪ್ಪನವರ, ಇದ್ದರು.