ಉಪಮುಖ್ಯಮಂತ್ರಿ ಆಗುತ್ತೀರೋ ಇಲ್ಲ ಜೈಲಿಗೆ ಹೋಗುತ್ತೀರೋ ಎಂದು ನನಗೆ ಯಾವುದೇ ಬಿಜೆಪಿ ನಾಯಕರು ಕರೆ ಮಾಡಿರಲಿಲ್ಲ. ಅಧಿಕಾರಿಯೊಬ್ಬರು ಕರೆ ಮಾಡಿದ್ದು ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಸದನದಲ್ಲಿ ಹೆಸರು ಹೇಳಲು ಸಿದ್ಧ ಎಂದರು.
ಬೆಂಗಳೂರು (ಅ.17): ‘ಉಪಮುಖ್ಯಮಂತ್ರಿ ಆಗುತ್ತೀರೋ ಇಲ್ಲ ಜೈಲಿಗೆ ಹೋಗುತ್ತೀರೋ’ ಎಂದು ನನಗೆ ಯಾವುದೇ ಬಿಜೆಪಿ ನಾಯಕರು ಕರೆ ಮಾಡಿರಲಿಲ್ಲ. ಅಧಿಕಾರಿಯೊಬ್ಬರು ಕರೆ ಮಾಡಿದ್ದು. ಬಿಜೆಪಿಯವರು ಪ್ರಶ್ನಿಸಿದರೆ ಸದನದಲ್ಲಿ ಆ ಅಧಿಕಾರಿಯ ಹೆಸರು ಹೇಳಲು ಸಿದ್ಧನಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಎಂ ಆಗುತ್ತೀರೋ ಅಥವಾ ಜೈಲಿಗೆ ಹೋಗುವಿರೋ ಎನ್ನುವ ಬಿಜೆಪಿಯವರು ಮುಂದಿಟ್ಟಿದ್ದ ಬೇಡಿಕೆ ಬಗ್ಗೆ ಕೇಳಿದಾಗ, ನಾನು ಬಿಜೆಪಿಯವರು ಬೇಡಿಕೆ ಮುಂದಿಟ್ಟಿದ್ದರು ಎಂದು ಹೇಳಿಲ್ಲ. ಅಧಿಕಾರಿ ಹೇಳಿದ್ದು ಎಂದು ಹೇಳಿದ್ದೇನೆ. ನಾನು ಹುದ್ದೆಯ ಸಮೇತ ಆ ಅಧಿಕಾರಿಯ ಬಗ್ಗೆ ಉಲ್ಲೇಖ ಮಾಡಿದ್ದೇನೆ. ಬಿಜೆಪಿ ನಾಯಕರು ಯಾರೂ ನನ್ನನ್ನು ಜೈಲಿಗೆ ಹೋಗು ಎಂದು ಹೇಳಿಲ್ಲ ಎಂದರು.
ಈಗ ಇದರ ಬಗ್ಗೆ ಚರ್ಚೆ ಬೇಡ. ಈಗಾಗಲೇ ಇದೆಲ್ಲಾ ನಡೆದು ಐದು ವರ್ಷಗಳೇ ಕಳೆದಿವೆ. ವಾಪಸ್ ನಮ್ಮ ಪಕ್ಷವೇ ಅಧಿಕಾರಕ್ಕೆ ಬಂದಿದೆ. ಎಲ್ಲರಿಗೂ ತಿಳಿದ ವಿಚಾರವನ್ನೇ ನಾನು ಮತ್ತೊಮ್ಮೆ ಹೇಳಿದ್ದೇನೆ. ಇದರಲ್ಲಿ ಕಟ್ಟುಕತೆ ಏನಿಲ್ಲ. ಅಧಿಕಾರಿಯ ಹೆಸರನ್ನು ಎಲ್ಲೆಂದರಲ್ಲಿ ಹೇಳುವುದಿಲ್ಲ. ಬಿಜೆಪಿಯವರು ಸದನದಲ್ಲಿ ಹೇಳಿ ಎಂದು ಪ್ರಶ್ನಿಸಲಿ ಅಲ್ಲಿ ಹೇಳುತ್ತೇನೆ. ಇದೆಲ್ಲಾ ದಾಖಲೆಗೆ ಹೋಗಬೇಕು. ಹಾಗಾಗಿ ಸದನದಲ್ಲಿ ಬಿಜೆಪಿ ಶಾಸಕರಿಂದಲೇ ಯಾರು ಕರೆದಿದ್ದರು, ಯಾರು ಕರೆ ಮಾಡಿದ್ದರು ಎಂದು ಹೇಳಿಸುತ್ತೇನೆ ಎಂದು ಸವಾಲು ಹಾಕಿದರು.
ರಸ್ತೆ ಗುಂಡಿ ಬಗ್ಗೆ ಕಿರಣ್, ಡಿಕೆಶಿ ಮಧ್ಯೆ ಜಟಾಪಟಿ
ರಾಜಧಾನಿ ರಸ್ತೆ ಗುಂಡಿ, ಕಸ ವಿಲೇವಾರಿ ಸಮಸ್ಯೆ ಬಗ್ಗೆ ಪುನಃ ಉದ್ಯಮಿಗಳು ಹಾಗೂ ಸರ್ಕಾರದ ಜಟಾಪಟಿ ನಡೆದಿದೆ. ಉದ್ಯಮಿ ಕಿರಣ್ ಮಜುಂದಾರ್ ಶಾ ರಸ್ತೆಗುಂಡಿ ಬಗ್ಗೆ ಕಿಡಿಕಾರಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಬೆಂಗಳೂರಲ್ಲಿ ರಸ್ತೆ ಸರಿಯಿಲ್ಲ. ಇಷ್ಟೊಂದು ಕಸ ಏಕಿದೆ? ಚೀನಾದಲ್ಲಿ ಹೀಗಿಲ್ಲ ಎಂದು ಬೆಂಗಳೂರಿಗೆ ಬಂದಿದ್ದ ಉದ್ಯಮಿಯೊಬ್ಬರು ನನಗೆ ಕೇಳಿದರು ಎಂದು ಸರ್ಕಾರವನ್ನು ಪ್ರಶ್ನಿಸಿ ಕಿರಣ್ ಟ್ವೀಟ್ ಮಾಡಿದ್ದರು. ಇದಕ್ಕೆ ಡಿಕೆಶಿ ಪ್ರತಿಕ್ರಿಯಿಸಿ, ಬೆಂಗಳೂರು ಯಶ ಕಂಡಿರುವುದು ಸಾಮೂಹಿಕ ಯತ್ನದಿಂದಲೇ ಹೊರತು ನಿರಂತರ ಟೀಕೆಯಿಂದಲ್ಲ.
ಬೆಂಗಳೂರಲ್ಲಿ ಸವಾಲಿವೆ. ಎದುರಿಸಿ ಕೆಲಸ ಮಾಡುತ್ತ ₹1100 ಕೋಟಿ ಖರ್ಚಲ್ಲಿ 10 ಸಾವಿರ ಗುಂಡಿ ಗುರುತಿಸಿ 5 ಸಾವಿರ ಗುಂಡಿ ಮುಚ್ಚಿಸಿದ್ದೇವೆ. ಬೆಂಗಳೂರನ್ನು ಒಡೆವ ಬದಲು ನಾವೆಲ್ಲ ಒಟ್ಟಾಗಿ ಕಟ್ಟೋಣ’ ಎಂದಿದ್ದಾರೆ. ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ನಮ್ಮನ್ನು ಟೀಕಿಸುವವರು ಬಿಜೆಪಿ ರಾಜ್ಯಗಳ ಬಗ್ಗೆ ಟೀಕಿಸಿದರೆ ಜೈಲು ಸೇರಬೇಕಾದೀತು ಎಂದಿದ್ದಾರೆ
