ಡಿಸಿಎಂ ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿರುವುದಕ್ಕೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾಡಿರುವ ಟೀಕೆ ಸರಿಯಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಮೈಸೂರು (ಆ.26): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ಆರ್‌ಎಸ್ಎಸ್ ಗೀತೆ ಹಾಡಿದರೆ ಅದರ ಅರ್ಥ ಅವರು ಬಿಜೆಪಿ ಪರ ಅಂತಾ ಅಲ್ಲ. ಡಿಸಿಎಂ ಬಗ್ಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾಡಿರುವ ಟೀಕೆ ಸರಿ ಇಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೇರೆ ಪಕ್ಷದ ಸಿದ್ಧಾಂತ ಅರ್ಥ ಮಾಡಿಕೊಂಡರೆ ಅದರಲ್ಲಿ ತಪ್ಪೇನಿದೆ? ಯಾರು ಕೂಡ ತಮ್ಮ ಪಕ್ಷದ ಸಿದ್ಧಾಂತವನ್ನು ಬಲಿ ಕೊಡಲ್ಲ. ಡಿಕೆಶಿ ಬಗ್ಗೆ ರಾಜಣ್ಣ ಮಾಡಿರುವ ಟೀಕೆಯೂ ಸರಿ ಇಲ್ಲ. ರಾಜಣ್ಣ ಈ ರೀತಿ ಮಾತಾಡಿಯೇ ತಮಗೆ ತಾವೇ ನಷ್ಟ ಅನುಭವಿಸಿದ್ದಾರೆ ಎಂದರು.
ಧರ್ಮಸ್ಥಳ ಪ್ರಕರಣದಲ್ಲಿ ರಾಜಕೀಯ ಯಾರು ಮಾಡಬಾರದು. ಮುಸುಕುಧಾರಿಯ ಮಂಪರು ಪರೀಕ್ಷೆ ಅಗತ್ಯವಾಗಿ ಮಾಡಬೇಕು. ಧಾರ್ಮಿಕ ಸಂಸ್ಥೆ ಮೇಲೆ ಆರೋಪದ ಹಿಂದೆ ಯಾರದೋ ಕೈವಾಡವಿದೆ. ಆ ಸಮಾಜಘಾತಕ ಯಾರೇ ಆಗಿರಲಿ ಶಿಕ್ಷೆ ಆಗಬೇಕು ಎಂದು ಹೇಳಿದರು.
ಪ್ರತಾಪ್ ಸಿಂಹಗೆ ತಿರುಗೇಟು:
ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ವಿರೋಧದ ಬಗ್ಗೆ ಮಾತನಾಡಿದ ತನ್ವೀರ್ ಸೇಠ್, ಯದುವಂಶದ ಮಹಾರಾಜರು ಪಟ್ಟದಲ್ಲಿ ಇಲ್ಲದಿದ್ದಾಗ ದಸರಾ ಮುನ್ನಡೆಸಿದ್ದು ಹೈದಾರಲಿ-ಟಿಪ್ಪು. ವ್ಯಕ್ತಿಯ ಸ್ಥಾನಮಾನ ಗುರುತಿಸಿ ದಸರಾ ಉದ್ಘಾಟನೆಗೆ ಕರೆಯುತ್ತೇವೆ. ತಾಯಿ ಚಾಮುಂಡಿಗೆ ಪೂಜೆ ಮಾಡಿಯೇ ದಸರಾ ಮಾಡುತ್ತೇವ. ಟೀಕೆ ಮಾಡುವವರಿಗೆ ತಾಳ್ಮೆ ಇರಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದರು.
