ಸೌಜನ್ಯ ಕೊಲೆ ಪ್ರಕರಣದಲ್ಲಿ ಹೊಸ ತಿರುವು. ಸಾಮಾಜಿಕ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ, ಸೌಜನ್ಯಳ ಮಾವ ವಿಠಲ ಗೌಡ ಅವರೇ ಕೊಲೆಗಾರ ಎಂದು ಆರೋಪಿಸಿದ್ದಾರೆ. ಲೈಂಗಿಕ ದೌರ್ಜನ್ಯದ ನಂತರ ಕೊಲೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಮರುತನಿಖೆ ಮಾಡಲು ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ (ಸೆ.08): ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ನಡೆದಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಸೌಜನ್ಯಳ ಮಾವ ವಿಠಲ ಗೌಡ ಅವರೇ ಈ ಕೊಲೆಯನ್ನು ಮಾಡಿರಬಹುದು ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.
ಹೊಸ ಬಾಂಬ್ ಸಿಡಿಸಿದ ಸ್ನೇಹಮಯಿ ಕೃಷ್ಣ:
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಈ ಪ್ರಕರಣದ ಬಗ್ಗೆ ತಾವು ಸಂಗ್ರಹಿಸಿದ ಸಾಕ್ಷ್ಯಗಳನ್ನು ಆಧರಿಸಿ ವಿಠಲ ಗೌಡ ಅವರ ವಿರುದ್ಧ ದೂರು ನೀಡುವುದಾಗಿ ತಿಳಿಸಿದರು. 'ಸೌಜನ್ಯ ಮತ್ತು ವಿಠಲ ಗೌಡ ನಡುವೆ ಅಸಭ್ಯ ವರ್ತನೆಗಳ ಬಗ್ಗೆ ನನಗೆ ಮಾಹಿತಿ ಇದೆ. ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದಾಗ ಸೌಜನ್ಯ ಕಿರುಚಿರಬಹುದು ಮತ್ತು ಆಗ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂಬ ಅನುಮಾನವಿದೆ' ಎಂದು ಅವರು ಹೇಳಿದರು.
ಸೌಜನ್ಯಾ ಹತ್ಯೆ ಪ್ರಕರಣ ಕುಟುಂಬಕ್ಕೆ ಮತ್ತೆ ನಿರಾಸೆ, ಮೂರು ಅರ್ಜಿ ವಜಾಗೊಳಿಸಿದ ಹೈಕೋರ್ಟ್!
ಮರು ತನಿಖೆಗೆ ಆಗ್ರಹ:
ಸ್ನೇಹಮಯಿ ಕೃಷ್ಣ ಅವರ ಪ್ರಕಾರ, ವಿಠಲ ಗೌಡ ಸೌಜನ್ಯಳನ್ನು ಬೇರೆಡೆ ಕೊಲೆ ಮಾಡಿ ಆಕೆಯ ದೇಹವನ್ನು ಅಲ್ಲಿ ತಂದು ಎಸೆದಿದ್ದಾರೆ. ಈ ಕೃತ್ಯವನ್ನು ಸಂತೋಷ್ ರಾವ್ ನೋಡಿರಬಹುದು ಮತ್ತು ಅದಕ್ಕಾಗಿಯೇ ಆತನಿಗೆ ಬೆದರಿಕೆ ಹಾಕಿ ಸುಮ್ಮನಿರಿಸಲಾಗಿದೆ. ವಿಠಲ ಗೌಡರ ಮಂಪರು ಪರೀಕ್ಷೆ (ನಾರ್ಕೋ ಅನಾಲಿಸಿಸ್) ನಡೆಸಿದರೆ ಸತ್ಯ ಹೊರಬರಬಹುದು ಎಂದು ಅವರು ಅಭಿಪ್ರಾಯಪಟ್ಟರು. ಈ ಪ್ರಕರಣವನ್ನು ಈವರೆಗೆ ತನಿಖೆ ಮಾಡಿರದ ಹೊಸ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.
ಸಾಕ್ಷ್ಯಗಳ ವಿಶ್ಲೇಷಣೆಗೆ ಮನವಿ:
ಸ್ನೇಹಮಯಿ ಕೃಷ್ಣ ಅವರು ನೀಡಿದ ಮಾಹಿತಿ ಪ್ರಕಾರ, ಕೊಲೆ ನಡೆದಾಗ ಸೌಜನ್ಯಳ ಬೆನ್ನಿನಲ್ಲಿ ಬ್ಯಾಗ್ ಇತ್ತು. ಇದು ಬೇರೆಯವರು ಅತ್ಯಾಚಾ*ರ ಮತ್ತು ಕೊಲೆ ಮಾಡಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ಕೊಲೆ ನಡೆದ ದಿನ ವಿಠಲ ಗೌಡ ಅವರು ತಮ್ಮ ಹೋಟೆಲ್ ಕೆಲಸಕ್ಕೆ ರಜೆ ಹಾಕಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಎಲ್ಲ ಸಾಂದರ್ಭಿಕ ಸಾಕ್ಷ್ಯಗಳನ್ನು ಸಮಗ್ರವಾಗಿ ವಿಶ್ಲೇಷಿಸಿ ಮರು ತನಿಖೆ ನಡೆಸಬೇಕು ಎಂದು ಅವರು ಎಸ್ಪಿ ಅವರಿಗೆ ಮನವಿ ಮಾಡಿದ್ದಾರೆ.
ಪ್ರಕರಣದ ಮರು ತನಿಖೆಗೆ ನ್ಯಾಯಾಲಯದಿಂದ ಸೂಕ್ತ ಸೂಚನೆ ಪಡೆದು, ಇತ್ತೀಚೆಗೆ ಬಂದಿರುವ ಎಲ್ಲ ಹೊಸ ಮಾಹಿತಿಗಳನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ. ಇದು ಸೌಜನ್ಯ ಪ್ರಕರಣಕ್ಕೆ ಮತ್ತೊಂದು ಹೊಸ ತಿರುವು ನೀಡಿದ್ದು, ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.
