ರಾಜ್ಯ ಸರ್ಕಾರದ ವಿವಿಧ ನಿಗಮಗಳ ಗುತ್ತಿಗೆದಾರರಿಗೆ ಬಾಕಿ ಬಿಲ್‌ಗಳನ್ನು ದಸರಾ ಹಬ್ಬದೊಳಗೆ ಪಾವತಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ₹50 ಲಕ್ಷ ಒಳಗಿನ ಬಿಲ್‌ಗಳಿಗೆ ಆದ್ಯತೆ ನೀಡಲಾಗುವುದು ಮತ್ತು ದೊಡ್ಡ ಯೋಜನೆಗಳಿಗೆ ಭಾಗಶಃ ಪಾವತಿ ಮಾಡಲಾಗುವುದು.

ಬೆಂಗಳೂರು (ಸೆ.08): ರಾಜ್ಯ ಸರ್ಕಾರದ ವಿವಿಧ ನಿಗಮಗಳ ಅಡಿಯಲ್ಲಿ ಕಾರ್ಯನಿರ್ವಹಿಸಿದ ಗುತ್ತಿಗೆದಾರರಿಗೆ ದಸರಾ ಹಬ್ಬದೊಳಗೆ ಬಾಕಿ ಉಳಿಸಿಕೊಂಡಿರುವ ಬಿಲ್‌ಗಳನ್ನು ಪಾವತಿಸುವ ಭರವಸೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದಾರೆ. 3 ವರ್ಷಗಳಿಂದ ಹಣ ಪಾವತಿಯಾಗದೆ ಪರದಾಡುತ್ತಿದ್ದ ಗುತ್ತಿಗೆದಾರರ ಮನವಿಗೆ ಸ್ಪಂದಿಸಿ ಈ ನಿರ್ಧಾರ ಕೈಗೊಂಡಿರುವುದು ಅವರಿಗೆ ದೊಡ್ಡ ನೆಮ್ಮದಿ ತಂದಿದೆ.

ಗುತ್ತಿಗೆದಾರರ ಬೇಡಿಕೆ ಮತ್ತು ಸರ್ಕಾರದ ಪ್ರತಿಕ್ರಿಯೆ

ರಾಜ್ಯ ಗುತ್ತಿಗೆದಾರರ ಸಂಘವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿ, ತಮಗೆ ಪಾವತಿಯಾಗಬೇಕಿದ್ದ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿತ್ತು. ಈ ಮನವಿಯ ಬೆನ್ನಲ್ಲೇ ಡಿಸಿಎಂ ಅವರು ಕಾವೇರಿ ನೀರಾವರಿ ನಿಗಮ, ಕೃಷ್ಣಾ ಬೇಸಿನ್, ಕರ್ನಾಟಕ ನೀರಾವರಿ ನಿಗಮ, ಮತ್ತು ವಿಶ್ವೇಶ್ವರಯ್ಯ ಜಲ ನಿಗಮ (ಭದ್ರಾ)ದ ವ್ಯವಸ್ಥಾಪಕ ನಿರ್ದೇಶಕರುಗಳು ಮತ್ತು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಹಂತ ಹಂತವಾಗಿ ಹಣ ಬಿಡುಗಡೆ:

ಇನ್ನು ಗುತ್ತಿಗೆದಾರರೊಂದಿಗೆ ನಡೆಸಿದ ಚರ್ಚೆಯ ನಂತರ, ಡಿಸಿಎಂ ಡಿ.ಕೆ. ಶಿವಕುಮಾರ್ ಕೆಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದರು:

₹50 ಲಕ್ಷ ಒಳಗಿನ ಬಿಲ್‌ಗಳಿಗೆ ಆದ್ಯತೆ: ಮೊದಲ ಹಂತದಲ್ಲಿ, ₹50 ಲಕ್ಷದೊಳಗಿನ ಕಾಮಗಾರಿಗಳ ಬಾಕಿ ಹಣವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಲಾಗುವುದು. ಈ ನಿರ್ಧಾರದಿಂದ 4 ನಿಗಮಗಳ ಅಡಿಯಲ್ಲಿ ಬರುವ ಸುಮಾರು 10,000 ಗುತ್ತಿಗೆದಾರರಿಗೆ ದಸರಾ ಹಬ್ಬದೊಳಗಾಗಿ ಹಣ ದೊರೆಯಲಿದೆ ಎಂದು ಭರವಸೆ ನೀಡಿದ್ದಾರೆ. ಕೇವಲ ಒಂದು ನೀರಾವರಿ ನಿಗಮದಲ್ಲೇ ಸುಮಾರು 2,500 ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗಬೇಕಿದೆ.

ದೊಡ್ಡ ಯೋಜನೆಗಳಿಗೆ ಭಾಗಶಃ ಪಾವತಿ: ₹1 ಕೋಟಿಯಿಂದ ₹3 ಕೋಟಿವರೆಗಿನ ಕಾಮಗಾರಿಗಳಿಗೆ ಸಂಪೂರ್ಣ ಹಣ ಪಾವತಿಗೆ ಗುತ್ತಿಗೆದಾರರ ಸಂಘ ಬೇಡಿಕೆ ಇಟ್ಟಿತ್ತು. ಆದರೆ, ಸದ್ಯಕ್ಕೆ ಶೇಕಡಾ 25ರಷ್ಟು ಹಣವನ್ನು ಮಾತ್ರ ಬಿಡುಗಡೆ ಮಾಡಲು ಉಪಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ.

ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ 'ಸೆಂಟ್ ಮೇರಿ' ಹೆಸರು ನಾಮಕರಣ; ಸಿಎಂ ಸಿದ್ದರಾಮಯ್ಯ!

ನೀರಾವರಿ ನಿಗಮಗಳಿಂದಲೇ ಒಟ್ಟು ₹12 ಸಾವಿರ ಕೋಟಿಗೂ ಹೆಚ್ಚು ಬಾಕಿ ಬಿಲ್‌ಗಳು ಪಾವತಿಯಾಗಬೇಕಿದೆ. ಸದ್ಯಕ್ಕೆ ಸ್ವಲ್ಪ ಮಟ್ಟದ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ನಿರ್ಧಾರವು ಗುತ್ತಿಗೆದಾರರಿಗೆ ಹಬ್ಬದ ಸಮಯದಲ್ಲಿ ಆರ್ಥಿಕವಾಗಿ ಸ್ವಲ್ಪ ಮಟ್ಟಿನ ನೆರವು ನೀಡಲಿದೆ.

ಗುತ್ತಿಗೆದಾರರ ಸಂಘದ ಪ್ರತಿಕ್ರಿಯೆ:

ಸಭೆಯ ನಂತರ ಮಾತನಾಡಿದ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳ ಮೇಲೆ ತಮಗೆ ಭರವಸೆಯಿದೆ ಎಂದು ಹೇಳಿದರು. 'ನೀರಾವರಿ ಇಲಾಖೆಯ 12 ಸಾವಿರ ಕೋಟಿ ಸೇರಿ, ಒಟ್ಟಾರೆ 8 ಇಲಾಖೆಗಳಿಂದ 32 ಸಾವಿರ ಕೋಟಿ ರೂಪಾಯಿಗಳ ಬಿಲ್ ಬಾಕಿ ಇದೆ. ದಸರಾ ಹಬ್ಬದೊಳಗೆ ಹಣ ಪಾವತಿ ಮಾಡುವುದಾಗಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ, ಇದು ನಮ್ಮಲ್ಲಿ ಸಂತಸ ಮೂಡಿಸಿದೆ' ಎಂದು ತಿಳಿಸಿದರು.