ಸ್ವಾತಂತ್ರ್ಯ ದಿನಾಚರಣೆಯಂದು ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಸ್ಮರಿಸಿ ಭಾವುಕರಾದರು. ಕಾಂಗ್ರೆಸ್ಸಿನಿಂದ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯದ ಬಗ್ಗೆ ವಿವರಿಸಿದರು. 2028 ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ತಂದು ರಾಜ್ಯಕ್ಕೆ ಹೊಸ ರೂಪ ನೀಡುವ ಘೋಷಣೆ ಮಾಡಿದರು.
ಬೆಂಗಳೂರು (ಆ.15): ಗಾಂಧಿಯವರು ಹೇಳಿದಂತೆ ಸ್ವಾತಂತ್ರ್ಯವೆಂದರೆ ಬೆಲೆ ಕಟ್ಟಲಾಗದ ಜೀವನದ ಉಸಿರು. ನಮ್ಮ ನಾಯಕರು ಉಸಿರು ಬಿಗಿಹಿಡಿದು ಹೋರಾಟ ಮಾಡಿದ್ದಾರೆ. ಮೊದಲ ಸ್ವಾತಂತ್ರ್ಯ ಹೋರಾಟ ಕರ್ನಾಟಕದಿಂದಲೇ ಶುರುವಾಯಿತು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ನುಡಿದರು.
ಇಂದು ಕೆಪಿಸಿಸಿ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ತಿಳಿಸಿ ಭಾವುಕರಾದರು.
ದೇಶಕ್ಕೆ ಧ್ವಜವನ್ನ ನೀಡಿದ್ದು ಕಾಂಗ್ರೆಸ್: ಕಾಂಗ್ರೆಸ್ ಪಕ್ಷವೇ ದೇಶಕ್ಕೆ ಧ್ವಜವನ್ನು ನೀಡಿತು. ವೈಯಕ್ತಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯವನ್ನು ಕಾಂಗ್ರೆಸ್ ದೇಶಕ್ಕೆ ಕೊಟ್ಟಿದೆ.ಕಾಂಗ್ರೆಸ್ ಕಾರ್ಯಕರ್ತರಿಗೆ ಐದು ಪ್ರತಿಜ್ಞೆಗಳನ್ನು ಸೂಚಿಸಿದ ಅವರು, ಪ್ರಜಾಪ್ರಭುತ್ವವನ್ನು ಉಳಿಸುತ್ತೇನೆ, ಮತಗಳನ್ನು ಕಾಪಾಡುತ್ತೇನೆ, ಸರ್ವಾಧಿಕಾರವನ್ನು ಹೊಡೆದೋಡಿಸುತ್ತೇವೆ ಎಂದು ಪ್ರಮಾಣ ಮಾಡಿ. ದೇಶದ್ರೋಹಿಗಳು ನಮ್ಮನ್ನು ಟೀಕಿಸುವುದನ್ನು ತಡೆಯಲು ಗಟ್ಟಿಯಾಗಿ ಮಾತಾಡಬೇಕು. ರಾಜಕೀಯ ಮೋಸಗಾರರು ಮತ್ತು ಮತಗಳ್ಳತನದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ತನು-ಮನು-ಧನವನ್ನು ದೇಶಕ್ಕಾಗಿ ಅರ್ಪಿಸಿದೆ. ಕೆಲವರು ಭಾವನೆಗಳ ಮೇಲೆ ರಾಜಕೀಯ ಮಾಡುತ್ತಾರೆ. 2028ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ತಂದು ರಾಜ್ಯಕ್ಕೆ ಹೊಸ ರೂಪ ನೀಡೋಣ ಎಂದು ಡಿಕೆ ಶಿವಕುಮಾರ್ ಘೋಷಿಸಿದರು. ಕಾಂಗ್ರೆಸ್‌ನ ಎರಡೂವರೆ ವರ್ಷಗಳ ಆಡಳಿತವು ಜನತೆಗೆ ವಿಶೇಷ ಸ್ವಾತಂತ್ರ್ಯವನ್ನು ನೀಡಿದೆ ಎಂದು ಒತ್ತಿ ಹೇಳಿದ ಅವರು, ಪ್ರಜಾಪ್ರಭುತ್ವದ ರಕ್ಷಣೆಗೆ ಕಾರ್ಯಕರ್ತರಿಗೆ ಸ್ಫೂರ್ತಿ ನೀಡಿದರು.
