ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ವಾಲ್ಮೀಕಿ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ. ಈ ಹೇಳಿಕೆಯನ್ನು ಖಂಡಿಸಿ ವಾಲ್ಮೀಕಿ ಸಮಾಜ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
ಬೆಳಗಾವಿ, (ಅ.19): ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಹಿನ್ನೆಲೆ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರಮೇಶ್ ಕತ್ತಿ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು:
ಜಾತಿ ನಿಂದನೆ (ಅಟ್ರಾಸಿಟಿ) ಕಾಯ್ದೆಯಡಿ ಈ ಪ್ರಕರಣ ದಾಖಲಾಗಿದ್ದು, ಸಮಾಜದ ಮುಖಂಡ ರಾಜಶೇಖರ್ ತಳವಾರ್ ನೇತೃತ್ವದಲ್ಲಿ ದೂರು ನೀಡಲಾಗಿದೆ. ಈ ಘಟನೆಯಿಂದಾಗಿ ವಾಲ್ಮೀಕಿ ಸಮಾಜದ ನಾಯಕರು ರಾಜ್ಯಾದ್ಯಂತ ನಾಳೆ (ಅಕ್ಟೋಬರ್ 20) ಹೋರಾಟಕ್ಕೆ ಕರೆ ನೀಡಿದ್ದಾರೆ. ಪ್ರತ್ಯೇಕವಾಗಿ, ಬೆಳಗಾವಿಯಲ್ಲಿ ವಾಲ್ಮೀಕಿ ಸಮಾಜದ ನೇತೃತ್ವದಲ್ಲಿ ಕತ್ತಿ ಅವರ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ.
ರಮೇಶ್ ಕತ್ತಿ ಹೇಳಿದ್ದೇನು?
ಡಿಸಿಸಿ ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿ ರಮೇಶ್ ಕತ್ತಿ ಅವರು ವಾಲ್ಮೀಕಿ ಸಮಾಜದ ಬಗ್ಗೆ ಹಗುರ ಮಾತುಗಳನ್ನು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಸಮಾಜದ ಮುಖಂಡರು ಈ ಹೇಳಿಕೆ ವಾಲ್ಮೀಕಿ ಸಮುದಾಯಕ್ಕೆ ಅವಮಾನ, ಗೌರವಕ್ಕೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ರಮೇಶ್ ಕತ್ತಿ ತಮ್ಮ ಹೇಳಿಕೆಗೆ ಸೃಷ್ಟೀಕರಣ ನೀಡಿದ್ದು, 'ನನ್ನ ಮಾತು ತಿರುಚಲಾಗಿದೆ' ಎಂದು ಬೆಳಗಾವಿಯಲ್ಲಿ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ನಾನು ಬ್ಯಾಡರೋ (ಬೇಡ) ಎಂದಿದ್ದೆ..
ಡಾಲ್ಬಿ ಹಚ್ಚಲು ಅಭಿಮಾನಿಗಳು ಒತ್ತಾಯಿಸಿದಾಗ ನಾನು ಬ್ಯಾಡರೋ (ಬೇಡ) ಎಂದಿದ್ದೆ. ನನ್ನ ಈ ಹೇಳಿಕೆಯನ್ನೇ ನನ್ನ ಗೆಲುವು ಸಹಿಸಲಾಗದ ವಿರೋಧಿಗಳು ತಿರುಚಿದ್ದಾರೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಆದರೂ ವಾಲ್ಮೀಕಿ ಸಮುದಾಯದ ಮುಖಂಡರು. ಇದೀಗ ಅಟ್ರಾಸಿಟಿ ಕೇಸ್ ದಾಖಲು ಆಗಿದ್ದಕ್ಕೆ ಈ ರೀತಿ ಸುಳ್ಳು ಸೃಷ್ಟೀಕರಣ ನೀಡುತ್ತಿದ್ದಾರೆ. ನಾವು ಪ್ರತಿಭಟನೆ ಮಾಡಿಯೇ ಸಿದ್ದ ಎಂದಿದ್ದಾರೆ. ವಾಲ್ಮೀಕಿ ಸಮಾಜದ ನಾಯಕರು ನಾಳೆಯ ಹೋರಾಟದಲ್ಲಿ ಭಾಗವಹಿಸಲು ರಾಜ್ಯಾದ್ಯಂತ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
