ಯೂಟ್ಯೂಬರ್ ಮುಕಳೆಪ್ಪ ತಮ್ಮ ಅನ್ಯಧರ್ಮದ ಯುವತಿ ಜೊತೆಗಿನ ಮದುವೆ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಪತ್ನಿ ಗಾಯತ್ರಿಯೊಂದಿಗೆ ವಿಡಿಯೋ ಬಿಡುಗಡೆ ಮಾಡಿ, ಇದು 'ಲವ್ ಜಿಹಾದ್' ಅಲ್ಲ, ಪ್ರೀತಿಸಿ ಮಾಡಿಕೊಂಡ ಮದುವೆ ಎಂದಿದ್ದಾರೆ. ನಾವಿಬ್ಬರೂ ನಮ್ಮ ನಮ್ಮ ಧರ್ಮವನ್ನು ಪಾಲಿಸುತ್ತೇವೆ ಎಂದಿದ್ದಾರೆ.

ಧಾರವಾಡ (ಸೆ.24): ಸಾಮಾಜಿಕ ಜಾಲತಾಣಗಳಾದ ಯೂಟೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಕೌಟುಂಬಿಕ ಹಾಸ್ಯ ವೀಡಿಯೊಗಳ ಮೂಲಕ ರಾಜ್ಯಾದ್ಯಂತ ಜನಪ್ರಿಯರಾಗಿರುವ ಯೂಟ್ಯೂಬರ್ ಮುಕಳೆಪ್ಪ, ಅನ್ಯ ಧರ್ಮದ ಯುವತಿ ಜೊತೆಗಿನ ತಮ್ಮ ಮದುವೆ ಕುರಿತು ಎದುರಾಗಿರುವ ವಿವಾದಕ್ಕೆ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ತಾವು ಯಾರನ್ನೂ ಮತಾಂತರ ಮಾಡಿಲ್ಲ, ಇದು ಪ್ರೀತಿಸಿ ಮಾಡಿಕೊಂಡಿರುವ ಮದುವೆ ಎಂದು ಅವರು ತಮ್ಮ ಪತ್ನಿ ಗಾಯತ್ರಿಯೊಂದಿಗೆ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ವೀಡಿಯೊದಲ್ಲಿ ಮಾತನಾಡಿದ ಮುಕಳೆಪ್ಪ, 'ನನ್ನ ಮದುವೆಯನ್ನು ಕೆಲವರು 'ಲವ್ ಜಿಹಾದ್' ಎಂದು ಬಿಂಬಿಸುತ್ತಿದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳು. ನಾವು ಇಬ್ಬರೂ ಪರಸ್ಪರ ಇಷ್ಟಪಟ್ಟು 3 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದೇವೆ' ಎಂದು ಹೇಳಿದ್ದಾರೆ. ಅಲ್ಲದೆ, 'ನಾವಿಬ್ಬರೂ ನಮ್ಮ ನಮ್ಮ ಧರ್ಮವನ್ನು ಪಾಲಿಸುತ್ತೇವೆ. ನಾನು ಹುಟ್ಟಿದ ಧರ್ಮದಲ್ಲೇ ಇರುತ್ತೇನೆ, ನನ್ನ ಪತ್ನಿ ಹುಟ್ಟಿದ ಧರ್ಮದಲ್ಲೇ ಇರುತ್ತಾಳೆ. ನಾವು ಯಾರೂ ಮತಾಂತರಗೊಂಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಕಲಾವಿದರನ್ನು ಜಾತಿ-ಧರ್ಮದ ತಾರತಮ್ಯದಲ್ಲಿ ನೋಡಬೇಡಿ ಎಂದು ಮನವಿ ಮಾಡಿಕೊಂಡಿರುವ ಮುಕಳೆಪ್ಪ, 'ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಅಂದರೆ ನಾನು ಕೂಡ ಕನ್ನಡ ಹಿಂದೂನೇ. ಯಾರೂ ನಮ್ಮ ಬಗ್ಗೆ ಸುಳ್ಳು ವಿಡಿಯೊಗಳನ್ನು ಮಾಡಿ ಕಿರಿಕಿರಿ ಮಾಡಬೇಡಿ. ದಯವಿಟ್ಟು ನಮ್ಮನ್ನು ನೆಮ್ಮದಿಯಿಂದ ಬದುಕಲು ಬಿಡಿ' ಎಂದು ಕೈಮುಗಿದು ಬೇಡಿಕೊಂಡಿದ್ದಾರೆ.

ಮುಕಳೆಪ್ಪ ಅವರ ಹೇಳಿಕೆಗೆ ಧ್ವನಿಗೂಡಿಸಿದ ಅವರ ಪತ್ನಿ ಗಾಯತ್ರಿ, 'ನಾನು ಯಾವಾಗಲೂ ಹಿಂದೂ ಆಗಿಯೇ ಇದ್ದೇನೆ. ನನ್ನ ಗಂಡ ಮುಕಳೆಪ್ಪ ನನ್ನನ್ನು ಬಲವಂತವಾಗಿ ಮತಾಂತರ ಮಾಡಿಸುತ್ತಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು' ಎಂದು ಹೇಳಿದ್ದಾರೆ. 'ಇದನ್ನು ಯಾರೂ ನಂಬಬೇಡಿ. ಮುಕಳೆಪ್ಪನನ್ನು ನೀವು ಇಷ್ಟು ದಿನ ಹೇಗೆ ನೋಡಿಕೊಂಡಿದ್ದೀರೋ, ಅದೇ ರೀತಿ ನೋಡಿ. ನಾವು ಒಪ್ಪಿ ಮದುವೆಯಾಗಿದ್ದೇವೆ, ಯಾರೂ ನಮ್ಮ ಮನಸ್ಸನ್ನು ಬದಲಿಸಿಲ್ಲ. ದಯವಿಟ್ಟು ನಮ್ಮಿಬ್ಬರನ್ನು ಬದುಕಲು ಬಿಡಿ' ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮುಕಳೆಪ್ಪನದು ನಿಯಮ ಬಾಹಿರ ವಿವಾಹ ನೋಂದಣಿ, ಠಾಣೆ ಮೆಟ್ಟಲೇರಿದ ಪತ್ನಿ!

ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದ ಈ ವಿವಾದಕ್ಕೆ ಮುಕಳೆಪ್ಪ ದಂಪತಿಯ ಈ ವೀಡಿಯೊ ಹೇಳಿಕೆಯು ಸ್ಪಷ್ಟನೆ ನೀಡಿದೆ. ಈ ಮೂಲಕ ಬಜರಂಗದಳ, ಶ್ರೀರಾಮ ಸೇನೆಯ ಮುಖಂಡರು ಹಾಗೂ ಕಾರ್ಯಕರ್ತರು ಮಾಡಿದ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ನಾವಿಬ್ಬರೂ ಚೆನ್ನಾಗಿದ್ದೇವೆ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ಗಾಯತ್ರಿ ತಾಯಿ ಶಿವಕ್ಕ ಜಾಲಿಹಾಳ ವಿರೋಧ:

ಮುಕಳೆಪ್ಪ ಅಲಿಯಾಸ್ ಕ್ವಾಜಾನ ಹೆಂಡತಿ ಗಾಯತ್ರಿ ಜಾಲಿಹಾಳ ಅವರನ್ನು ಸದ್ಯಕ್ಕೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಇಲ್ಲಿಗೆ ಮಗಳನ್ನು ನೋಡಲು ಬಂದಿದ್ದ ಗಾಯತ್ರಿಯವರ ತಾಯಿ ಶಿವಕ್ಕ ಜಾಲಿಹಾಳ ಅವರು, ನನ್ನ ಮಗಳ ಮನಸ್ಸನ್ನು ಕೆಡಿಸಿ, ಅವಳ ಬ್ರೈನ್ ವಾಶ್ ಮಾಡಿ ಮದುವೆ ಮಾಡಿಕೊಂಡಿದ್ದಾನೆ. ಮನೆಗೆ ಬಂದು ಅಕ್ಕ, ಅಕ್ಕಾ ರೀಲ್ಸ್ ಮಾಡೋಣ ಬನ್ನಿ ಎಂದು ಕರೆದುಕೊಂಡು ಸುತ್ತಾಡಿ ಇದೀಗ ಮದುವೆ ಮಾಡಿಕೊಂಡಿದ್ದಾನೆ. ಆತ ನನ್ನ ಮಗಳನ್ನು ಮತಾಂತರ ಮಾಡಿದ್ದಾನೆ. ನಾನು ಆತನೊಂದಿಗೆ ಮಗಳನ್ನು ಕಳಿಸುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಇದೀಗ ದಂಪತಿ ಕ್ವಾಜಾ ಮತ್ತು ಗಾಯತ್ರಿ ಅವರು ನಾವಿಬ್ಬರೂ ಯಾವುದೇ ಅನ್ಯ ಧರ್ಮಕ್ಕೆ ಮತಾಂತರವಾಗದೇ ನಮ್ಮ ಧರ್ಮದಲ್ಲಿಯೇ ಮುಂದುವರೆಯುವುದಾಗಿ ಹೇಳಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸುಳ್ಳು ದಾಖಲೆ ನೀಡಿ ಮದುವೆ ಆರೋಪಕ್ಕೆ ಸ್ಪಷ್ಟನೆಯಿಲ್ಲ:

ಇನ್ನು ಮುಕಳೆಪ್ಪ ಸುಳ್ಳು ದಾಖಳೆಗಳನ್ನು ನೀಡಿ, ಅಂದರೆ ಮನೆ ಬಾಡಿಗೆ ಕರಾರು ಹಾಗೂ ಇತರೆ ಸುಳ್ಳು ದಾಖಲೆಗಳನ್ನು ನೀಡಿ ಮುಂಡಗೋಡದಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಸದ್ಯಕ್ಕೆ ಮುಕಳೆಪ್ಪ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರ ವಿಚಾರಣೆ ಬಳಿಕ ಸತ್ಯಾಂಶ ಹೊರಬರಲಿದೆ. ಸುಳ್ಳು ದಾಖಲೆಗಳನ್ನು ನೀಡಿ ಸರ್ಕಾರಕ್ಕೆ ವಂಚನೆ ಮಾಡಿದ್ದಲ್ಲಿ ಸೂಕ್ತ ಶಿಕ್ಷೆಯೂ ಆಗಲಿದೆ.